ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ನಿರ್ಲಕ್ಷ್ಯ; ಅಭಿಮಾನಿಗಳ ಪ್ರತಿಭಟನೆ

ಡಾ. ವಿಷ್ಣುವರ್ಧನ್ ಅಪಾರ ಅಭಿಮಾನಿವೃಂದವನ್ನು ಅಗಲಿ 14 ವರ್ಷ ಕಳೆದರೂ, ಅವರ ಸ್ಮಾರಕ ಅಭಿವೃದ್ಧಿಗೆ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ತಳೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.;

Update: 2024-02-05 06:30 GMT

ಕನ್ನಡದ ಜನಪ್ರಿಯ ನಟ, ವಿಷ್ಣುವರ್ಧನ್ ಡಿಸೆಂಬರ್ 30ಕ್ಕೆ ಹದಿನಾಲ್ಕು ವರ್ಷ ತುಂಬುತ್ತದೆ. ಆದರೆ ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳವನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಕರ್ನಾಟಕ ಸರ್ಕಾರ ಇದುವರೆಗೆ ಆಸಕ್ತಿ ತೋರಿಸಿಲ್ಲ. ಕಳೆದ 14 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್, ಜನತಾ ದಳ (ಜಾತ್ಯಾತೀತ), ಹಾಗೂ ಬಿಜೆಪಿ ಸರ್ಕಾರಗಳ ನಿರಾಸಕ್ತಿಯ ಬಗ್ಗೆ ವಿಷ್ಣುವರ್ಧನ್ ಅಭಿಮಾನಿಗಳಿಗೆ ತೀವ್ರ ಅಸಮಾಧಾನವಿದೆ. ಇಷ್ಟು ವರ್ಷಗಳಿಂದ ಮಾಡಿರುವ ಮನವಿಗಳು ವಿಫಲವಾಗಿರುವ್ಯದರಿಂದ ರಾಜ್ಯದಾದ್ಯಂತ ಇರುವ ವಿಷ್ಣುವರ್ಧನ್ ಅಭಿಮಾನಿ ಸಂಘಟನೆಗಳು ಈಗ ಮುನಿದೆದ್ದಿವೆ. ಅಂತಿಮವಾಗಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸ, ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಟನೆಗಳ ಒಕ್ಕೂಟ ಬೃಹದ್ ಪ್ರತಿಭಟನೆ ಹಮ್ಮಿಕೊಂಡಿದೆ.

ದೆಹಲಿ ತಲುಪಲಿರುವ ಹೋರಾಟ

ಈ ಪ್ರತಿಭಟನೆಯ ಸ್ಥಳ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನ. ಪ್ರತಿಭಟನೆ ಬೆಳಿಗ್ಗೆ 10ರಿಂದ ಸಂಜೆ 6 ವರೆಗೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ ಇರುವ ವಿಷ್ಣುವರ್ಧನ್ ಅಭಿಮಾನಿಗಳು ಭಾಗವಹಿಸಲಿದ್ದಾರೆ.

ಸಾಹಸ ಸಿಂಹ

ವಿಷ್ಣುವರ್ಧನ್ ಅವರನ್ನು ಭಾರತೀಯ ಸಿನಿಮಾರಂಗದಲ್ಲಿ ಫೀನಿಕ್ಸ್‌ಗೆ ಹೋಲಿಸಲಾಗುತ್ತದೆ. ಬದುಕಿದ್ದರೆ ಕಳೆದ ಸೆಪ್ಟೆಂಬರ್ 18ಕ್ಕೆ ಅವರಿಗೆ ಎಪ್ಪತ್ಮೂರು ವರ್ಷವಾಗಿರುತ್ತಿತ್ತು. ಆದರೆ 14 ವರ್ಷಗಳ ಹಿಂದೆ ಅವರನ್ನು ವಿಧಿ ವಂಚಿಸಿತು. ಅರವತ್ತರ ಗಡಿದಾಟುವ ಹಂತದಲ್ಲಿದ್ದಾಗಲೇ ಜವರಾಯ ಒಳ್ಳೊಳ್ಳೆ ಮರವನ್ನು ಕಡೆದೊಯ್ಯುವಂತೆ ವಿಷ್ಣುವರ್ಧನ್ ಅವರನ್ನು ಅವರ ಬಂಧು, ಬಳಗ, ಗೆಳೆಯರು, ಅಪಾರ ಸಂಖ್ಯೆಯ ಅಭಿಮಾನಿಗಳಿಂದ ದೂರಮಾಡಿ ಕೊಂಡೊಯ್ದ. 2008ನೇ ಇಸುವಿಯಲ್ಲಿ ಪ್ರಮುಖ ವಾಣಿಜ್ಯ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಅತಿ ಮುಖ್ಯ ತಾರಾ ನಟ. ಕನ್ನಡವೂ ಸೇರಿದಂತೆ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಭಾಷೆಗಳ ಒಟ್ಟು 220 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಖ್ಯಾತಿ ವಿಷ್ಣವರ್ಧನ್ ಅವರದು. ಕರ್ನಾಟಕ ಸರ್ಕಾರ ಕೊಡಮಾಡುವ ಡಾ. ರಾಜ್ ಕುಮಾರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಚಿತ್ರರಂಗದ ಹಲವಾರು ಪ್ರಶಸ್ತಿಗಳಿಗೆ ವಿಷ್ಣುವರ್ಧನ್ ಪಾತ್ರರಾಗಿದ್ದಾರೆ. ಅಭಿಮಾನಿಗಳಿಂದ ಇವರಿಗೆ ಸಾಹಸ ಸಿಂಹ ಎಂಬ ಬಿರುದು ಕೂಡ ಲಭ್ಯವಾಗಿದೆ.

ಅಭಿಮಾನ ಶೂನ್ಯತೆ

ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಕೆಂಗೇರಿ ಬಳಿಯ ಅಭಿಮಾನ್ ಸ್ಟೂಡಿಯೋದಲ್ಲಿ ಮಾಡಲಾಗಿತ್ತು. ಅಂತ್ಯಕ್ರಿಯೆ ನಡೆದ ಸ್ಥಳ ಕನ್ನಡ ಚಿತ್ರರಂಗದ ಬುನಾದಿ ಸ್ತಂಭಗಳಲ್ಲಿ ಒಬ್ಬರಾದ ದಿ. ಬಾಲಕೃಷ್ಣ ಅವರು ಕನ್ನಡಿಗರ ಅಭಿಮಾನಿಗಳ ಪ್ರತೀಕವಾದ ಅಭಿಮಾನ್ ಸ್ಟೂಡಿಯೋ. ಕನ್ನಡಿಗರು ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಅಂದಿನ ಮದರಾಸಿಗೆ ಹೋಗುವುದನ್ನು ತಪ್ಪಿಸಲು, ಕನ್ನಡಿಗರ ಆತ್ಮಾಭಿಮಾನದ ಪ್ರತೀಕವಾಗಿ ಅಭಿಮಾನ್ ಸ್ಟೂಡಿಯೋ ಆರಂಭವಾಯಿತು. ಆದರೆ ಇಂದು ಈ ಅಭಿಮಾನ್ ಸ್ಟೂಡಿಯೋ ಕನ್ನಡಿಗರ ಅಭಿಮಾನ ಶೂನ್ಯತೆಗೆ ನಿದರ್ಶನವಾಗಿ ಹಾಳು ಸುರಿಯುತ್ತಿದೆ. ಇಂಥ ಜಾಗದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಇದೆ.

ಆ ಕಾಲಕ್ಕೆ ಬಾಲಕೃಷ್ಣ (ಕನ್ನಡಿಗರಿಗೆ ಅಭಿಮಾನದ ಬಾಲಣ್ಣ) ಸರ್ಕಾರದಿಂದ 20 ಎಕರೆ ಜಾಗವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ನಿರ್ಮಿಸಿದ ಸ್ಟೂಡಿಯೋ ಈ ಅಭಿಮಾನ್ ಸ್ಟೂಡಿಯೋ. ಆದರೆ ಅವರ ಮಕ್ಕಳು ಈ ಜಾಗವನ್ನು ದುರುಪಯೋಗಪಡಿಸಿಕೊಂಡು 20 ಎಕರೆ ಪ್ರದೇಶದಲ್ಲಿ 10 ಎಕರೆಯನ್ನು ಮಾರಾಟ ಮಾಡಿದ್ದರು. ಈ ಕಾರಣದಿಂದ ಅಂದಿನ ಜಿಲ್ಲಾಡಳಿತ ಅಭಿಮಾನ್ ಸ್ಟೂಡಿಯೋ ಮುಟ್ಟುಗೋಲಿಗೆ ಆದೇಶಿಸಿದ್ದರು. ಮಕ್ಕಳು ಈ ಆದೇಶಕ್ಕೆ ತಡೆಯಾಜ್ಞೆ ತಂದರು.

ಈ ನಡುವೆ ವಿಷ್ಣುವರ್ಧನ್ ಕುಟುಂಬದವರ ಆಸಕ್ತಿಯಿಂದಾಗಿ ವಿಷ್ಣುವರ್ಧನ್ ಸಮಾಧಿ ಮೈಸೂರಿಗೆ ಸ್ಥಳಾಂತರಗೊಂಡಿತು. ಇದಕ್ಕೆ ಕಾರಣ, ಮೈಸೂರು ವಿಷ್ಣುವರ್ಧನ್ ಅವರ ಹುಟ್ಟೂರು ಎಂಬುದು. ಆದರೆ ಈ ಬೆಳವಣಿಗೆ ವಿಷ್ಣುವರ್ಧನ್ ಅಭಿಮಾನಿಗಳಿಗೆ ಅಪಾರ ನೋವು ತಂದಿತು. ಅವರು ಹಠ ಬಿಡದೆ ಪ್ರತಿವರ್ಷ, ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅಭಿಮಾನ್ ಸ್ಟೂಡಿಯೋದ ಪುಣ್ಯಭೂಮಿಯಲ್ಲಿಯೇ ಆಚರಿಸುತ್ತಿದ್ದಾರೆ. ಆದರೆ ಸ್ಟೂಡಿಯೋದ ಮಾಲೀಕರು, ವಿಷ್ಣುವರ್ಧನ್ ಅಭಿಮಾನಿಗಳ ಪ್ರವೇಶಕ್ಕೆ ತಡೆಯೊಡ್ಡುತ್ತಿದ್ದಾರೆ. ಈ ಕುರಿತು ವಿಷ್ಣುವರ್ಧನ್ ಅಭಿಮಾನಿಗಳು ಬೆಂಗಳೂರು ಸಚಿವ ಡಿ,ಕೆ. ಶಿವಕುಮಾರ್ ಅವರಿಗೆ ದೂರೊಂದನ್ನು ಸಲ್ಲಿಸಿದ್ದಾರೆ. ಕನ್ನಡದ ನಟನಿಗೆ ಸ್ಮಾರಕ-ಪುಣ್ಯಭೂಮಿ ಮಾಡುವುದು ಒಂದು ವೇಳೆ ಸರ್ಕಾರಕ್ಕೆ ಕಷ್ಟವಾದರೆ, ಸ್ಥಳದ ಅಭಿವೃದ್ಧಿಗೆ ಬೇಕಿರುವ ಆರ್ಥಿಕ ಬೆಂಬಲವನ್ನು ತಾವೇ ನೀಡುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.

ಈ ಪ್ರತಿಭಟನೆಗೆ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಟನೆಗಳ ಒಕ್ಕೂಟಕ್ಕೆ ಬೆಂಬಲವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘಗಳು ಸೇರಿದಂತೆ ಚಿತ್ರೋದ್ಯಮದ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ ಎನ್ನುತ್ತಾರೆ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಟನೆಗಳ ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ್.

ಒಂದುವೇಳೆ ಈ ಪ್ರತಿಭಟನೆಗೂ ಸರ್ಕಾರ ಸ್ಪಂದಿಸದೇ ಹೋದಲ್ಲಿ, ಈ ಹೋರಾಟವನ್ನು ದೆಹಲಿಯ ಮಟ್ಟಕ್ಕೆ ಕೊಂಡೊಯ್ಯುವುದಾಗಿ ಶ್ರೀನಿವಾಸ್ ಹೇಳುತ್ತಾರೆ. ಅಷ್ಟೇ ಅಲ್ಲ. ಕರ್ನಾಟಕ ಸರ್ಕಾರದ ಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿದ್ದಾರೆ.

Tags:    

Similar News