‘ಮಾರ್ಟಿನ್’ ನಂತರ ʼದುಬಾರಿʼಗೆ ಧ್ರುವ ಫ್ರೀ ಕಾಲ್‍ಶೀಟ್‍?

ಉದಯ್‍ ಮೆಹ್ತಾಗೆ ದೊಡ್ಡ ನಷ್ಟವನ್ನು ತಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದಯ್‍ ಮೆಹ್ತಾಗೆ ಧ್ರುವ ಸರ್ಜಾ ಫ್ರೀ ಕಾಲ್‍ಶೀಟ್‍ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.;

Update: 2024-12-03 11:11 GMT
ದ್ರುವಾ ಸರ್ಜಾ
Click the Play button to listen to article

ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’ ಕೆಲವು ದಿನಗಳ ಹಿಂದೆ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿ ಗಣನೀಯ ಸೋಲು ಕಂಡಿದೆ. 100 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರವು ಉದಯ್‍ ಮೆಹ್ತಾಗೆ ದೊಡ್ಡ ನಷ್ಟವನ್ನು ತಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದಯ್‍ ಮೆಹ್ತಾಗೆ ಧ್ರುವ ಸರ್ಜಾ ಫ್ರೀ ಕಾಲ್‍ಶೀಟ್‍ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ‘ಮಾರ್ಟಿನ್‍ ಚಿತ್ರದಲ್ಲಿ ಉದಯ್‍ ಮೆಹ್ತಾಗೆ ಆಗಿರುವ ನಷ್ಟವನ್ನು ಭರಿಸುವುದಕ್ಕೆ ಧ್ರುವ ಇನ್ನೊಂದು ಚಿತ್ರವನ್ನು ಮಾಡಿಕೊಡುವುದಾಗಿ ಹೇಳಿದ್ದಾರಂತೆ. ಈ ಬಾರಿ ಅವರು ಯಾವುದೇ ಸಂಭಾವನೆಯನ್ನು ಪಡೆಯದೆ, ಚಿತ್ರಕ್ಕೆ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಈ ಕುರಿತು ಧ್ರುವ ಆಗಲೀ, ಉದಯ್‍ ಮೆಹ್ತಾ ಆಗಲೀ ಎಲ್ಲೂ ಹೇಳಿಕೊಂಡಿಲ್ಲ. ಇದರ ಮಧ್ಯೆ, ಅದು ಹೊಸ ಸಿನಿಮಾ ಅಲ್ಲ, ಈ ಹಿಂದೆ ಶುರುವಾದ ಚಿತ್ರವೇ ಮತ್ತೆ ಶುರುವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಧ್ರುವ ಜೊತೆಗೆ ಎರಡು ಸಿನಿಮಾಗಳನ್ನು ಮಾಡುವ ಒಪ್ಪಂದವನ್ನು ಮೊದಲೇ ಮಾಡಿಕೊಂಡಿದ್ದರಂತೆ ಉದಯ್‍ ಮೆಹ್ತಾ. ಅದರಂತೆ ಸದ್ಯ ‘ಮಾರ್ಟಿನ್‍’ ಬಿಡುಗಡೆಯಾಗಿದೆ. ಇನ್ನೊಂದು ಚಿತ್ರ ‘ದುಬಾರಿ’ ಬರುತ್ತದೆ. ಯಾವಾಗ, ಏನು ಎಂಬುದನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದು ಉದಯ್‍ ಮೆಹ್ತಾ ಹೇಳಿಕೊಂಡಿದ್ದಾರೆ.

‘ಮಾರ್ಟಿನ್‍’ಗೂ ಮೊದಲೇ ಧ್ರುವ ಸರ್ಜಾ ಜೊತೆಗೆ ಚಿತ್ರವನ್ನು ಉದಯ್‍ ಮೆಹ್ತಾ ಘೋಷಿಸಿದ್ದರು. ಈ ಚಿತ್ರಕ್ಕೆ ‘ದುಬಾರಿ’ ಎಂಬ ಹೆಸರಿಡುವುದರ ಜೊತೆಗೆ, ಚಿತ್ರದ ಮುಹೂರ್ತವೂ ಆಗಿತ್ತು. ‘ಪೊಗರು’ ಚಿತ್ರವನ್ನು ನಿರ್ದೇಶಿಸಿದ್ದ ನಂದಕಿಶೋರ್ ಅವರೇ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರವು ಹಿಂದಕ್ಕೆ ಸರಿದು, ಅದರ ಬದಲು ‘ಮಾರ್ಟಿನ್‍’ ಶುರುವಾಗಿತ್ತು. ಈಗ ‘ಮಾರ್ಟಿನ್‍’ ಸೋತ ಹಿನ್ನೆಲೆಯಲ್ಲಿ ಧ್ರುವ ಅಭಿನಯದಲ್ಲಿ ಮತ್ತೆ ‘ದುಬಾರಿ’ ಚಿತ್ರವನ್ನು ಮೆಹ್ತಾ ಕೈಗೆತ್ತಿಕೊಳ್ಳುವುದರ ಮಾಹಿತಿ ಇದೆ.

ಆದರೆ, ಈ ಚಿತ್ರ ಯಾವಾಗ ಶುರು ಎಂಬುದರ ಕುರಿತಾಗಿ ಖಚಿತ ಮಾಹಿತಿ ಇಲ್ಲ. ನಂದಿಕಿಶೋರ್ ಸದ್ಯ ‘ಋಷಭ’ ಎಂಬ ಪ್ಯಾನ್‍ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನೊಂದು ಕಡೆ ಧ್ರುವ ಸರ್ಜಾ, ‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್‍’ ಚಿತ್ರವನ್ನೇ ಇನ್ನೂ ಮುಗಿಸಿಲ್ಲ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದರು. ಆದರೆ, ನವೆಂಬರ್ ಕೊನೆಯವರೆಗೂ ‘ಕೆಡಿ’ ಚಿತ್ರದ ಚಿತ್ರೀಕರಣವೇ ಮುಗಿದಿರಲಿಲ್ಲ. ನವೆಂಬರ್ ಕೊನೆಯಲ್ಲೂ ಈ ಚಿತ್ರದ ಹಾಡಿನ ಚಿತ್ರೀಕರಣವನ್ನು ಪ್ರೇಮ್ ಮಾಡುತ್ತಲೇ ಇದ್ದರು. ಮೂಲಗಳ ಪ್ರಕಾರ, ಈ ಚಿತ್ರವು ಮುಂಬರುವ ಯುಗಾದಿ ಸಮಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಬಿಡುಗಡೆಯ ನಂತರ ಧ್ರುವ, ಉದಯ್‍ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ.

Tags:    

Similar News