'ರಾಂಝನಾ' ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ; 'ಇದು ಚಿತ್ರದ ಆತ್ಮವನ್ನೇ ಕಸಿದುಕೊಂಡಿದೆ' ಎಂದ ನಟ ಧನುಷ್‌

12 ವರ್ಷಗಳ ಹಿಂದೆ ನಾನು ಪ್ರಾಮಾಣಿಕವಾಗಿ ಶ್ರಮಿಸಿದ ಈ ಚಿತ್ರ ಈಗ ತನ್ನ ಆತ್ಮವನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಧನುಷ್‌ ಬೇಸರ ವ್ಯಕ್ತಪಡಿಸಿದ್ದಾರೆ.;

Update: 2025-08-04 13:53 GMT

ರಾಂಝಾನಾ

ದಕ್ಷಿಣದ ಸೂಪರ್‌ಸ್ಟಾರ್ ಧನುಷ್ ಹಾಗೂ ಬಾಲಿವುಡ್ ನಟಿ ಸೋನಮ್ ಕಪೂರ್ ಅಭಿನಯಿಸಿದ 2013ರ ಹಿಟ್ ಸಿನಿಮಾ ‘ರಾಂಝಾನಾ’ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕಾರಣ ಚಿತ್ರದ ಮರು ಬಿಡುಗಡೆಯಲ್ಲ, ಬದಲಾಗಿ ಅದರ ಬದಲಾದ ಕ್ಲೈಮ್ಯಾಕ್ಸ್.

ಇತ್ತೀಚೆಗೆ ಈ ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು. ಆದರೆ  AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕ್ಲೈಮ್ಯಾಕ್ಸ್ ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಈ ಕಾರಣಕ್ಕಾಗಿ ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ಮತ್ತು ನಾಯಕ ನಟ ಧನುಷ್ ಇಬ್ಬರೂ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

AI ಕ್ಲೈಮ್ಯಾಕ್ಸ್: ಧನುಷ್ ಆಕ್ರೋಶ

ನಟ ಧನುಷ್ ಈ ಹೊಸ ಮರು-ಬಿಡುಗಡೆಯ ಕುರಿತು ತಮ್ಮ ಅಸಮಾಧಾನವನ್ನು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದಾರೆ. ಮರು ಬಿಡುಗಡೆ ಮಾಡಿದ ʻರಾಂಝಾನಾʼ ದ ಕ್ಲೈಮ್ಯಾಕ್ಸ್ ಅನ್ನು AI ಮೂಲಕ ಬದಲಾಯಿಸಿರುವುದು ನನಗೆ ತುಂಬಾ ಬೇಸರ ತಂದಿದೆ. 12 ವರ್ಷಗಳ ಹಿಂದೆ ನಾನು ಪ್ರಾಮಾಣಿಕವಾಗಿ ಶ್ರಮಿಸಿದ ಈ ಚಿತ್ರ ಈಗ ತನ್ನ ಆತ್ಮವನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಅವರು ಬರೆದಿದ್ದಾರೆ.

ನಾನೇಕೆ ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದರೂ ಮರು ಬಿಡುಗಡೆಗೆ ಮುಂದಾಗಿರುವುದು ಬೇಸರದ ಸಂಗತಿ. ಚಿತ್ರವೊಂದರ ಪರಂಪರೆ, ಅದರ ನಿಜವಾದ ಅರ್ಥ ಹೀಗೆ ಬದಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ಕೂಡ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಶ್ರಮ ಮತ್ತು ಕಲೆಗಿಂತ AI ಗೆ ಹೆಚ್ಚಿನ ಆದ್ಯತೆ ನೀಡುವುದು ಅಸಹನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಗಲ್ಲಾಪಟ್ಟಿಯಲ್ಲಿ ಹಿಟ್‌ ಆಗಿದ್ದ ‘ರಾಂಝಾನಾ’

‘ರಾಂಝಾನಾ’ ಚಿತ್ರವನ್ನು 2013ರಲ್ಲಿ 36 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ 60 ಕೋಟಿಗೂ ಅಧಿಕ ಹಣ ಬಾಚಿಕೊಂಡಿತ್ತು. ಜಾಗತಿಕ ಮಟ್ಟದಲ್ಲಿ ಈ ಸಿನಿಮಾವು ಸುಮಾರು 90 ಕೋಟಿ ರೂಪಾಯಿ ಗಳಿಸಿದರೂ, ಇದೀಗ ಅದರ ಮರು ಆವೃತ್ತಿಯ ಬದಲಾವಣೆಯು ಕಲಾವಿದರು ಹಾಗೂ ಚಿತ್ರ ತಂಡದವರಲ್ಲಿ ಆಕ್ರೋಶ ಹುಟ್ಟಿಸಿದೆ.

ಆನಂದ್ ಎಲ್ ರೈ ನಿರ್ದೇಶನದ ಈ ಸಿನಿಮಾದಲ್ಲಿ  ಕುಂದನ್ (ಧನುಷ್) ಎಂಬ ಹಿಂದೂ ಹುಡುಗನ ಮೇಲೆ ಆಧಾರಿತವಾಗಿದ್ದು, ಜೋಯಾ (ಸೋನಮ್ ಕಪೂರ್) ಎಂಬ ಮುಸ್ಲಿಂ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಈ ಚಿತ್ರವು ಪ್ರೀತಿ ಮತ್ತು ರಾಜಕೀಯದಂತಹ ಸೂಕ್ಷ್ಮ ವಿಷಯಗಳನ್ನು ಭಾವನಾತ್ಮಕ ರೀತಿಯಲ್ಲಿ ಹಣೆಯಲ್ಪಟ್ಟಿದ್ದರಿಂದ ಇದು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಹೆಚ್ಚು ಮೆಚ್ಚುಗೆ ಪಡೆದಿತ್ತು. ಧನುಷ್, ಸೋನಮ್ ಕಪೂರ್ ಮತ್ತು ಅಭಯ್ ಡಿಯೋಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 

Tags:    

Similar News