ಡಿ.ಬಾಸ್ ದರ್ಶನ್ ಹುಟ್ಟುಹಬ್ಬ: ದಿನಸಿನೊಂದಿಗೆ ಜಮಾಯಿಸಿದ ಫ್ಯಾನ್ಸ್ ಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಮಧ್ಯರಾತ್ರಿಯೇ ಫ್ಯಾನ್ಸ್ ಆರ್ಆರ್ ನಗರದ ದರ್ಶನ್ ಮನೆ ಬಳಿ ಸಮೀಪ ಜಮಾಯಿಸಿ ನಟನಿಗೆ ಶುಭಾಶಯ ಕೋರುತ್ತಿದ್ದಾರೆ.;
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 47ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ನಟನ ಕಾಮನ್ ಡಿಪಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ಫ್ಯಾನ್ಸ್ ತಮ್ಮ ಸೋಶಿಯಲ್ ಮಿಡಿಯಾಗಳಲ್ಲಿ ಕಾಮನ್ ಡಿಪಿ ಹಂಚಿಕೊಂಡು ಸಂತಸ ಪಡುತ್ತಿದ್ದಾರೆ. ದರ್ಶನ್ ಹೆಸರಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳು ಕೂಡ ನಡೆಯುತ್ತಿದ್ದು, ಮಧ್ಯರಾತ್ರಿಯೇ ಫ್ಯಾನ್ಸ್ ಆರ್ಆರ್ ನಗರದ ದರ್ಶನ್ ಮನೆ ಬಳಿ ಸಮೀಪ ಜಮಾಯಿಸಿ ನಟನಿಗೆ ಶುಭಾಶಯ ಕೋರುತ್ತಿದ್ದಾರೆ.
1997ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಮಹಾಭಾರತ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೆಜೆಸ್ಟಿಕ್ ಚಿತ್ರದ ಮೂಲಕ ಮೊದಲ ಬಾರಿ ಹೀರೋ ಆಗಿ ಕಾಣಿಸಿಕೊಂಡ ದರ್ಶನ್ ತಮ್ಮ ಮೊದಲ ಸಿನಿಮಾದಲ್ಲೇ ದೊಡ್ಡ ಗೆಲುವು ಪಡೆದುಕೊಂಡರು. ಕರಿಯ, ನಮ್ಮ ಪ್ರೀತಿಯ ರಾಮು, ಕಲಾಸಿಪಾಲ್ಯ, ಗಜ ಸೇರಿದಂತೆ ಅನೇಕ ಹಿಟ್ ಸಿನಿಮಾ ನೀಡಿದ ಕೊಡುಗೆ ಈ ನಟನಿಗಿದೆ.
ಇತ್ತೀಚೆಗೆ ತೆರೆಕಂಡ ಕಾಟೇರ ಸಿನಿಮಾ 200 ಕೋಟಿ ರೂ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿಕೊಂಡಿದ್ದು, ಇದರಿಂದ ದರ್ಶನ್ ಖ್ಯಾತಿ ಇನ್ನು ಹೆಚ್ಚಾಗಿದೆ. ಕಾಟೇರ ಚಿತ್ರತಂಡ ಕೂಡ ದರ್ಶನ್ ಹುಟ್ಟುಹಬ್ಬದ ಸಂತಸವನ್ನು ಹೆಚ್ಚಿಸಿದೆ.
ಇನ್ನು ದರ್ಶನ್ ಹುಟ್ಟುಹಬ್ಬಕ್ಕೆ ಅವರ ಮುಂದಿನ ಸಿನಿಮಾ ಡೆವಿಲ್ ಚಿತ್ರದ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದೆ. ಚಿತ್ರದ ಟೀಸರ್ ಮಧ್ಯರಾತ್ರಿ ಈ ರಿಲೀಸ್ ಆಗಿದ್ದು, ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಅಕ್ಕಿ ಮೂಟೆ, ದವಸ ಧಾನ್ಯಗಳನ್ನು ಹೊತ್ತು ತಂದ ಫ್ಯಾನ್ಸ್
ಅಭಿಮಾನಿಗಳು ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟನ ಬರ್ಥಡೇ ಗೆ ಕೇಕ್ ಹಿಡಿದು ಬರುತ್ತಾರೆ. ಆದರೆ ದರ್ಶನ್ ಬರ್ಥಡೇ ಗೆ ಅವರ ಫ್ಯಾನ್ಸ್‌ಗಳು ಅಕ್ಕಿ, ದವಸ ಧಾನ್ಯ ಮುಂತಾದವುಗಳೊಂದಿಗೆ ಬಂದಿದ್ದಾರೆ. ಅಭಿಮಾನಿಗಳು ತರುವ ಸಾಕಷ್ಟು ಕೇಕ್‌ಗಳನ್ನು ತಿನ್ನಲು ಆಗದೆ ಹಾಳಾಗಿ ಹೋಗುತ್ತವೆ. ಈ ಕಾರಣಕ್ಕೆ ಅಕ್ಕಿ ಹಾಗೂ ಮೊದಲಾದ ಧಾನ್ಯಗಳನ್ನು ತರುವಂತೆ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಬರ್ಥಡೇ ದಿನ ಅಭಿಮಾನಿಗಳು ಅಕ್ಕಿ ಮೂಟೆಗಳನ್ನು ಹೊತ್ತು ಬಂದಿದ್ದಾರೆ. ಇವುಗಳನ್ನು ಅಗತ್ಯ ಇರುವವರಿಗೆ ನೀಡಲಾಗುತ್ತದೆ.