BIFFes 2025 | ಬೆಂಗಳೂರು ಆಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕನ್ನಡ ನೆಲ- ಮೂಲದ ಚಲನಚಿತ್ರ ಪ್ರತಿಭೋತ್ಸವ
ಮಾರ್ಚ್ 1ರಿಂದ ನಗರದಲ್ಲಿ ಆರಂಭವಾಗಲಿರುವ BIFFesನ ಈ 16ನೇ ಆವೃತ್ತಿಯ ವಿಶೇಷವೆಂದರೆ, ಕನ್ನಡದ, ಕನ್ನಡ ನೆಲ-ಮೂಲದ ರಾಷ್ಟ್ರಮಟ್ಟದ ಹಲವು ಪ್ರತಿಭೆಗಳ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಲಭ್ಯವಾಗಲಿದೆ.;
ಕನ್ನಡ ನೆಲದ ಗಿರೀಶ್ ಕಾಸರವಳ್ಳಿ-ಸದಾನಂದ ಸುವರ್ಣ, ಲಂಕೇಶ್-ರಾಜೀವ್ ತಾರಾನಾಥ್, ಸಿದ್ದಲಿಂಗಯ್ಯ-ದ್ವಾರಕೀಶ್, ಕೆ.ಎಸ್ ಅಶ್ವತ್ಥ್ ಗುರುದತ್, ಶ್ಯಾಮ್ ಬೆನಗಲ್, ಎಂ ಎಸ್ ಸತ್ಯು ಅವರ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ, ದೇಶ ವಿದೇಶಗಳಲ್ಲಿಯೂ ಕನ್ನಡ ನೆಲದ ಹಿರಿಮೆಯನ್ನು ವಿಸ್ತರಿಸಿದ ʻಮೈಲುಗಲ್ಲಿನಂಥʼ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಕನ್ನಡದ ಈ ತಲೆಮಾರಿನ ಸಿನಿಕರ್ತರಿಗೆ ಒಂದು ತಲೆಮಾರನ್ನು ಅರ್ಥಮಾಡಿಕೊಳ್ಳುವ ಅಪೂರ್ವ ಅವಕಾಶವಿದಾಗಿದೆ.
ಕಳೆದ ವರ್ಷ ನಮ್ಮನ್ನಗಲಿದ ಸಿನಿಮಾ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಅವರು ನಿರ್ಮಿಸಿ, ಗಿರೀಶ್ ಕಾಸರವಳ್ಳಿ ಅವರ ಚೊಚ್ಚಲ ಚಿತ್ರ ಘಟಶ್ರಾದ್ಧ, ಶ್ರದ್ದಾಂಜಲಿ ಮತ್ತು ನೆನಪು ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಸಂಸ್ಕರಣಗೊಂಡು, ಹೊಸರೂಪ ಪಡೆದ ಘಟಶ್ರಾದ್ಧ ಕಳೆದ ವರ್ಷ ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಆಗ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಕನ್ನಡ ಸಿನಿಮಾಕ್ಕಷ್ಟೇ ಅಲ್ಲ. ಭಾರತ ಚಿತ್ರರಂಗಕ್ಕೆ ಸಂದ ಗೌರವವಿದು ಎಂದು ಭಾವಿಸಲಾಯಿತು. ʻಘಟಶ್ರಾದ್ಧʼ ಕನ್ನಡದ ಸಮಾನಾಂತರ, ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಒಂದು ಬಹುಮುಖ್ಯ ಚಿತ್ರ. ಇದು ಭಾರತದ ನೂರು ಬಹುಮುಖ್ಯ ಚಿತ್ರಗಳಲ್ಲಿ ಒಂದೆಂದೂ ಗುರುತಿಸಲ್ಪಟ್ಟಿದೆ.
ಘಟಶ್ರಾದ್ಧ
ಈ ಚಿತ್ರ ರೂಪಗೊಂಡ ಬಗ್ಗೆ ಗಿರೀಶ್ ಕಾಸರವಳ್ಳಿ ಅವರು ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ ತಮ್ಮ ನೆನಪುಗಳನ್ನು ಹಂಚಿಕೊಂಡರು. “ನಾನು ಆಗಷ್ಟೇ National Film and Television Institute -Pune ಯಲ್ಲಿ ಕಲಿತು, ಅಲ್ಲಿಂದ ಪದವಿ ಪತ್ರ ಕೂಡ ಪಡೆದುಕೊಳ್ಳದೆ ಹಿಂದಿರುಗಿದ್ದೆ. ಆಗ ಮುಂಬೈನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಸಂತೋಷ್ ಕುಮಾರ್ ಗುಲ್ವಾಡಿ ನನ್ನನ್ನು ಸದಾನಂದ ಸುವರ್ಣ ಅವರಿಗೆ ಪರಿಚಯಿಸಿದರು. ಅವರು ಆಗ ತಮ್ಮ ʻಗುಡ್ಡದ ಭೂತʼ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದರು. ʼನನಗೆ ಸಹಾಯಕನಾಗಿ ಕೆಲಸಮಾಡುತ್ತೀರಾʼ ಎಂದು ನನ್ನನ್ನು ಕೇಳಿದರು. ಆಗ ನಾನು ʼಇಲ್ಲ ನಾನು ನನ್ನದೇ ಚಿತ್ರ ಮಾಡುವ ಸಿದ್ಧತೆಯಲ್ಲಿದ್ದೇನೆʼ ಎಂದೆ ಅದಕ್ಕವರು. ʻಸ್ಕ್ರಿಪ್ಟ್ ಸಿದ್ಧವಿದೆಯೇ ʼ ಎಂದು ಕೇಳಿದರು. ನಾನಾಗ, ಅನಂತಮೂರ್ತಿ ಅವರ ಸಣ್ಣ ಕಥೆ ʻಘಟಶ್ರಾದ್ಧʼವನ್ನು ಆಧರಿಸಿ ಚಿತ್ರಕತೆ ಸಿದ್ಧಪಡಿಸಿದ್ದೆ. ಅದನ್ನು ಅವರಿಗೆ ಓದಲು ನೀಡಿದೆ. ಅದನ್ನು ಓದಿ ಪ್ರಭಾವಿತರಾದ ಅವರು ತಾವೇ ಈ ಚಿತ್ರವನ್ನು ನಿರ್ಮಿಸುವುದಾಗಿ ಹೇಳಿದರು. ಹೀಗೆ ನಾನು ಚೊಚ್ಚಲ ನಿರ್ದೇಶಕನಾದೆʼ. ಇಂದು ಘಟಶ್ರಾದ್ಧ ಈ ಹಂತ ತಲುಪಲು ಮುಖ್ಯ ಕಾರಣ ಸದಾನಂದ ಸುವರ್ಣ ಎಂದು ಕಳೆದುಕೊಂಡ ಗೆಳೆಯನ ನೆನೆದು ಮೌನವಾದರು.
ʻಪಲ್ಲವಿʼ-ಮೇಯರ್ ಮುತ್ತಣ್ಣ-ನಾಗರಹಾವು
ಖ್ಯಾತ ಲೇಖಕ ಪತ್ರಕರ್ತ ಸಿನಿಮಾ ನಿರ್ದೇಶಕ ಪಿ. ಲಂಕೇಶ್ ಅವರು ನಿರ್ಮಿಸಿದ ʼಪಲ್ಲವಿ ಚಿತ್ರಕ್ಕೆ ಸಂಗೀತ ನೀಡಿದವರು ವಿಶ್ವವಿಖ್ಯಾತ ಸರೋದ್‌ವಾದಕ, ಲೇಖಕ, ಚಿಂತಕ, ವಿಮರ್ಶಕ ರಾಜೀವ್ ತಾರಾನಾಥ್ ಅವರು. ಅವರು ಕಳೆದ ವರ್ಷ ನಮ್ಮನ್ನಗಲಿದರು. ಅವರ ನೆನಪಿನಲ್ಲಿ ಮತ್ತು ʻಪಲ್ಲವಿʼಗೆ ಐವತ್ತು ವರ್ಷವಾಗಿರುವ ಸಂದರ್ಭದಲ್ಲಿ ಈ ಚಿತ್ರಗನ್ನು ಪ್ರದರ್ಶಿಸಲಾಗುತ್ತಿದೆ. ಈ ʻಪಲ್ಲವಿʼ ಚಿತ್ರ ಕುರಿತು ʻದ ಫೆಡರಲ್-ಕರ್ನಾಟಕ ವಿವರವಾದ ಲೇಖನವೊಂದನ್ನು ಇತ್ತೀಚೆಗೆ ಪ್ರಕಟಿಸಿದೆ. ಹಾಗೆಯೇ, ರಾಜೀವ್ ತಾರಾನಾಥ್ ನಿಧನರಾದಾಗ ಅವರ ಕುರಿತಾದ ವಿವರವಾದ ಲೇಖನವನ್ನು ಕೂಡ ʻದ ಫೆಡರಲ್ ಕರ್ನಾಟಕʼ ಪ್ರಕಟಿಸಿದೆ. ರಾಜೀವ್ ತಾರಾನಾಥ್ ಅವರು ಈ ಮೊದಲು ಪಟ್ಟಾಭಿರಾಮರೆಡ್ಡಿ ಅವರು ನಿರ್ದೇಶಿಸಿದ ʻಸಂಸ್ಕಾರʼ ಚಿತ್ರಕ್ಕೂ ಹಿನ್ನೆಲೆ ಸಂಗೀತ ನೀಡಿದ್ದನ್ನು, ನೆನಪಿಸಿಕೊಳ್ಳಬಹುದು.
ಕಳೆದ ವರ್ಷ ಕನ್ನಡ ಚಿತ್ರ ರಸಿಕರನ್ನು ಬಿಟ್ಟಗಲಿದ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ದ್ವಾರಕೀಶ್ ಅವರ ನೆನಪಿನಲ್ಲಿ ಸಿದ್ದಲಿಂಗಯ್ಯ ನೆನಪಿಸಿದ ಡಾ ರಾಜ್ ಕುಮಾರ್ ಅಭಿನಯದ ʼಮೇಯರ್ ಮುತ್ತಣ್ಣʼ ಚಿತ್ರವನ್ನು ಕೂಡ ಈ ನೆನಪಿನ ಮತ್ತು ಶ್ರದ್ಧಾಂಜಲಿ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ಕನ್ನಡದ ಸಜ್ಜನ ನಟ ಕೆ.ಎಸ್ ಅಶ್ವತ್ಥ್ ಅವರ ಜನ್ಮ ಶತಮಾನೋತ್ಸವ ವರ್ಷವಾಗಿದ್ದು ಅವರ ನೆನಪಿನಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ʼನಾಗರಹಾವುʼ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರಕ್ಕೆ ಜೀವ ತುಂಬಿದ ಜೀವಂತ ಅಶ್ವತ್ಥ್ ಅವರನ್ನು ಮತ್ತೆ ಕಾಣಬಹುದು.
ಗುರುದತ್‌ರ ಕಾಗಜ್ ಕಾ ಫೂಲ್
ಈ ಚಿತ್ರಗಳ ಹೊರತಾಗಿ ಕನ್ನಡ ನೆಲ ಮೂಲದಿಂದ ಹೊರಟು ಭಾರತೀಯ ಚಿತ್ರರಂಗದಲ್ಲಿ ತಮಗೊಂದು ಶಾಶ್ವತ ಸ್ಥಾನಮಾನವನ್ನು ಕಲ್ಪಿಸಿಕೊಂಡ ಗುರುದತ್ ಅವರ ʻಕಾಗಜ್ ಕಾ ಫೂಲ್ʼ ಚಿತ್ರ ಪ್ರದರ್ಶನಗೊಳ್ಳಲಿದೆ. ಗುರುದತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಡುಕೊಣೆ ಗ್ರಾಮದವರು. ಪಡುಕೋಣೆಯ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವರು. ಅವರು ಬದುಕಿದ್ದರೆ ಅವರಿಗೆ ಈ ವರ್ಷದ ಜುಲೈನಲ್ಲಿ ನೂರು ವರ್ಷ ತುಂಬುತ್ತಿತ್ತು
ಗುರುದತ್ ಅವರ ನಿಜವಾದ ಹೆಸರು ವಸಂತಕುಮಾರ ಶಿವಶಂಕರ ಪಡುಕೊಣೆ. ಬಾಲ್ಯದಲ್ಲಿ ಸಂಭವಿಸಿದ ಅಪಘಾತದ ಕಾರಣದಿಂದ ಇವರು ಗುರುದತ್ ಪಡುಕೋಣೆ ಎಂದು ಕರೆಸಿಕೊಳ್ಳುತ್ತಿದ್ದರು. ಇವರನ್ನು ಭಾರತೀಯ ಚಿತ್ರರಂಗದ ಶ್ರೇಷ್ಠ ಚಲನಚಿತ್ರ ನಿರ್ಮಾಪಕ ಹಾಗೂ ಅತಿ ಸೂಕ್ಷ್ಮ ಮನಸ್ಸಿನ ನಟ ಎಂದೇ ಗುರುತಿಸಲಾಗುತ್ತದೆ. ಗುರುದತ್ ಅವರು ತಮ್ಮ ಕಲಾತ್ಮಕ ಕೌಶಲ್ಯಕ್ಕಾಗಿ, ವಿಶೇಷವಾಗಿ ಕ್ಲೋಸ್ ಅಪ್ ಶಾಟ್ ಗಳ ಬಳಕೆ, ಬೆಳಕು ಮತ್ತು ವಿಷಣ್ಣ ಮಾನಸಿಕ ಸ್ಥಿತಿಯ ಚಿತ್ರಗಳಿಗೆ ಹೆಸರಾಗಿದ್ದವರು. ಅವರ ಸೂಕ್ಷ್ಮ ಮನಸ್ಥಿತಿಯೇ ಅವರನ್ನು 1964ರ ಅಕ್ಟೋಬರ್‌ನಲ್ಲಿ ಬಲಿತೆಗೆದುಕೊಂಡಿತು. ತಮ್ಮ ಮಗನ ನೆನಪಿನಲ್ಲಿ ಅವರ ತಾಯಿ “ನನ್ನ ಮಗ ಗುರುದತ್ತ” ಎಂಬ ಪುಸ್ತಕವನ್ನು ಬರೆದಿದಾರೆ. ಈ ಪುಸ್ತಕವನ್ನು ಮನೋಹರ ಗ್ರಂಥಮಾಲೆ ಪ್ರಕಟಿಸಿದೆ. ಗುರುದತ್ ಅವರು ಭಾರತ ಚಿತ್ರರಂಗದ ಖ್ಯಾತ ದಿಗ್ದರ್ಶಕ ಶ್ಯಾಮ್ ಬೆನಗಲ್ ಅವರ ಹತ್ತಿರದ ಸಂಬಂಧಿ ಕೂಡ.
ಶ್ಯಾಮ್ ಗೆ ಫಾಲ್ಕೆ ಪ್ರಶಸ್ತಿ
ಗುರುದತ್‌ರಂತೆಯೇ ಕನ್ನಡ ಮೂಲದವರು ಶ್ಯಾಮ್ ಬೆನೆಗಲ್. ಇವರು ಕಳೆದ ಡಿಸೆಂಬರ್ 23ರಂದು ನಮ್ಮನ್ನಗಲಿದರು. ಇವರು ಭಾರತೀಯ ಚಿತ್ರರಂಗದಲ್ಲಿ ಸತ್ಯಜಿತ್ ರೇ ನಂತರದ ಅತ್ಯುತ್ತಮ ಚಲನಚಿತ್ರ ನಿರ್ದೇಶಕರೆಂದೇ ಗುರುತಿಸಲಾಗುತ್ತದೆ. ಶ್ಯಾಮ್ ಬೆನಗಲ್ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಬೆನಗಲ್ ಗ್ರಾಮದ ಮೂಲದವರು. ಇವರ ತಂದೆ ಛಾಯಾಗ್ರಹಣದಲ್ಲಿ ಆಸಕ್ತಿ ಇದ್ದ ಶ್ರೀಧರ ಬೆನಗಲ್. ಕೆಲವು ವರ್ಷಗಳ ಹಿಂದೆ ಕರ್ನಾಟಕ ಚಲನಚಿತ್ರ ಆಕಾಡೆಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರು, “ನಾನು ಕನ್ನಡದ ನೆಲದ ಮೂಲದವನು” ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದು, ಈಗಲೂ ನೆನಪಾಗುತ್ತದೆ.
ಶ್ಯಾಮ್ ಬೆನೆಗಲ್ ಅವರನ್ನು ಭಾರತದ ಸಮಾನಾಂತರ ಸಿನಿಮಾ ಪ್ರವರ್ತಕರಲ್ಲಿ ಒಬ್ಬರೆಂದೇ ಪರಿಗಣಿಲಾಗಿದೆ. 1970-1980 ರ ದಶಕದಲ್ಲಿ ಇವರ ಏಳು ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಬಂದಿದೆಯೆಂದರೆ ಇವರ ಕಲಾತ್ಮಕ ಪ್ರತಿಭೆ ಎಂಥಹುದೆಂದು ಯಾರಾದರೂ ಊಹಿಸಿಕೊಳ್ಳಬಹುದು. 2005ರಲ್ಲಿ ಇವರಿಗೆ ಭಾರತದ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದಕ್ಕಿದೆ. ಅಷ್ಟೇ ಅಲ್ಲ ಭಾರತದ ನಾಗರೀಕ ಗೌರವಗಳಾದ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳೂ ಇವರನ್ನು ಹುಡುಕಿಕೊಂಡು ಬಂದಿದೆ. ಶ್ಯಾಮ್ ಅವರ ಮೊದಲ ನಾಲ್ಕು ಚಿತ್ರಗಳಾದ ಅಂಕುರ್, ನಿಶಾಂತ್, ಮಂಥನ್ ಮತ್ತು ಭೂಮಿಕ ಚಿತ್ರಗಳು ಅವರ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದು ಈಗ ಇತಿಹಾಸ. ಇವರ ಮುಸ್ಲೀಂ ಸಂವೇದನೆಯ ತ್ರಿವಳಿ ಚಿತ್ರಗಳಾದ ಮಮ್ಮೋ, ಸರ್ದಾರಿ ಬೇಗಂ ಮತ್ತು ಜುಬೇದಾ ಚಿತ್ರಗಳ ಇವರ ಪ್ರತಿಭೆಯ ಮತ್ತೊಂದು ಮಜಲು ಎಂದರೂ ತಪ್ಪಾಗಲಾರದು.
ಹಿಮ್ಮುಖವಾಗಿ ಚಲಿಸಿದ ರೈಲು
ಶ್ಯಾಮ್ ಬೆನಗಲ್ ಅವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ಕೈಯಿಂದ ತಿರುಗಿಸುವ ಕ್ಯಾಮರಾ ಬಳಸಿ ಮಕ್ಕಳ ಚಿತ್ರವೊಂದನ್ನು ನಿರ್ಮಿಸಿದ್ದರು. ಅವರ ತಂದೆ ಅವರಿಗೆ ನೀಡಿದ ಕೊಡುಗೆ ಈ ಕ್ಯಾಮರಾ. ಆ ಕ್ಯಾಮರಾ ಬಳಸಿ, ತಮ್ಮ ಮನೆಗೆ ರಜೆಗೆಂದು ಬಂದ ಸಂಬಂಧಿಗಳನ್ನೇ ಪಾತ್ರವಾಗಿಸಿ, ʼ ಚುಟ್ಟಿಯೊಂಕಾ ಮೌಜ್ ಮಸ್ತಿʼಎಂಬ ಚಿತ್ರ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಮೊದಲು ಮುಮ್ಮುಖವಾಗಿ ಚಲಿಸುವ ರೈಲು, ಚಿತ್ರ ಮುಗಿಯುವಾಗ ಹಿಮ್ಮುಖವಾಗಿ ಚಲಿಸುವ ತಂತ್ರ ಬಳಸಿ ಎಲ್ಲರನ್ನೂ ಬೆರಗುಗೊಳಿಸಿದ್ದರು.
ಮನರಂಜನೆ ಮೂಲಕವೇ ಶಿಕ್ಷಣ
ಶ್ಯಾಮ್ ಅವರು ತೀರಿಕೊಂಡಾಗ ಕನ್ನಡದ ಖ್ಯಾತ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೇಸರಿ ಹರವು ಬೆನಗಲ್ ಅವರನ್ನು ನೆನಪು ಮಾಡಿಕೊಂಡಿದ್ದು ಹೀಗೆ; "ಬೆಂಗಳೂರಿನಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಾಗಾರವೊಂದು ನಡೆದಿತ್ತು. ಆಗ ಶ್ಯಾಮ್ ಬೆನಗಲ್ ಅವರ ಬೇಕು-ಬೇಡಗಳನ್ನು ಗಮನಿಸುವ ಉಸ್ತುವಾರಿ ನನಗೆ ವಹಿಸಲಾಗಿತ್ತು. ಅವರು ಆಗಷ್ಟೇ ಬಿಡುಗಡೆಯಾಗಿದ್ದ ನನ್ನ ರಾಷ್ಟ್ರಪ್ರಶಸ್ತಿ ವಿಜೇತ ʼಭೂಮಿಗೀತʼ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಕನ್ನಡ ಚಿತ್ರಗಳ ಗುಣಮಟ್ಟದ ಬಗ್ಗೆ ನನ್ನನ್ನು ಪ್ರಶ್ನಿಸಿದರು. ನಾನು ಕನ್ನಡ ಚಿತ್ರಗಳ ಬಗ್ಗೆ ಸ್ವಲ್ಪ ಕಟುವಾಗಿಯೇ ಮಾತನಾಡಿದೆ. ಆಗ ಅವರು ಮುಗುಳ್ನಕ್ಜು ʼಚಲನಚಿತ್ರ ಮನರಂಜನೆಯ ಮಾಧ್ಯಮ. ಮನರಂಜನೆಯ ಮೂಲಕವೇ ನಾವು ಹೇಳಬೇಕಾದ ಕಟು ಸತ್ಯಗಳನ್ನು ಹೇಳಬಹುದುʼ ಎಂದು ಹೇಳಿ ಮುಗುಳ್ನಕ್ಕರು."
ಶ್ಯಾಮ್ ಬೆನಗಲ್ ಅವರ ಅಂಕುರ್, ನಿಶಾಂತ್, ಭೂಮಿಕಾ, ಮಮ್ಮೋ, ಮಂಥನ್ ಹಾಗೂ ಸೂರಜ್ ಕಾ ಸಾತ್ವಾನ್ ಘೋಡಾ.. ಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಹಿಂದೆ ನೋಡದವರು, ಈ ಚಿತ್ರಗಳನ್ನು ನೋಡಲು ಈಗೋಂದು ಸುವರ್ಣಾವಕಾಶ.
ಸತ್ಯು ಮತ್ತು ಗರಂ ಹವಾ
ಶ್ಯಾಮ್ ಬೆನಗಲ್ ಅವರಂತಲ್ಲದ ಅಪ್ಪಟ ಕನ್ನಡ ಪ್ರತಿಭೆ ಎಂ.ಎಸ್ ಸತ್ಯು. ಅವರ ʻಗರಂ ಹವಾʼ ಚಿತ್ರವನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಮೈಸೂರು ಶ್ರೀನಿವಾಸ ಸತ್ಯು ಆಗಿರುವ ಇವರನ್ನು ಎಲ್ಲರೂ ಕ್ಲುಪ್ತವಾಗಿ ಪ್ರೀತಿಯಿಂದ ಕರೆಯುವುದು ಎಂ.ಎಸ್ ಸತ್ಯು ಎಂದೇ. ಇವರ ಗರಂ ಹವಾ ಭಾರತೀಯ ಚಿತ್ರರಂದಲ್ಲೊಂದು ಮೈಲುಗಲ್ಲು. ಈ ಚಿತ್ರವು, ಉರ್ದುವಿನ ಖ್ಯಾತ ಲೇಖಕಿ ಇಸ್ಮತ್ ಚುಗ್ತಾಯಿ ಅವರ ಕಥೆಯನ್ನು ಆಧರಿಸಿದ್ದು. ಈ ಚಿತ್ರಕ್ಕೆ ಚಿತ್ರಕಥೆ ಬರೆದವರು, ಸತ್ಯು ಅವರ ಪತ್ನಿ ಶಮಾ ಜೈದಿ. ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆಯುವ ಈ ಕಥೆ 1947ರ ಭಾರತ ದೇಶದ ವಿಭಜನೆಯ ನಂತರದ ಅವಧಿಯಲ್ಲಿ ಪಾಕಿಸ್ತಾನಕ್ಕೆ ತೆರಳಲಾರದೆ, ಇಲ್ಲಿರಲಾರದೆ ನರಳುವು ಮುಸ್ಲೀಂ ಬಂಧುಗಳ ಒಳತೋಟಿಯನ್ನು ಬಿಚ್ಚಿಡುವ ಚಿತ್ರ. ಈ ಚಿತ್ರವು ಒಂದು ಮುಸ್ಲೀಮ್ ಕುಟುಂಬದ ನಿಧಾನಗತಿಯ ವಿಘಟನೆಯನ್ನು ತೆರೆದಿಡುವ ರೀತಿ ಮನನೀಯ. ಭಾರತದ ವಿಭಜನೆಯನ್ನು ಕುರಿತು ನಿರ್ಮಿಸಲಾದ ಅತ್ಯಂತ ಹೃದಯಸ್ಪರ್ಶಿ ಚಿತ್ರಗಳಲ್ಲಿ ಗರಂ ಹವಾ ಕೂಡ ಒಂದು. ಈ ಚಿತ್ರ ಕೂಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಕಲಾತ್ಮಕ ಚಿತ್ರಗಳ ಶಕೆಯನ್ನು ಆರಂಭಿಸಿದ ಕೀರ್ತೀಗೆ ಪಾತ್ರವಾಗಿದೆ. ಇದು ಬಲರಾಜ್ ಸಾಹ್ನಿ ಅವರ ಕೊನೆಯ ಹಾಗು ಫರೂಖ್ ಷೇಖ್ ಅವರ ಮೊದಲ ಚಿತ್ರ. ಈ ಚಿತ್ರ ಬಿಡುಗಡೆ ಸುಲಭವಾಗಲಿಲ್ಲ. ,ದೇಶದಲ್ಲಿ ಅಗ ತುರ್ತುಸ್ಥಿತಿ ಇತ್ತು. ಆದರೂ, ಚಿತ್ರ ಬಿಡುಗಡೆಯಾಗಿ ಜನ ಮೆಚ್ಚಿಗೆ ಗಳಿಸಿತು. ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ತನ್ನ ಪ್ರಭಾವವನ್ನು ಸಾಗರದಾಚೆಗೂ ವಿಸ್ತರಿಸಿತು.
ʻಗರಂ ಹವಾʼ ಚಿತ್ರವಂತೂ, ಬಿಡುಗಡೆಯಾದ ಕಾಲಕ್ಕಿಂತೂ, ಇಂದಿನ ಕೋಮದ್ವೇಷ ಭರಿತ ಸಂದರ್ಭದಲ್ಲಿ ಅತ್ಯಂತು ಮುಖ್ಯ ಹಾಗೂ ಅತ್ಯಂತ ಪ್ರಸ್ತುತ ಎನ್ನಿಸುತ್ತದೆ. ಸಂಸ್ಕರಣಗೊಂಡು ಹೊಸರೂಪ ಪಡೆದಿರುವ ಈ ಚಿತ್ರದ ಪ್ರದರ್ಶನ ಈ ಚಿತ್ರೋತ್ಸವದ ಹೆಗ್ಗಳಿಕೆಗಳಲ್ಲಿ ಒಂದು ಎಂದು ಯಾವುದೇ ಎಗ್ಗಿಲ್ಲದೆ ಹೇಳಬಹುದು.