ʼಭೈರಾದೇವಿ’ ಚಿತ್ರದ ಟ್ರೇಲರ್ ಬಿಡುಗಡೆ; ಅಕ್ಟೋಬರ್ 3ಕ್ಕೆ ತೆರೆಗೆ
ರಾಧಿಕಾ ಕುಮಾರಸ್ವಾಮಿ ನಟಿಸಿ, ನಿರ್ಮಿಸಿರುವ ಬಹು ನಿರೀಕ್ಷಿತ ʼಭೈರಾದೇವಿʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.;
ರಾಧಿಕಾ ಕುಮಾರಸ್ವಾಮಿ ನಟಿಸಿ, ನಿರ್ಮಿಸಿರುವ ಬಹು ನಿರೀಕ್ಷಿತ ʼಭೈರಾದೇವಿʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ, ನಿರ್ದೇಶಕ ಶ್ರೀಜೈ ನಮ್ಮ ಮನೆಗೆ ಬಂದು ಕಥೆ ಹೇಳಿದರು. ಕಥೆ ಇಷ್ಟಾವಾಗಿ, ಈ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಚಿತ್ರ ಆರಂಭವಾದಾಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿದೆ. ಹಾಗಾಗಿ ನಾನು ಚಿತ್ರದ ಬಿಡುಗಡೆ ಯೋಚನೆ ಮಾಡಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗಂಡ- ಹೆಂಡತಿ ಹೇಳಿದ ಮಾತೊಂದರ ಸ್ಪೂರ್ತಿಯಿಂದ ಚಿತ್ರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡೋಣ ಎಂದು ನನ್ನ ಅಣ್ಣನಿಗೆ ಹೇಳಿದೆ. ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತೇನೆ. ʼಭೈರಾದೇವಿʼ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆದರೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಆಗಿಬಿಡುತ್ತೇನೆ. ಇದು ದೊಡ್ಡ ಯಶಸ್ಸಾಗುತ್ತದೆ ಎಂಬ ನಂಬಿಕೆ ನನಗಿದೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು. ಈ ಚಿತ್ರದ ಸಂಪೂರ್ಣ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು’ ಎಂದರು.
ನಟ ರಮೇಶ್ ಅರವಿಂದ್ ಮಾತನಾಡಿ, ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ. ಅರವಿಂದ್ ನನ್ನ ಪಾತ್ರದ ಹೆಸರು. ಯಾವುದೇ ತರಹದ ರೌಡಿಗಳನ್ನು ಸದ್ದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ, ಈ ಚಿತ್ರದಲ್ಲಿ ನನ್ನಗಿರುವ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಇನ್ನು ಈ ಚಿತ್ರದ ಟ್ರೇಲರ್ ನೋಡಿದಾಗ, ನನಗೆ ʼಆಪ್ತಮಿತ್ರʼ ಚಿತ್ರ ನೆನಪಾಯಿತು. ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಹಾಗೂ ನಾಯಕಿಯಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಅವರು ಆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರೊಂದಿಗೆ ಮಾತನಾಡಲಿಕ್ಕೆ ಭಯವಾಗುತ್ತಿತ್ತು ಎಂದರು.
ನಿರ್ದೇಶಕ ಶ್ರೀಜೈ ಮಾತನಾಡಿ, ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ಕಾರಣ ನಮ್ಮ ನಿರ್ಮಾಪಕರು. ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು, ಕಲಾವಿದರಿಗೆ ನಾನು ಬಹಳ ತೊಂದರೆ ಕೊಟ್ಟಿದ್ದೇನೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ ಅದ್ಭುತವಾಗಿದೆ ಎಂದು ತಿಳಿಸಿದರು.
ʼಹೃದಯ ಹೃದಯʼ ಚಿತ್ರ ತೆರೆ ಕಂಡು ಇಪ್ಪತ್ತೈದು ವರ್ಷಗಳಾಗಿದೆ. ನಾನು ಈಗ ನನ್ನ ಸಿನಿ ಜರ್ನಿಯ ರಜತ ಮಹೋತ್ಸವ ಆಚರಿಸುತ್ತಿದ್ದೇನೆ. ರಮೇಶ್ ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರ ಜೊತೆ ನಟಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಬಹಳ ಚೆನ್ನಾಗಿದೆ ಎಂದು ನಟಿ ಅನು ಪ್ರಭಾಕರ್ ತಿಳಿಸಿದರು.
ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್ ತಾರಾಂಗಣವಿದೆ. ಶ್ರೀಜೈ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.