ಸೋಲು, ಸಾಲ, ನೋವು, ಕಣ್ಣೀರು; ಎ.ಟಿ. ರಘು ದುರಂತ ಬದುಕು

ವಿ. ಸೋಮಶೇಖರ್‍, ವಿಜಯ್‍, ಜೋಸೈಮನ್‍, ಡಿ. ರಾಜೇಂದ್ರ ಬಾಬು ಮುಂತಾದ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಬ್ಬ ಜನಪ್ರಿಯ ನಿರ್ದೇಶಕರೆಂದರೆ ಅದು ಕೊಡಗಿನ ಅಪದಾಂಡ ತಿಮ್ಮಯ್ಯ ರಘು.;

Update: 2025-03-22 01:30 GMT

ಅಂಬರೀಶ್ ಅಭಿನಯದ ‘ಮಂಡ್ಯದ ಗಂಡು’ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಕನ್ನಡದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಎ.ಟಿ. ರಘು (76) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಘು ಇನ್ನಿಲ್ಲವಾಗಿದ್ದಾರೆ.

80ರ ದಶಕದಲ್ಲಿ ಅತ್ಯಂತ ಜನಪ್ರಿಯ ನಿರ್ದೇಶಕರಾಗಿದ್ದವರು ರಘು. ಆ್ಯಕ್ಷನ್ ಮತ್ತು ಕಮರ್ಷಿಯಲ್‍ ಚಿತ್ರಗಳ ವಿಷಯಕ್ಕೆ ಬಂದರೆ, ಕನ್ನಡದಲ್ಲಿ ವಿ. ಸೋಮಶೇಖರ್‍, ವಿಜಯ್‍, ಜೋಸೈಮನ್‍, ಡಿ. ರಾಜೇಂದ್ರ ಬಾಬು ಮುಂತಾದ ಹಲವು ನಿರ್ದೇಶಕರು ಸಿಗುತ್ತಾರೆ. ಆ ಸಾಲಿಗೆ ಸೇರುವ ಮತ್ತೊಬ್ಬ ಜನಪ್ರಿಯ ನಿರ್ದೇಶಕರೆಂದರೆ ಅದು ಕೊಡಗಿನ ಅಪದಾಂಡ ತಿಮ್ಮಯ್ಯ ರಘು.

‘ಭಲೇ ಜೋಡಿ’, ‘ಸಿಪಾಯಿ ರಾಮು’, ‘ದೇವರ ಕಣ್ಣು’ ಮುಂತಾದ ಹಿಟ್‍ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ವೈ.ಆರ್. ಸ್ವಾಮಿ ಗರಡಿಯಲ್ಲಿ ಪಳಗಿದ್ದ ಎ.ಟಿ. ರಘು, 1980ರಲ್ಲಿ ಬಿಡುಗಡೆಯಾದ ‘ನ್ಯಾಯ ನೀತಿ ಧರ್ಮ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಅಂಬರೀಶ್‍, ಆರತಿ ಮುಂತಾದವರು ಅಭಿನಯಿಸಿದ್ದ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತು. ನಂತರದ ದಿನಗಳಲ್ಲಿ ‘ಆಶಾ’, ‘ಅವಳ ನೆರಳು’, ‘ಕಾಡಿನ ರಾಜ’, ‘ಗೂಂಡಾ ಗುರು’, ‘ಗುರು ಜಗದ್ಗುರು’, ‘ಅಂತಿಮ ತೀರ್ಪು’, ‘ಇನ್‍ಸ್ಪೆಕ್ಟರ್‍ ಕ್ರಾಂತಿ ಕುಮಾರ್’, ‘ಆಪದ್ಭಾಂಧವ’, ‘ಕೆಂಪು ಸೂರ್ಯ’, ‘ಮೈಸೂರು ಜಾಣ’, ‘ಮಿಡಿದ ಹೃದಯಗಳು’, ‘ಮಂಡ್ಯದ ಗಂಡು’ ಮುಂತಾದ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದರು. ಈ ಪೈಕಿ ಬಹಳಷ್ಟು ಚಿತ್ರಗಳಲ್ಲಿ ಅಂಬರೀಶ್‍ ನಾಯಕನಾಗಿ ನಟಿಸಿದರು.

ವಿಶೇಷವೆಂದರೆ, ಎ.ಟಿ. ರಘು ಅವರು ರಜನಿಕಾಂತ್‍ ಅಭಿನಯದ ಒಂದು ಹಿಂದಿ ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ತಮ್ಮದೇ ‘ಆಶಾ’ ಚಿತ್ರ ಹಿಂದಿಗೆ ರೀಮೇಕ್‍ ಆದ ಸಂದರ್ಭದಲ್ಲಿ, ರಘು ಆ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಜನಿಕಾಂತ್‍ ಜೊತೆಗೆ ಜೀನತ್‍ ಅಮಾನ್‍, ಖಾದರ್‍ ಖಾನ್‍ ಮುಂತಾದ ಜನಪ್ರಿಯ ನಟರು ನಟಿಸುವುದರ ಜೊತೆಗೆ, ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ಸಂಯೋಜಿಸಿದ್ದರು. ಹಿಂದಿಯಲ್ಲದೆ ಮಲಯಾಳಂನಲ್ಲೂ ಅವರು ಚಿತ್ರ ನಿರ್ದೇಶನ ಮಾಡಿದ್ದರು.

 

ಸಾಲದ ಸುಳಿ ಆರಂಭ

1994ರಲ್ಲಿ ಬಿಡುಗಡೆಯಾದ ‘ಮಂಡ್ಯದ ಗಂಡು’ವರೆಗೂ ಅಂಬರೀಶ್‍ ಜೊತೆಗೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಜೊತೆಗೆ ಕೆಲವು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದರು. ‘ಮಂಡ್ಯದ ಗಂಡು’ ನಂತರ ಅಂಬರೀಶ್‍ ರಾಜಕೀಯದಲ್ಲಿ ತೊಡಗಿಸಿಕೊಂಡರು. ಆ ನಂತರವೂ ಅಂಬರೀಶ್‍ ಅಭಿನಯದಲ್ಲಿ ‘ಬೇಟೆಗಾರ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದರು. ಅಂಬರೀಶ್ ಬ್ಯುಸಿಯಾದ ಹಿನ್ನೆಲೆಯಲ್ಲಿ ಅವರ ಬದಲು ಚರಣ್‍ ರಾಜ್‍ ಅಭಿನಯದಲ್ಲಿ ‘ರಾಂಬೋ ರಾಜ ರಿವಾಲ್ವರ್ ರಾಣಿ’ ಎಂಬ ಚಿತ್ರವನ್ನು ರಘು ನಿರ್ಮಿಸಿ-ನಿರ್ದೇಶಿಸಿದರು. ಈ ಚಿತ್ರ ಯಾವ ಪರಿ ನೆಲಕಚ್ಚಿತೆಂದರೆ, ಸುಮಾರು 30 ವರ್ಷಗಳ ಹಿಂದೆ ರಘು 18 ಲಕ್ಷ ಸಾಲ ಮಾಡಿಕೊಂಡರು.

ಸಾಲದಿಂದ ಹೊರಬರುವುದಕ್ಕೆ ಅವರು ದೇವರಾಜ್‍ ಅಭಿನಯದ ‘ಕಾಳಿ’ ಎಂಬ ಚಿತ್ರ ನಿರ್ಮಿಸಿ-ನಿರ್ದೇಶನ ಮಾಡಿದರು. ಆ ಚಿತ್ರವೂ ಸೋತು ಸಾಲದ ಪ್ರಮಾಣ ಹೆಚ್ಚಾಯಿತು. ಇದರಿಂದ ರಘು ತಮ್ಮ ಮನೆ ಮಾರಿ, ಸ್ವಲ್ಪ ಸಾಲ ತೀರಿಸಿದರು. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ ಹೆಂಡತಿ-ಮಕ್ಕಳನ್ನು ಕೊಡಗಿಗೆ ಕಳಿಸಿ, ಬೆಂಗಳೂರಲ್ಲಿ ಒಬ್ಬರೇ ರೂಮ್‍ ಮಾಡಿಕೊಂಡಿದ್ದರು. ಒಂದು ಹಂತದಲ್ಲಿ ಅವರೂ ಕೊಡಗಿಗೆ ಹೋಗಿ ನೆಲೆಸಿದರು. ಈ ಸಂದರ್ಭದಲ್ಲಿ ಅವರು ದೂರದರ್ಶನಕ್ಕಾಗಿ ‘ಐನ್ಮನೆ’, ‘ಜಮ್ಮ ಭೂಮಿ’, ‘ನಾಂಗ ಕೊಡವ’ ಸೇರಿದಂತೆ ಆರು ಕೊಡವ ಧಾರಾವಾಹಿಗಳನ್ನು ದೂರದರ್ಶನಕ್ಕಾಗಿ ನಿರ್ದೇಶನ ಮಾಡಿದರು. ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ, ಸಾಲದ ಶೂಲೆಯಿಂದ ಹೊರಬರುವುದಕ್ಕೆ ಸಾಧ್ಯವಾಗಲೇ ಇಲ್ಲ.

ನಟನೆಯತ್ತ

ಯಾವಾಗ ಕನ್ನಡ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಅವಕಾಶಗಳು ಸಿಗಲಿಲ್ಲವೋ, ಆಗ ಅವರು ನಟನೆಯತ್ತ ತಿರುಗಿದರು. ‘ಶಿವಸೈನ್ಯ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದರು. ಕೆಲವು ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಯಿತು. ಅಷ್ಟರಲ್ಲಾಗಲೇ ಸಾಕಷ್ಟು ಸೋಲು, ಸಾಲ, ನೋವಿನಿಂದ ಕಂಗೆಟ್ಟಿದ್ದ ರಘು ಇನ್ನಷ್ಟು ಕಂಗಾಲಾದರು. ಅವರು ಸಮಸ್ಯೆಯಲ್ಲಿದ್ದಾಗಲೆಲ್ಲಾ, ಅವರ ನೆರವಿಗೆ ಬಂದಿದ್ದು ಅಂಬರೀಶ್‍. ತಮ್ಮ ನೋವಿನ ದಿನಗಳಲ್ಲಿ ಅಂಬರೀಶ್‍ ಹಲವು ಬಾರಿ ತಮಗೆ ಸಹಾಯ ಮಾಡಿದ್ದರು ಎಂದು ರಘು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಟನೆ, ನಿರ್ದೇಶನ ಎಲ್ಲದರಿಂದಲೂ ದೂರವೇ ಇದ್ದ ರಘು, ಗುರುವಾರ ರಾತ್ರಿ ಅನಾರೋಗ್ಯ ಹೆಚ್ಚಾಗಿ ನಿಧನರಾಗಿದ್ದಾರೆ. ಒಂದು ಕಾಲಕ್ಕೆ ಮಹಾನ್‍ ಕೋಪಿಷ್ಠ ಎಂಬ ಬಿರುದಿಗೆ ಪಾತ್ರರಾದವರು ರಘು. ತಮ್ಮ ಕಲ್ಪನೆಯಂತೆ ಶಾಟ್‍ ಮೂಡಿಬರದಿದ್ದಾಗ, ಅವರು ಸಿಟ್ಟಾಗುತ್ತಿದ್ದುದರ ಬಗ್ಗೆ ಹಲವು ಕಥೆಗಳಿವೆ. ಅವರ ಪಾರ್ಥೀವ ದರ್ಶನಕ್ಕೆ ಬಂದಿದ್ದ ದೊಡ್ಡಣ್ಣ ಸಹ, ರಘು ಕೋಪದ ಬಗ್ಗೆ, ಕೆಲವೊಮ್ಮೆ ತಡವಾದಾಗ ಅಂಬರೀಶ್‍ಗೇ ಬಯ್ಯುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇನ್ನು, ರಘು ಅವರ ಗರಡಿಯಲ್ಲಿ ಪಳಗಿದ ಹಲವರು ಇಂದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಎಸ್‍. ನಾರಾಯಣ್‍, ‘ವಿಕ್ಟರಿ’ ವಾಸು ಸೇರಿದಂತೆ ಹಲವರು ದೊಡ್ಡ ಹೆಸರು ಮಾಡಿದ್ದಾರೆ.

ಒಂದು ಕಾಲಕ್ಕೆ ದೊಡ್ಡ ಹೆಸರು ಮಾಡಿದ್ದ, ತಮ್ಮ ಖಡಕ್‍ ವರ್ತನೆಯಿಂದ ಜನಪ್ರಿಯರಾಗಿದ್ದ ರಘು, ಈಗ ತಮ್ಮ ನೆನಪು ಮತ್ತು ಚಿತ್ರಗಳನ್ನು ಬಿಟ್ಟು ಹೋಗಿದ್ದಾರೆ.ಸ

Tags:    

Similar News