41 ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ಅನಿಲ್ ಕಪೂರ್?
ಮಣಿರತ್ನಂ ನಿರ್ದೇಶನದ ಮೊದಲ ಚಿತ್ರವಾದ ‘ಪಲ್ಲವಿ ಅನುಪಲ್ಲವಿ’ ಬಿಡುಗಡೆಯಾಗಿ 41 ವರ್ಷಗಳು ಕಳೆದಿವೆ. ಈ ಸಮಯದಲ್ಲಿ ಅನಿಲ್ ಕಪೂರ್ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ;
ಬಾಲಿವುಡ್‍ನ ಜನಪ್ರಿಯ ನಟ ಅನಿಲ್ ಕಪೂರ್, ಹಿಂದಿಯಲ್ಲಿ ಜನಪ್ರಿಯ ನಟನಾಗಿ ಮಿಂಚುವುದಕ್ಕಿಂತ ಮುನ್ನ, ಕನ್ನಡದಲ್ಲಿ ನಟಿಸಿದ್ದರು. 1983ರಲ್ಲಿ ಬಿಡುಗಡೆಯಾದ ಕನ್ನಡದ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದರು. ಮಣಿರತ್ನಂ ನಿರ್ದೇಶನದ ಮೊದಲ ಚಿತ್ರವಾದ ‘ಪಲ್ಲವಿ ಅನುಪಲ್ಲವಿ’ ಬಿಡುಗಡೆಯಾಗಿ 41 ವರ್ಷಗಳು ಕಳೆದಿವೆ. ಈ ಸಮಯದಲ್ಲಿ ಅನಿಲ್ ಕಪೂರ್ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಅವರು ಯಶ್ ಅಭಿನಯದ ‘ಟಾಕ್ಸಿಕ್’ನಲ್ಲಿ ನಟಿಸುತ್ತಿರುವ ಸುದ್ದಿ ಇದೆ.
ಹೌದು, ‘ಟಾಕ್ಸಿಕ್’ ಚಿತ್ರದಲ್ಲಿ ಅನಿಲ್ ಕಪೂರ್ ಸಹ ನಟಿಸುತ್ತಿರುವ ಸುದ್ದಿ ಇದೆ. ಆದರೆ, ಈ ಕುರಿತು ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಅನಿಲ್ ಕಪೂರ್ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿರುವುದನ್ನು ನೋಡಿ, ಅವರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಮುಂಬೈನಲ್ಲಿ ‘ಟಾಕ್ಸಿಕ್’ ಚಿತ್ರೀಕರಣ
ಕಳೆದ ಕಲೆವು ದಿನಗಳಿಂದ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ಮುಂಬೈನ ಬಳಿಯ ದ್ವೀಪವೊಂದರಲ್ಲಿ ನಡೆಯುತ್ತಿದ್ದು, ಯಶ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ, ಚಿತ್ರದ ಚಿತ್ರೀಕರಣಕ್ಕೆ ಅನಿಲ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಜೊತೆಯಾಗಿ ಜೆಟ್ಟಿಯಲ್ಲಿ ಪ್ರಯಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆನ್ನು ಬಿದ್ದಿರುವ ಪಾಪರಾಜಿಗಳು, ಕಿಯಾರಾ ಅಡ್ವಾಣಿ ಮತ್ತು ಅನಿಲ್ ಕಪೂರ್ ಜೊತೆಯಾಗಿ ಪ್ರಯಾಣ ಮಾಡುತ್ತಿರುವ ಫೋಟೋ ಮತ್ತು ವೀಡಿಯೋಗಳನ್ನು ಶೂಟ್ ಮಾಡಿದ್ದಾರೆ. ಈ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
‘ಟಾಕ್ಸಿಕ್’ ಚಿತ್ರಕ್ಕೆ ಗೀತೂ ಮೋಹನ್ ದಾಸ್ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ ಜೊತೆಗೆ ಅನಿಲ್ ಕಪೂರ್, ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರ 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಯಾವ ಭಾಷೆ ಚಿತ್ರ ಈ ‘ಟಾಕ್ಸಿಕ್’?
ಇಷ್ಟಕ್ಕೂ, ‘ಟಾಕ್ಸಿಕ್’ ಯಾವ ಭಾಷೆಯ ಚಿತ್ರ ಎಂದು ಹೇಳುವುದು ಕಷ್ಟ. ಏಕೆಂದರೆ, ಇದರಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ತಂತ್ರಜ್ಞರು ಸಹ ಇದ್ದಾರೆ. ಆ ನಿಟ್ಟಿನಲ್ಲಿ ಇದೊಂದು ಪಕ್ಕಾ ಪ್ಯಾನ್ ಇಂಡಿಯಾ ಅಥವಾ ವರ್ಲ್ಡ್ ಚಿತ್ರ. ಹಾಗಾಗಿ, ಇದನ್ನು ಕನ್ನಡ ಚಿತ್ರ ಎಂದು ಕರೆಯಬೇಕಾ? ಎಂಬ ಪ್ರಶ್ನೆ ಹಲವರಲ್ಲಿದೆ. ಕನ್ನಡದ ಹೀರೋ ಮತ್ತು ನಿರ್ಮಾಪಕರು ಮುನ್ನಲೆಯಲ್ಲಿರುವುದರಿಂದ ಕನ್ನಡ ಚಿತ್ರ ಎನ್ನಬಹುದು. ಆದರೂ ಯಾವ ಭಾಷೆಯಲ್ಲಿ ಚಿತ್ರೀಕರಣವಾಗಿದೆ ಎಂದು ಚಿತ್ರ ನೋಡಿದ ಮೇಲಷ್ಟೇ ಗೊತ್ತಾಗಬೇಕು.