Bhavana Ramanna| ಐವಿಎಫ್ ಮೂಲಕ ತಾಯ್ತನದ 'ಭಾವ'ನಾ ; ಸೆಲೆಬ್ರಿಟಿಗಳ ಮಾತೃತ್ವದ ಆಯ್ಕೆಯ ಚರ್ಚೆ

ಭಾವನ ಐವಿಎಫ್‌ ಮೂಲಕ ಗರ್ಭಿಣಿಯಾಗಿದ್ದಾರೆ. ಪ್ರಸ್ತುತ 6 ತಿಂಗಳ ಗರ್ಭಿಣಿಯಾಗಿರುವ ಆಕೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಈಗೀಗ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು ಎಂದು ಭಾವನ ತಿಳಿಸಿದ್ದಾರೆ.;

Update: 2025-07-04 12:31 GMT

ನಟಿ ಭಾವನ ಐವಿಎಫ್‌ ಚಿಕಿತ್ಸೆ ಮೂಲಕ ತಾಯಿಯಾಗುತ್ತಿದ್ದಾರೆ. 

 ಸ್ಯಾಂಡಲ್​ವುಡ್​ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು 40ನೇ ವಯಸ್ಸಿನಲ್ಲಿ ಅವಿವಾಹಿತರಾಗಿಯೇ ತಾಯ್ತನದ ಹಾದಿ ಹಿಡಿದಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳ ವಲಯದಲ್ಲಿ ಜನಪ್ರಿಯವಾಗುತ್ತಿರುವ ಐವಿಎಫ್ (IVF) ತಂತ್ರಜ್ಞಾನದ ಮೂಲಕ ಭಾವನಾ ಗರ್ಭಿಣಿಯಾಗಿದ್ದು, ಪ್ರಸ್ತುತ ಆರು ತಿಂಗಳ ಗರ್ಭಿಣಿಯಾಗಿ ಅವಳಿ ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಭಾವನಾ ಅವರ ಹೇಳಿಕೆಯೇನು?

"ತುಂಬು ಕುಟುಂಬದಲ್ಲಿ ಬೆಳೆದ ನನಗೆ ಇದುವರೆಗೂ ತಾಯಿಯಾಗುವ ಬಯಕೆ ಇರಲಿಲ್ಲ. ಆದರೆ, ಈಗೀಗ ತಾಯಿಯಾಗಬೇಕು ಎನ್ನುವ ಹಂಬಲ ನನ್ನನ್ನು ಕಾಡುತ್ತಲೇ ಇತ್ತು. ಹೀಗಾಗಿ ಐವಿಎಫ್ ಮೂಲಕ ಈಗ ಗರ್ಭಿಣಿಯಾಗಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ, ಅಮ್ಮ ಆಗುವ ಕಾತರ ನಿರಂತರ" ಎಂದು ಭಾವನಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ತಮ್ಮ ಮನೆಯ ಸಮೀಪದ ಕ್ಲಿನಿಕ್‌ಗೆ ಭೇಟಿ ನೀಡಿ, ದಾನಿಯನ್ನು ಆಯ್ಕೆ ಮಾಡಿದ್ದರು. ಈ ಬಗ್ಗೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಿಷಯವನ್ನು ತಂದೆಗೆ ಹೇಳಿದಾಗ ಅವರು "ನೀನು ಒಬ್ಬ ಮಹಿಳೆ ಮತ್ತು ನಿಮಗೆ ತಾಯಿಯಾಗುವ ಎಲ್ಲ ಹಕ್ಕಿದೆ" ಎಂದು ಅವರು ಬೆಂಬಲಿಸಿದ್ದರು. ಒಡಹುಟ್ಟಿದವರೂ ಕೂಡ ತಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಭಾವನಾ ತಿಳಿಸಿದ್ದಾರೆ. "ನನ್ನ ಮಕ್ಕಳಿಗೆ ತಂದೆ ಇರದಿರಬಹುದು, ಆದರೆ ಅವರು ದಯಾಳು ಪುರುಷರ ಸುತ್ತಲಿರುತ್ತಾರೆ" ಎಂದಿದ್ದಾರೆ ಭಾವನಾ.

ಐವಿಎಫ್ ಮತ್ತು ಬಾಡಿಗೆ ತಾಯ್ತನ: ಸೆಲೆಬ್ರಿಟಿಗಳ ಹೆಚ್ಚುತ್ತಿರುವ ಆಯ್ಕೆ

ಇತ್ತೀಚಿನ ದಿನಗಳಲ್ಲಿ, ಐವಿಎಫ್ (In Vitro Fertilization) ಮತ್ತು ಬಾಡಿಗೆ ತಾಯ್ತನ (Surrogacy) ತಂತ್ರಜ್ಞಾನಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ವಿಶೇಷವಾಗಿ ಸೆಲೆಬ್ರಿಟಿಗಳ ವಲಯದಲ್ಲಿ ಈ ವಿಧಾನಗಳ ಮೂಲಕ ತಂದೆ-ತಾಯಿಯಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ನೈಸರ್ಗಿಕವಾಗಿ ಗರ್ಭಿಣಿಯಾಗಲು ಸಾಧ್ಯವಾಗದವರಿಗೆ ಅಥವಾ ವೈಯಕ್ತಿಕ ಕಾರಣಗಳಿಂದ ಗರ್ಭಧಾರಣೆಯನ್ನು ತಪ್ಪಿಸಲು ಬಯಸುವವರಿಗೆ ಈ ತಂತ್ರಜ್ಞಾನಗಳು ಹೊಸ ಭರವಸೆ ನೀಡಿವೆ. 

IVF ಮತ್ತು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಪ್ರಮುಖ ಸೆಲೆಬ್ರಿಟಿಗಳು:

ಫರಾ ಖಾನ್ ಮತ್ತು ಶಿರಿಶ್ ಕುಂದರ್: 2008ರಲ್ಲಿ ಐವಿಎಫ್ ಮೂಲಕ ತ್ರಿವಳಿ ಮಕ್ಕಳನ್ನು ಸ್ವಾಗತಿಸಿದ ಇವರು, ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ ಮೊದಲ ಬಾಲಿವುಡ್ ದಂಪತಿ. 43ನೇ ವಯಸ್ಸಿನಲ್ಲಿ ಐವಿಎಫ್ ಆಯ್ದುಕೊಂಡಿದ್ದಾಗಿ ಫರಾ ತಿಳಿಸಿದ್ದರು.

ಶಾರುಖ್ ಖಾನ್ ಮತ್ತು ಗೌರಿ ಖಾನ್: ಇವರ ಮೂರನೇ ಮಗ ಅಬ್ರಾಮ್ ಖಾನ್ ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದು, ಇದು ಭಾರತದಲ್ಲಿ ಬಾಡಿಗೆ ತಾಯ್ತನದ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿತ್ತು.

ನಯನತಾರಾ-ವಿಘ್ನೇಶ್ ಶಿವನ್: ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಐವಿಎಫ್ ಸರೋಗಸಿ ಮೂಲಕ ಅವಳಿ ಗಂಡು ಮಕ್ಕಳಿಗೆ ಪೋಷಕರಾದರು.

ಆಮಿರ್ ಖಾನ್ ಮತ್ತು ಕಿರಣ್ ರಾವ್: ಇವರ ಮಗ ಆಜಾದ್ ರಾವ್ ಖಾನ್ ಕೂಡ ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದಾನೆ. ಗರ್ಭಪಾತ ಎದುರಿಸಿದ ನಂತರ ಈ ದಂಪತಿ ಈ ಆಯ್ಕೆ ಮಾಡಿಕೊಂಡಿದ್ದರು.

ಕರಣ್ ಜೋಹರ್: ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವಳಿ ಮಕ್ಕಳಾದ ಯಶ್ ಮತ್ತು ರೂಹಿಯನ್ನು ಬಾಡಿಗೆ ತಾಯ್ತನದ ಮೂಲಕ ಪಡೆದು ಸಿಂಗಲ್ ಪೇರೆಂಟ್ ಆಗಿ ಬೆಳೆಸುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್: ಇವರ ಮಗಳು ಮಾಲತಿ ಮೇರಿ ಚೋಪ್ರಾ ಜೋನಾಸ್ ಬಾಡಿಗೆ ತಾಯ್ತನದ ಮೂಲಕ ಜನಿಸಿದವರು.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ: ಇವರ ಎರಡನೇ ಮಗಳು ಸಮೀಶಾ ಶೆಟ್ಟಿ ಕುಂದ್ರಾ ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದಾಳೆ. ನೈಸರ್ಗಿಕವಾಗಿ ಗರ್ಭಿಣಿಯಾಗಲು ವಿಫಲರಾದ ನಂತರ ಶಿಲ್ಪಾ ಈ ಆಯ್ಕೆ ಮಾಡಿಕೊಂಡಿದ್ದರು.

ಪ್ರೀತಿ ಝಿಂಟಾ ಮತ್ತು ಜೀನ್ ಗುಡ್‌ಎನಫ್: ಇವರ ಅವಳಿ ಮಕ್ಕಳಾದ ಜಿಯಾ ಮತ್ತು ಜಯ್​ ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದಾಎರ. 

 

ಭಾರತದಲ್ಲಿ IVF ಮತ್ತು ಬಾಡಿಗೆ ತಾಯ್ತನದ ನಿಯಮಗಳು

ವೈದ್ಯಕೀಯ ಕ್ಷೇತ್ರದ ಅದ್ಭುತ ಆವಿಷ್ಕಾರಗಳಲ್ಲಿ ಈ ಎರಡೂ ಆಯ್ಕೆಗಳು ಸೇರಿವೆ. ನೈಸರ್ಗಿಕವಾಗಿ ಮಕ್ಕಳನ್ನು ಹೊಂದಲು ಸಾಧ್ಯವಾಗದ ದಂಪತಿಗೆ ಅಥವಾ ಒಂಟಿ ಪೋಷಕರಿಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಒದಗಿಸುತ್ತವೆ.

ಭಾರತದಲ್ಲಿ ಐವಿಎಫ್ ಮತ್ತು ಬಾಡಿಗೆ ತಾಯ್ತನವನ್ನು ನಿಯಂತ್ರಿಸಲು 2021ರಲ್ಲಿ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021 ಮತ್ತು ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021 ಜಾರಿಗೊಳಿಸಲಾಗಿದೆ. ಈ ಕಾಯಿದೆಯಡಿ ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಡಿಗೆ ತಾಯಿಗೆ ಕೇವಲ ವೈದ್ಯಕೀಯ ವೆಚ್ಚಗಳನ್ನು ಮಾತ್ರ ಭರಿಸಲಾಗುತ್ತದೆಯೇ ಹೊರತು, ಆರ್ಥಿಕ ಪರಿಹಾರ ನೀಡುವಂತಿಲ್ಲ. ಮಹಿಳೆಯರ ಶೋಷಣೆ ತಡೆಗಟ್ಟುವುದೇ ಇದರ ಉದ್ದೇಶ.

ಬಾಡಿಗೆ ತಾಯ್ತನದ ಅರ್ಹತೆಗಳೇನು?

* ಮದುವೆಯಾದ ಭಾರತೀಯ ದಂಪತಿಗಳು (ಭಿನ್ನಲಿಂಗೀಯರು) ಐದು ವರ್ಷದ ಬಳಿಕ ಮಾತ್ರ ಬಾಡಿಗೆ ತಾಯ್ತನಕ್ಕೆ ಅರ್ಹರು. ಅವರಲ್ಲಿ ಒಬ್ಬರಿಗೆ ಬಂಜೆತನದ ಸಮಸ್ಯೆ ಇರಬೇಕು.

* ವಿಧವೆ ಅಥವಾ ವಿಚ್ಛೇದಿತ ಮಹಿಳೆಯರು (35-45 ವರ್ಷ ವಯಸ್ಸಿನವರು) ಸಹ ಕೆಲವು ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಬಾಡಿಗೆ ತಾಯ್ತನ ಆರಿಸಿಕೊಳ್ಳಬಹುದು.

* ಬಾಡಿಗೆ ತಾಯ್ತನ ಮಾಡುವ ಮಹಿಳಿ ದಂಪತಿಗೆ ಹತ್ತಿರದ ಸಂಬಂಧಿಯಾಗಿರಬೇಕು, ವಿವಾಹಿತರಾಗಿರಬೇಕು ಮತ್ತು ಸ್ವಂತ ಮಗು ಹೊಂದಿರಬೇಕು. ವಯಸ್ಸು 25 ರಿಂದ 35 ವರ್ಷಗಳ ನಡುವೆ ಇರಬೇಕು.

* ದಾನಿ ಅಂಡಾಣು/ವೀರ್ಯಾಣು ಬಳಕೆ: 2024ರಲ್ಲಿ ಬಾಡಿಗೆ ತಾಯ್ತನ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ದಂಪತಿಯಲ್ಲಿ ಒಬ್ಬರು ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದರೆ ದಾನಿಯ ಅಂಡಾಣು ಅಥವಾ ವೀರ್ಯಾಣುವನ್ನು ಬಳಸಲು ಅವಕಾಶ ನೀಡಲಾಗಿದೆ.

ಭಾವನಾ ರಾಮಣ್ಣ ಅರ ತಾಯ್ತನದ ಆಯ್ಕೆ ಮತ್ತೊಂದು ಬಾರಿ ಸೆಲೆಬ್ರಿಟಿಗಳು ಹಾಗೂ ಹೊಸ ಪೀಳಿಗೆಯ ಮಹಿಳೆಯರ ವೈಯಕ್ತಿಕ ಆಯ್ಕೆಗಳ ಕುರಿತ ಚರ್ಚೆಗೆ ಕಾರಣವಾಗಿದೆ. ಅವಿವಾಹಿತರಾಗಿಯೇ ಉಳಿದು ಪೋಷಕರ ಪಾತ್ರವನ್ನು ವಹಿಸುವುದು ಒಂದು ಕಡೆಯಾದರೆ, ಆಧುನಿಕ ವೈದ್ಯಕೀಯ ತಂತ್ರಜ್ಱನ ಮತ್ತೊಂದು ಮಗ್ಗುಲಲ್ಲಿ ವಿಮರ್ಶೆಗೆ ಕಾರಣವಾಗಿದೆ.

Tags:    

Similar News