ಆರೋಗ್ಯವಾಗಿದ್ದೇನೆ: ಬಾಲಿವುಡ್‌ ನಟ ಗೋವಿಂದ

ʻಅಭಿಮಾನಿಗಳು, ಪೋಷಕರು ಮತ್ತು ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಗುಂಡು ಹೊರತೆಗೆಯಲಾಗಿದೆ. ಪ್ರಾರ್ಥನೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ,ʼ ಎಂದು ಆಡಿಯೋ ಸಂದೇಶದಲ್ಲಿ ಗೋವಿಂದ ಹೇಳಿದ್ದಾರೆ.

Update: 2024-10-01 06:58 GMT

ಬಾಲಿವುಡ್ ನಟ ಗೋವಿಂದ ಅವರ ರಿವಾಲ್ವರ್ ಲೆದರ್‌ ಕೇಸ್‌ಗೆ ಹಾಕುವ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು, ಗುಂಡು ಹಾರಿ ಕಾಲಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು,ಅಪಾಯದಿಂದ ಪಾರಾಗಿದ್ದಾರೆ ಎಂದು ವ್ಯವಸ್ಥಾಪಕ ಶಶಿ ಸಿನ್ಹಾ ತಿಳಿಸಿದ್ದಾರೆ.

ಮುಂಬೈನ ಜುಹೂನಲ್ಲಿರುವ ಮನೆಯಲ್ಲಿ ಅವರು ಒಬ್ಬಂಟಿಯಾಗಿದ್ದಾಗ ಮಂಗಳವಾರ ಮುಂಜಾನೆ 4.45 ಕ್ಕೆ ಅಪಘಾತ ಸಂಭವಿಸಿದೆ. ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಅವರಿಂದ ರಿವಾಲ್ವರ್‌ ವಶಪಡಿಸಿಕೊಂಡು, ತನಿಖೆ ಆರಂಭಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. .

ವಿಮಾನ ನಿಲ್ದಾಣಕ್ಕೆ ಹೊರಟಿದ್ದರು: ಅವರ ಮ್ಯಾನೇಜರ್ ಶಶಿ ಸಿನ್ಹಾ ಪ್ರಕಾರ, ಗೋವಿಂದ ಅವರು ಕೋಲ್ಕತ್ತಾಕ್ಕೆ ತೆರಳಲು ಬೆಳಗ್ಗೆ 6 ಗಂಟೆ ವಿಮಾನ ಹಿಡಿಯಬೇಕಿತ್ತು. ರಿವಾಲ್ವರ್‌ ಕೈಯಿಂದ ಜಾರಿ ಬಿದ್ದು, ಗುಂಡು ಅವರ ಕಾಲಿಗೆ ತಗುಲಿದೆ. ʻವೈದ್ಯರು ಕಾಲಿನಿಂದ ಗುಂಡು ತೆಗೆದಿದ್ದು, ದೇಹ ಸ್ಥಿತಿ ಉತ್ತಮವಾಗಿದೆ,ʼ ಎಂದು ಸಿನ್ಹಾ ತಿಳಿಸಿದ್ದಾರೆ. ಗೋವಿಂದ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. 

ʻದೇವರ ದಯೆಯಿಂದ ಅವರಿಗೆ ಗಂಭೀರ ಗಾಯವಾಗಿಲ್ಲʼ ಎಂದು ಸಿನ್ಹಾ ಹೇಳಿದ್ದಾರೆ.

ಗೋವಿಂದ 90ರ ದಶಕದ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಆಕ್ಷನ್ ಹೀರೋ ಆಗಿ ವೃತ್ತಿ ಪ್ರಾರಂಭಿಸಿದ ಅವರು ಆನಂತರ ಹಲವು ಹಾಸ್ಯ ಚಿತ್ರಗಳನ್ನು ಮಾಡಿದರು. ನೃತ್ಯಕ್ಕೆ ಹೆಸರಾಗಿದ್ದರು. ಕಳೆದ ಐದು ವರ್ಷದಿಂದ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. 

ಕ್ಷೇಮವಾಗಿದ್ದೇನೆ: ʻಅಭಿಮಾನಿಗಳು, ಪೋಷಕರು ಮತ್ತು ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಗುಂಡು ಹೊರತೆಗೆಯಲಾಗಿದೆ. ನಾನು ಇಲ್ಲಿನ ವೈದ್ಯರಿಗೆ, ಡಾ.ಅಗರ್ವಾಲ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆ ಗಳಿಗಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ,ʼ ಎಂದು ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಮುಂಬೈ ಪೊಲೀಸರು ನಟನ ಜುಹೂ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋವಿಂದ ಅವರ ಸಹೋದರ ಕೀರ್ತಿ ಕುಮಾರ್ ಅವರ ಪ್ರಕಾರ, ʻಇದೊಂದು ವಿಚಿತ್ರ ಘಟನೆ. ಅವರು  ಅದೃಷ್ಟವಂತರುʼ. ʻಅವರು ರಿವಾಲ್ವರ್‌ ನ್ನು ಪರಿಶೀಲಿಸುತ್ತಿದ್ದರು. ಅದು ಆಕಸ್ಮಿಕವಾಗಿ ಕೈಯಿಂದ ಜಾರಿಬಿದ್ದು ಗುಂಡು ಹಾರಿತು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪಿದ್ದು, ಈಗ ಚೆನ್ನಾಗಿದ್ದಾರೆ. ಆಪರೇಷನ್ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. 2-3 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಅವರ ಸ್ಥಿತಿ ಉತ್ತಮವಾದರೆ, ಇಂದೇ ಮನೆಗೆ ಹೋಗಬಹುದು,ʼ ಎಂದು ಕುಮಾರ್  ಸುದ್ದಿಗಾರರಿಗೆ ತಿಳಿಸಿದರು.

ಅವರನ್ನು ಚಿಕಿತ್ಸೆಗೆ ನಿವಾಸದ ಬಳಿ ಇರುವ ಕ್ರಿಟಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಬಗ್ಗೆ ಯಾರೂ ದೂರು ನೀಡಿಲ್ಲ.ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ತಂಡ ಬೆಳಗ್ಗೆ ಪಂಚನಾಮೆ ನಡೆಸಲು ಅವರ ಮನೆಗೆ ಆಗಮಿಸಿತ್ತು. ಪರವಾನಗಿ ಇರುವ ರಿವಾಲ್ವರ್ ನ್ನು ಹೆಚ್ಚಿನ ತನಿಖೆಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಪರಾಧ ವಿಭಾಗದ ಅಧಿಕಾರಿಗಳು ಕೂಡ ನಟನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎಂದು ಹೇಳಿದರು.

ಪೂರ್ವಾಪರ: ಗೋವಿಂದ ಅರುಣ್ ಅಹುಜಾ ಅವರ ಸಿನೆಮಾ ಹೆಸರು ಗೋವಿಂದ. 1986 ರಲ್ಲಿ ʻಲವ್ 86ʼ ನೊಂದಿಗೆ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. 1980 ರ ದಶಕದ ಉತ್ತರಾರ್ಧ ಮತ್ತು 1990 ರ ದಶಕದ ಆರಂಭದಲ್ಲಿ ಹಿಂದಿ ಚಿತ್ರರಂಗದ ಸ್ಟಾರ್‌ ಆಗಿದ್ದ ಗೋವಿಂದ,  ನಾಲ್ಕು ದಶಕಗಳಲ್ಲಿ 165 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಇಲ್ಜಾಮ್, ಜುಗಾರಿ, ಆಂಖೇನ್, ರಾಜಾ ಬಾಬು, ಸಾಜನ್ ಚಲೇ ಸಸುರಾಲ್, ಬಡೆ ಮಿಯಾನ್ ಚೋಟೆ ಮಿಯಾ, ಭಾಗಂ ಭಾಗ್ ಮತ್ತು ಪಾರ್ಟ್‌ನರ್‌ʼ ಅವರ ಯಶಸ್ವಿ ಚಿತ್ರಗಳು. ಅವರ ಕೊನೆಯ ಚಿತ್ರ 2019 ರ ʻರಂಗೀಲಾ ರಾಜʼ.

ಕಳೆದ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆಗೆ ಒಂದು ತಿಂಗಳ ಮೊದಲು, ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದರು. 2004 ರಲ್ಲಿ ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ಅವರು 2008ರಲ್ಲಿ ರಾಜಕೀಯದಿಂದ ದೂರ ಸರಿದರು. 

Tags:    

Similar News