ನಟಿಸಿದ್ದು 500ಕ್ಕೂ ಹೆಚ್ಚು ಚಿತ್ರಗಳಲ್ಲಿ; ತೃಪ್ತಿ ಮಾತ್ರ ಇರಲಿಲ್ಲ; ಇದು ಬ್ಯಾಂಕ್ ಜನಾರ್ದನ್ ಕಥೆ …
ಜನಾರ್ಧನ್ ಅದೆಷ್ಟೇ ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಗಿಸಿದರೂ, ಸೆಂಟಿಮೆಂಟ್ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಇದ್ದೇ ಇತ್ತು. ಅವರೇ ಹೇಳಿಕೊಂಡಂತೆ ಅವರ ಮೆಚ್ಚಿನ ನಟರೆಂದರೆ ಅದು ಟಿ.ಎನ್. ಬಾಲಕೃಷ್ಣ. ಬಾಲಣ್ಣ ಹೇಗೆ ಕಾಮಿಡಿ ಪಾತ್ರಗಳ ಜೊತೆಗೆ ಸೆಂಟಿಮೆಂಟ್ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರೋ, ತಮಗೂ ಅಂತೂ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಅವರಿಗೆ ಇದ್ದೇ ಇತ್ತು.;
ಬ್ಯಾಂಕ್ ಜನಾರ್ಧನ್
ಅವರನ್ನು ಎಲ್ಲರೂ ಗುರುತಿಸುತ್ತಿದ್ದುದೇ ಬ್ಯಾಂಕ್ ಜನಾರ್ಧನ್ ಎಂದು. ಅದಕ್ಕೆ ಕಾರಣ ಅವರು ವಿಜಯಾ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಕೈತುಂಬಾ ಸಂಬಳ ಬರಬಹುದು ಎಂದು ಚಿತ್ರರಂಗದವರು ಭಾವಿಸಿದ್ದರು. ಚಿತ್ರಗಳಲ್ಲಿ ಸತತವಾಗಿ ನಟಿಸುತ್ತಿದ್ದರಿಂದ, ಚಿತ್ರರಂಗದಿಂದ ಒಳ್ಳೆಯ ವರಮಾನ ಇದೆ ಎಂದು ಬ್ಯಾಂಕ್‍ನವರು ಅಂದುಕೊಂಡಿದ್ದರು. ಆದರೆ, ಎರಡೂ ಕಡೆ ಅದು ಸುಳ್ಳಾಗಿತ್ತು. ಸತತವಾಗಿ ರಜೆ ಹಾಕುತ್ತಿದ್ದರಿಂದ ಬ್ಯಾಂಕಿನಿಂದ ಸಂಬಳ ಸಿಗುತ್ತಿರಲಿಲ್ಲ. ಮಾಡುತ್ತಿದ್ದುದು ಒಂದೆರಡು ದಿನಗಳ ಸಣ್ಣಪುಟ್ಟ ಪಾತ್ರಗಳಾದ್ದರಿಂದ ದೊಡ್ಡ ಸಂಭಾವನೆ ಸಿಗುತ್ತಿರಲಿಲ್ಲ.
ಆ ತರಹದ ಪಾತ್ರ ಮಾಡಲಿಲ್ಲ ಎಂಬ ಬೇಸರ
ಒಟ್ಟಾರೆ ಸತತವಾಗಿ ಬ್ಯುಸಿಯಾಗಿದ್ದರೂ, ಕೈತುಂಬಾ ಕೆಲಸವಿದ್ದರೂ ಬ್ಯಾಂಕ್ ಜನಾರ್ಧನ್ ಅವರನ್ನು ಒಂದು ರೀತಿ ಅತೃಪ್ತಿ ಕಾಡುತ್ತಲೇ ಇತ್ತು. ಅದಕ್ಕಿಂತ ಹೆಚ್ಚಾಗಿ, ಅವರಿಗೆ ಇನ್ನೊಂದು ದೊಡ್ಡ ಅತೃಪ್ತಿ ಇತ್ತು. ಅದು ತಮ್ಮ ಕ್ಯಾಲಿಬರ್ಗೆ ತಕ್ಕುದಾದ, ತಮಗೆ ಇಷ್ಟವಾದ ಪಾತ್ರ ಸಿಗಲಿಲ್ಲ ಎಂಬ ಬೇಸರ ಒಳಗೊಳಗೆ ಕಾಡುತ್ತಿತ್ತು. ಜನಾರ್ಧನ್ ಅದೆಷ್ಟೇ ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಗಿಸಿದರೂ, ಸೆಂಟಿಮೆಂಟ್ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಇದ್ದೇ ಇತ್ತು. ಅವರೇ ಹೇಳಿಕೊಂಡಂತೆ ಅವರ ಮೆಚ್ಚಿನ ನಟರೆಂದರೆ ಅದು ಟಿ.ಎನ್. ಬಾಲಕೃಷ್ಣ. ಬಾಲಣ್ಣ ಹೇಗೆ ಕಾಮಿಡಿ ಪಾತ್ರಗಳ ಜೊತೆಗೆ ಸೆಂಟಿಮೆಂಟ್ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರೋ, ತಮಗೂ ಅಂತೂ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಅವರಿಗೆ ಇದ್ದೇ ಇತ್ತು.
500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜನಾರ್ಧನ್
ಕನ್ನಡದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕಲಾವಿದರು ಬೆರಳಣಿಕೆಯಷ್ಟು ಇದ್ದಾರೆ. ಹೊನ್ನವಳ್ಳಿ ಕೃಷ್ಣ, ಬಿರಾದಾರ್ ಮತ್ತು ಬ್ಯಾಂಕ್ ಜನಾರ್ಧನ್ ಪ್ರಮುಖವಾಗಿ ನೆನಪಾಗುತ್ತಾರೆ. ಜನಾರ್ಧನ್ ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೂ, ಡಾ. ರಾಜಕುಮಾರ್ ಅವರಿಂದ ಹೊಸಬರವರೆಗೂ ಎಲ್ಲಾ ಹೀರೋಗಳ ಜೊತೆಗೆ ನಟನೆ ಮಾಡಿದ್ದರೂ, ತಮಗೆ ಬೇರೆ ತರಹದ ಪಾತ್ರಗಳು ಸಿಗಲಿಲ್ಲ, ಬರೀ ಕಾಮಿಡಿ ಪಾತ್ರಗಳಿಗೆ ಚಿತ್ರರಂಗದವರು ಸೀಮಿತ ಮಾಡಿದರು ಎಂಬ ಬೇಸರ ಸಹಜವಾಗಿಯೇ ಇತ್ತು.
ವಿಲನ್ ಪಾತ್ರ ಮಾಡುವ ಆಸೆಯಿಂದ ಚಿತ್ರರಂಗಕ್ಕೆ ಎಂಟ್ರಿ
ಹಾಗೆ ನೋಡಿದರೆ, ಜನಾರ್ಧನ್ ಚಿತ್ರರಂಗಕ್ಕೆ ಬಂದಿದ್ದು ವಿಲನ್ ಪಾತ್ರಗಳನ್ನು ಮಾಡುವುದಕ್ಕೆಂದು. ಅದಕ್ಕೆ ಕಾರಣ ಅವರು ತಮ್ಮೂರಿನ ‘ಗೌಡ್ರ ಗದ್ಲ’ ನಾಟಕದಲ್ಲಿ ವಿಲನ್ ಪಾತ್ರ ಮಾಡಿದ್ದರು. ಆ ಪಾತ್ರದಿಂದಲೇ ಸುತ್ತಮುತ್ತಲ ಹಳ್ಳಿಗಳಲ್ಲಿ ಜನಪ್ರಿಯರಾಗಿದ್ದರು. ಮೂಲತಃ ಚಿತ್ರದುರ್ಗದ ಹೊಳಲ್ಕೆಯವರಾದ ಜನಾರ್ಧನ್ ಓದಿದ್ದು 10ನೇ ಕ್ಲಾಸಿನವರೆಗೆ ಮಾತ್ರ. ಕಡು ಬಡ ಕುಟುಂಬದವರಾದ ಜನಾರ್ಧನ್, ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬೆಳೆದವರು. ‘ಗಂಡ್ಸಲ್ವೇ ಗಂಡ್ಸು’ ಮುಂತಾದ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ ಜನಾರ್ಧನ್, ಜಯಲಕ್ಷ್ಮೀ ಬ್ಯಾಂಕ್‍ನಲ್ಲಿ (ನಂತರ ವಿಜಯಾ ಬ್ಯಾಂಕ್‍ನಲ್ಲಿ ವಿಲೀನವಾಯಯಿತು) ಜವಾನನಾಗಿ ಕೆಲಸಕ್ಕೆ ಸೇರಿದರು. ಜೊತೆಗೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ಎಂಬ ಟಾಕೀಸ್‍ನಲ್ಲೂ ರಾತ್ರಿ ಹೊತ್ತು ಕೆಲಸ ಮಾಡುತ್ತಿದ್ದರು. ಹೀಗಿರುವಾಗಲೇ, ಅವರ ಅಭಿನಯದ ‘ಗೌಡ್ರ ಗದ್ಲ’ ನಾಟಕ ಯಶಸ್ವಿಯಾಯಿತು. ಈ ನಾಟಕವನ್ನು ವೀಕ್ಷಿಸಿದ ಹಿರಿಯ ನಟ ಧೀರೇಂದ್ರ ಗೋಪಾಲ್, ಜನಾರ್ಧನ್ ಅವರನ್ನು ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರೋತ್ಸಾಹಿಸಿದರು.
‘ಊರಿಗೆ ಉಪಕಾರಿ’ ಚಿತ್ರದಿಂದ ಚಿತ್ರಪಯಣ ಪ್ರಾರಂಭ
ಪ್ರತಿದಿನ ಟೂರಿಂಗ್ ಟಾಕೀಸ್‍ನಲ್ಲಿ ಚಿತ್ರ ನೋಡುವ ರೋಮಾಂಚನ, ಜೊತೆಗೆ ಧೀರೇಂದ್ರ ಗೋಪಾಲ್‍ರಂತಹ ಹಿರಿಯ ನಟರ ಪ್ರೋತ್ಸಾಹ … ಇದೆಲ್ಲದರಿಂದ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆಯಿಂದ ಬೆಂಗಳೂರಿಗೆ ಬಂದ ಜನಾರ್ಧನ್, ಧೀರೇಂದ್ರ ಗೋಪಾಲ್ ಅವರ ಜೊತೆಗೆ ವಿಷ್ಣುವರ್ಧನ್ ಅಭಿನಯದ ‘ಸಾಹಸ ಸಿಂಹ’ ಚಿತ್ರದ ಚಿತ್ರೀಕರಣಕ್ಕೆ ಹೋದರು. ಅಲ್ಲಿ ನಿರ್ದೇಶಕ ಜೋಸೈಮನ್, ಬರಹಗಾರ ಕುಣಿಗಲ್ ನಾಗಭೂಷಣ್ ಅವರ ಪರಿಚಯವಾಗಿ, ಅವರಿಬ್ಬರ ಮುಂದಿನ ಚಿತ್ರ ‘ಊರಿಗೆ ಉಪಕಾರಿ’ಯಲ್ಲೊಂದು ಪಾತ್ರ ಗಿಟ್ಟಿಸಿದರು. ವಜ್ರಮುನಿ ಅವರ ಬಾಡಿಗಾರ್ಡ್ ಪಾತ್ರದಲ್ಲಿ ಗಮನಸೆಳೆದ ಜನಾರ್ಧನ್, ಮುಂದಿನ ದಿನಗಳಲ್ಲಿ ವಿಲನ್ ಪಾತ್ರಗಳನ್ನು ಮಾಡಬೇಕು ಎಂದು ಆಸೆಪಟ್ಟರೂ ಅವರಿಗೆ ಸಿಕ್ಕಿದ್ದು ಲಾಯರ್, ಡಾಕ್ಟರ್, ಇನ್‍ಸ್ಪೆಕ್ಟರ್ ಪಾತ್ರಗಳೇ. ಅದೂ ಒಂದೆರಡು ದೃಶ್ಯಗಳಿರುವ ಪಾತ್ರಗಳೇ.
‘ಅಜಗಜಾಂತರ’ ಚಿತ್ರದಿಂದ ಕಾಮಿಡಿ ಪಾತ್ರಗಳಿಗೆ ಬ್ರಾಂಡ್
ಈ ಮಧ್ಯೆ, ವರ್ಗ ಮಾಡಿಸಿಕೊಂಡು ಬೆಂಗಳೂರಿಗೆ ಬಂದ ಅವರಿಗೆ ಅದೊಂದು ದಿನ ಕಾಶೀನಾಥ್ ಅವರಿಂದ ಕರೆಬಂತಂತೆ. ಕಾಶೀನಾಥ್ ಆಗ ‘ಅಜಗಜಾಂತರ’ ಚಿತ್ರದ ಸಿದ್ಧತೆಯಲ್ಲಿದ್ದರು. ಈ ಚಿತ್ರದಲ್ಲಿ ಜನಾರ್ಧನ್ ಅವರಿಗೆ ಬ್ರೋಕರ್ ಭೀಮಯ್ಯ ಎಂಬ ಕಾಮಿಡಿ ವಿಲನ್ ಪಾತ್ರ ಕೊಟ್ಟರು. ಈ ಪಾತ್ರ ಜನಪ್ರಿಯವಾಗಿ, ನಂತರ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದಲ್ಲಿ ಪರಂಧಾಮಯ್ಯ ಊರುಬಾಗ್ಲು ಎಂಬ ಇನ್ನೊಂದು ಕಾಮಿಡಿ ಪಾತ್ರ ಸಿಕ್ಕಿತು. ಈ ಚಿತ್ರಗಳಲ್ಲಿ ಗಮನಸೆಳೆದ ಜನಾರ್ಧನ್ ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ. ಅಲ್ಲಿಂದ ಅವರ ಮತ್ತು ಜಗ್ಗೇಶ್ ಅವರ ಜೋಡಿ ಜನಪ್ರಿಯವಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವಂತಾಯಿತು. ಮುಂದಿನ ದಿನಗಳಲ್ಲಿ ‘ಸೂಪರ್ ನನ್ಮಗ’, ‘ಬೊಂಬಾಟ್ ಹುಡ್ಗ’, ‘ಗುಂಡನ ಮದುವೆ’, ‘ಸೀತಾಂಜನೇಯ’, ‘ಶ್’, ‘ಮೇಕಪ್’, ‘ಮಿಸ್ಟರ್ ಬಕ್ರ’, ‘ಓಳು ಸಾರ್ ಬರೀ ಓಳು’, ‘ರೂಪಾಯಿ ರಾಜ’, ಸೇರಿದಂತೆ ಇದುವರೆಗೂ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಎಷ್ಟೇ ಚಿತ್ರಗಳಲ್ಲಿ ನಟಿಸಿದರೂ, ತಮಗೆ ಇಷ್ಟವಾದ ಪಾತ್ರ ಸಿಗಲಿಲ್ಲ, ತಾನು ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾದೆ ಎಂಬ ಬೇಸರ ಅವರಲ್ಲಿದ್ದೇ ಇತ್ತು.
ಇತ್ತೀಚಿನ ವರ್ಷಗಳಲ್ಲಿ ಹೃದಯದ ಸಮಸ್ಯೆಯಿಂದ ನಟಿಸುವುದನ್ನು ಕಡಿಮೆ ಮಾಡಿದ್ದ ಅವರು, ಆಗಾಗ ಅಪರೂಪಕ್ಕೆಂಬಂತೆ ಒಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರು. 2023ರಲ್ಲಿ ಬಿಡುಗಡೆಯಾದ ‘ಉಂಡೆನಾಮ’ ಚಿತ್ರವು ಅವರ ಕೊನೆಯ ಚಿತ್ರವಾಯ್ತು. ಕೆಲವು ವರ್ಷಗಳ ಹಿಂದೆಯೇ ಹೃದಯದ ಚಿಕಿತ್ಸೆಗೆ ಒಳಗಾಗಿದ್ದ ಅವರು, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ 2.30ರ ಹೊತ್ತಿಗೆ ಅವರು ನಿಧನರಾಗಿದ್ದಾರೆ. ಜನಾರ್ಧನ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಆಗಿದೆ.