ಡಬಲ್ ಮೀನಿಂಗ್ ಇಲ್ಲದೇ ಇಷ್ಟವಾಗುವ ಮಾಗಿದ ಸಿದ್ಲಿಂಗು

ನಟ ಲೂಸ್ ಮಾದ ಯೋಗಿ ಹಳೆಯ ಸಿದ್ಲಿಂಗುವಿಗಿಂತ ಬಹಳ ಮಾಗಿದ್ದು, ಹದಿಮೂರು ವರ್ಷಗಳ ನಂತರ ಬಂದಿರುವ ಎರಡನೇ ಸಿದ್ಲಿಂಗು ವಯಸ್ಸಿಗೆ ತಕ್ಕಂತೆ ಪೋಲಿತನದಿಂದ ಪ್ರಬುದ್ಧತೆಗೆ ಅಡಿ ಇಟ್ಟಿದ್ದು, ಕುತ್ತಿಗೆಗೆ ನೆಕ್ ಬೆಲ್ಟ್ ಹಾಕಿಕೊಂಡು ಹೆಚ್ಚು ಅಲುಗಾಡದೇ ಅಬ್ಬರವಿಲ್ಲದೆ ಆಡುವ ಮಾತುಗಳು ಇಷ್ಟವಾಗುತ್ತವೆ.;

Update: 2025-02-15 14:32 GMT
ಸಿದ್ಲಿಂಗು

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳ ಕೊರತೆ ಎದ್ದು ಕಾಣುತ್ತಿದ್ದರೂ, ಪ್ರತಿವಾರ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆಗಳಿಗೇನು ಕಡಿಮೆ ಇಲ್ಲ. ಹೊಸಬರ ಪ್ರಯೋಗಗಳು, ಹಳೆಯ ಯಶಸ್ವಿ ಚಿತ್ರಗಳ ಮುಂದುವರಿದ ಭಾಗಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಲೇ ಇವೆ.

ನಟ ಯೋಗಿ ಅಭಿನಯದ ಸಿದ್ಲಿಂಗು 2 ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು, ಹಳೆಯ ಸಿದ್ಲಿಂಗುವಿನ ಪ್ಲಾಶ್ ಬ್ಯಾಕ್‌ನೊಂದಿಗೆ ಯಾವುದೇ ಅಬ್ಬರವಿಲ್ಲದೇ ಆರಂಭವಾಗುವ ಸಿದ್ಲಿಂಗುವಿನ ಎರಡನೇ ಪಯಣ ಬೇಸಿಗೆಯ ಬಿಸಿಲಿನಲ್ಲಿ ಮುಸ್ಸಂಜೆಯ ತಂಗಾಳಿ ಮೈಗೆ ಸೋಕಿದ ಹಿತ ನೀಡುತ್ತದೆ. ಮೊದಲ ಭಾಗದ ಸಿದ್ಲಿಂಗುವಿನ ಪೊಲಿತನ, ಡಬಲ್ ಮೀನಿಂಗ್ ಮಾತುಗಳು ಇಲ್ಲಿ ತುಟಿಯಂಚಿನವರೆಗೂ ಬಂದು ಸ್ವಯಂ ನಿಯಂತ್ರಣ ಎನ್ನುವಂತೆ ನಾಲಿಗೆಯಿಂದ ಹೊರ ಬರುವಾಗ ವಿಡಂಬನೆಯ ಜೊತೆಗೆ ಮಾಗಿದ ರೂಪ ತಾಳಿರುವುದು ನಿರ್ದೇಶಕರ ಪ್ರಬುದ್ಧತೆ ಎದ್ದು ಕಾಣಿಸುತ್ತದೆ.

ತನ್ನ ಹಳೆಯ ಕಾರನ್ನು ಮರಳಿ ಪಡೆಯಲು ಪಯತ್ನಿಸುವ ಸಿದ್ಲಿಂಗುವಿನ ದಾರಿಯಲ್ಲಿ ಬರುವ ಪಾತ್ರಗಳೆಲ್ಲವೂ ಬದುಕಿನ ಒಂದೊಂದು ರೂಪಕಗಳಾಗಿ ಸಮಾಜದ ಪ್ರತಿಬಿಂಬಗಳಾಗಿ ವ್ಯವಸ್ಥೆಯನ್ನು ಅನಾವರಣಗೊಳಿಸುತ್ತ ಹೋಗುತ್ತವೆ.

ನಿರ್ದೇಶಕ‌ ವಿಜಯ ಪ್ರಸಾದ್ ಚಿತಕಥೆಗೆ ಅಯ್ಯಪ್ಪ ಸ್ವಾಮಿಯನ್ನೇ ಮಾರ್ಗದರ್ಶನಕ್ಕೆ ಇಟ್ಟುಕೊಂಡಿದ್ದು. ಕಥೆಯ ಜೊತೆಗೆ ಚಿತಕಥೆಯಲ್ಲಿ ಮುಂದೇನಾಗುತ್ತದೆ ಎನ್ನುವುದನ್ನೂ ತಾವೇ ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡು ಸಿದ್ಲಿಂಗುವಿಗೆ ದಾರಿ ತೋರುವ ಕಾಲಜ್ಞಾನಿಯಾಗುವ ಮೂಲಕ ಆಸ್ತಿಕರಿಗೆ ದೈವದ ಲೀಲೆ ಎನಿಸುವಂತೆ ಕಾಣಿಸುತ್ತದೆ. ಆದರೆ, ನಾಸ್ತಿಕರಿಗೆ ಇದೊಂದು ಕ್ಲೀಷೆಯಂತೆ ಕಾಣಿಸಬಹುದು. ಸ್ಮಶಾನದ ಗುಂಡಿ ತೋಡುವಾಗ ನಿಧಿಯಂತೆ ದೊರೆಯುವ ಅಯ್ಯಪ್ಪ ಸ್ವಾಮಿ ಚಿತ್ರದುದ್ದಕ್ಕೂ ನಿರ್ದೇಶಕರ ಕಾಲ ಜ್ಞಾನದ ಮುನ್ಸೂಚನೆಗಳ ಮೂಲಕ ಸಿದ್ಲಿಂಗುವನ್ನು ಹೇಗೆ ತನ್ನ ಗುರಿ ತಲುಪಲು ದಾರಿ ತೋರುತ್ತಾನೆ ಎನ್ನುವುದೇ ಚಿತ್ರದ ತಿರುಳು.

ಸಿದ್ಲಿಂಗುವಿನ ಮಂಗಳಾ ಟೀಚರ್ ರಮ್ಯಾ ಆಗಾಗ ಪ್ಲಾಶ್ ಬ್ಯಾಕ್ ಮೂಲಕ ತೆರೆಯ ಮೇಲೆ ಬರುವ ಮೂಲಕ ಮೊದಲ ಭಾಗದ ಕಥೆಯನ್ನು ಆಗಾಗ ನೆನಪಿಸುತ್ತಲೇ ಚಿತ್ರ ಸಾಗುತ್ತದೆ. ನಿರ್ದೇಶಕರು ಅವಕಾಶ ಸಿಕ್ಕಾಗಲೆಲ್ಲಾ ಮಾಜಿ ಪ್ರಧಾನಿ ದೇವೇಗೌಡರಿಂದ ಹಿಡಿದು ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಮೂಡಾ ಹಗರಣ, ನೀಟ್ ಹಗರಣ. ಹಾಸನದ ಮಾಜಿ ಸಂಸದನ ಪೆನ್ ಡ್ರೈವ್ ಪ್ರಕರಣಗಳನ್ನು ಪ್ರಸ್ತಾಪಿಸಿ ಸೂಜಿ ಚುಚ್ಚುವ ಕೆಲಸ ಮಾಡಿದ್ದಾರೆ. ಟಿ ಮಾರುವ ಹುಡುಗ ದೇಶದ ಪ್ರಧಾನಿಯಾಗಿರುವುದು ದೇಶದ ಪ್ರಜಾಪ್ರಭುತ್ತದ ವೈಶಿಷ್ಟ್ಯ ಎನ್ನುವುದನ್ನೂ ನೆನಪಿಸಿದ್ದಾರೆ.

ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ಇರುವ ಮಹತ್ವ ಮತ್ತು ಘನತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿರುವ ನಿರ್ದೇಶಕರು, ತಂದೆ ತಾನು ಮಾಡಿದ ತಪ್ಪಿಗೆ ಸ್ವಂತ ಮಗಳ ಕಾಲು ಮುಟ್ಟಿ ತಪ್ಪಿಗೆ ಕ್ಷಮೆ ಕೇಳಿಸುವ ಮೂಲಕ ಹೆಣ್ಣು ತಾಯಿಯಾಗಲೀ, ಮಗಳಾಗಲೀ ಹೆಣ್ಣು ಯಾವ ರೂಪದಲ್ಲಿದ್ದರೂ ಅವಳು ಶ್ರೇಷ್ಠ ಎನ್ನುವುದನ್ನು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಸ್ವಂತ ಮಗಳನ್ನೇ ಬೀದಿ ನಾಯಿ ಎನ್ನುವ ತಂದೆಗೆ ಮಗಳ ಮೇಲೆ ಅಷ್ಟೊಂದು ದ್ವೇಷಕ್ಕೆ ಕಾರಣ ಏನು ಎನ್ನುವುದಕ್ಕೆ ಸಷ್ಟ ಕಾರಣ ನೀಡಿಲ್ಲ.

ನಟ ಲೂಸ್ ಮಾದ ಯೋಗಿ ಹಳೆಯ ಸಿದ್ಲಿಂಗುವಿಗಿಂತ ಬಹಳ ಮಾಗಿದ್ದು, ಹದಿಮೂರು ವರ್ಷಗಳ ನಂತರ ಬಂದಿರುವ ಎರಡನೇ ಸಿದ್ಲಿಂಗು ವಯಸ್ಸಿಗೆ ತಕ್ಕಂತೆ ಪೋಲಿತನದಿಂದ ಪ್ರಬುದ್ಧತೆಗೆ ಅಡಿ ಇಟ್ಟಿದ್ದು, ಕುತ್ತಿಗೆಗೆ ನೆಕ್ ಬೆಲ್ಟ್ ಹಾಕಿಕೊಂಡು ಹೆಚ್ಚು ಅಲುಗಾಡದೇ ಅಬ್ಬರವಿಲ್ಲದೆ ಆಡುವ ಮಾತುಗಳು ಇಷ್ಟವಾಗುತ್ತವೆ. ನಿರ್ದೇಶಕರು ಸರ್ಕಾರಿ ಶಾಲೆಗೆ ಸ್ಲೀವ್ ಲೆಸ್‌ ಹಾಕಿರುವ ಟೀಚರನ್ನು ಪರಿಚಯಿಸುವ ಮೂಲಕ ಸರ್ಕಾರಿ ಶಾಲೆ ಟೀಚರ್‌ಗಳಿಗೆ ಹೊಸದೊಂದು ಆಸೆ ಚಿಗುರುವಂತೆ ಮಾಡಿದ್ದಾರೆ. ನಟಿ ಸೋನುಗೌಡ ಕಡಿಮೆ ಮಾತು. ಮಂದಹಾಸದ ಮುಖದ ಮೂಲಕ ಇಷ್ಟವಾಗುತ್ತಾರೆ. ಮಂಜುನಾಥ ಹೆಗಡೆ, ಪದ್ಮಜಾ ರಾವ್ ಪಾತ್ರಗಳಲ್ಲಿ ಜೀವಿಸಿದ್ದಾರೆ. ತನ್ನನ್ನು ತಾನು ಟೈಗರ್ ಪ್ರಭಾಕರ್ ಎಂದು ಹೇಳಿಕೊಳ್ಳುವ ಸ್ವಂತ ಮಗಳನ್ನೇ ದ್ವೇಷಿಸುವ ಅಸಹನೀಯ ತಂದೆಯಾಗಿ ಬಿ.ಸುರೇಶ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲ ಸಿದ್ಲಿಂಗುವಿನಲ್ಲಿ ತನ್ನ ಮಾದಕತೆಯಿಂದಲೇ ಪಡ್ಡೆಗಳ ನಿದ್ದೆಗೆಡಿಸಿದ್ದ ತುರುವೆಕೆರೆ ಅಂಡಾಳಮ್ಮ ನಟಿ ಸುಮನ್ ರಂಗನಾಥ್ ಗೆ ವಯಸ್ಸಾಗಿರೋದ್ರಿಂದ ಹರೆಯದಲ್ಲಿ ಆಡಿದ ಆಟ ಈಗ ಆಡಲು ಆಗುವುದಿಲ್ಲ, ಆಡಿದರೆ ಶೋಭೆಯೂ ಅಲ್ಲ ಎಂದು ಅವರಾಟ ನಿಯಂತ್ರಿಸಿದ್ದು ಚಿತ್ರದಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಿಲ್ಲ.

ಚಿತ್ರದಲ್ಲಿ ಹಾಡುಗಳಿಗಿಂತ ಅಯ್ಯಪ್ಪ ಸ್ವಾಮಿಯ ಭಜನೆ ಥೇಟರಿನಿಂದ ಹೊರ ಬಂದರೂ ಗುಣುಗುವಂತಿದೆ. ಡಬಲ್ ಮೀನಿಂಗ್ ಡೈಲಾಗ್ ಕೇಳುವ ಆಸೆ ಬಿಟ್ಟು ಕೂಲಾಗಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂದರೆ ಸ್ವಂತ ಕುಟುಂಬ ಕರೆದುಕೊಂಡು ಒಂದು ಬಾರಿ ಥೇಟರಿಗೆ ಹೋಗಿ ನೋಡಬಹುದು.

Tags:    

Similar News