ಕೃತಿಚೌರ್ಯ ಪ್ರಕರಣ; ನಿರೀಕ್ಷಣಾ ಜಾಮೀನು ಕೋರಿ ರಕ್ಷಿತ್ ಶೆಟ್ಟಿ ಅರ್ಜಿ

ನಟ, ನಿರ್ಮಾಪಕ, ನಿರ್ದೇಶಕ ರಕ್ಷಿತ್ ಶೆಟ್ಟಿ ತಮ್ಮ ಇತ್ತೀಚಿನ ಚಲನಚಿತ್ರ ಬ್ಯಾಚುಲರ್ ಪಾರ್ಟಿಯಲ್ಲಿ ಅನಧಿಕೃತವಾಗಿ ಹಾಡುಗಳನ್ನು ಬಳಸಿದ್ದಕ್ಕಾಗಿ ಹಕ್ಕುಸ್ವಾಮ್ಯ ಉಲ್ಲಂಘನೆಯ ಪ್ರಕರಣವನ್ನು ಎದುರಿಸುತ್ತಿದ್ದಾರೆ.;

Update: 2024-07-21 06:42 GMT
ನಟ ರಕ್ಷಿತ್‌ ಶೆಟ್ಟಿ
Click the Play button to listen to article

ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್‌ ಶೆಟ್ಟಿ ವಿರುದ್ದ ಸಂಸ್ಥೆಯೊಂದು ಕೃತಿ ಚೌರ್ಯ ಪ್ರಕರಣ ದಾಖಲಿಸಿದ್ದು, ರಕ್ಷಿತ್‌ ಶೆಟ್ಟಿಗೆ ಬಂಧನದ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಪ್ರಕರಣದಲ್ಲಿ ಬಂಧನವಾಗದಂತೆ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಎಂಆರ್‌ಟಿ ಮ್ಯೂಸಿಕ್ ಕಂಪನಿಯ ನವೀನ್ ಕುಮಾರ್  ರಕ್ಷಿತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರ ದೂರಿನ ಆಧಾರದ ಮೇಲೆ ರಕ್ಷಿತ್‌ ಶೆಟ್ಟಿ ವಿರುದ್ಧ  ಎಫ್‌ಐಆರ್ ದಾಖಲಾಗಿದೆ. ರಕ್ಷಿತ್‌ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ಅನುಮತಿಯಿಲ್ಲದೆ ನ್ಯಾಯ ಎಲ್ಲಿದೆ ಮತ್ತು ಗಾಳಿಮಾತು ಚಲನಚಿತ್ರಗಳ ಹಾಡುಗಳನ್ನು ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯದಲ್ಲಿಯೇ ಇತ್ಯರ್ಥಪಡಿಸಿಕೊಳ್ಳುವುದಾಗಿ ಹೇಳಿದ್ದ ನಟ ರಕ್ಷಿತ್ ಶೆಟ್ಟಿ ಇದೀಗ ಪ್ರಕರಣದಲ್ಲಿ ಬಂಧನವಾಗದಂತೆ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜುಲೈ 24 ರಂದು ವಿಚಾರಣೆ ನಡೆಯಲಿದೆ.

ರಕ್ಷಿತ್‌ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾ ಮಾರ್ಚ್ 2024 ರಲ್ಲಿ Amazon Prime ನಲ್ಲಿ ಬಿಡುಗಡೆಯಾಯಿತು. ಜನವರಿ 2024 ರಲ್ಲಿ ನಟ ಮತ್ತು MRT ಮ್ಯೂಸಿಕ್‌ ನಡುವೆ ಹಾಡುಗಳ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದವು, ಆದರೆ ಈ ಮಾತುಕತೆಗಳು ವಿಫಲವಾದವು. ಈ ಬಗ್ಗೆ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಶೆಟ್ಟಿ ಅವರಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು.

ರಕ್ಷಿತ್ ಶೆಟ್ಟಿ ಪ್ರಸ್ತುತ ‘ರಿಚರ್ಡ್ ಆಂಟೊನಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಿಚರ್ಡ್ ಆಂಟೊನಿ’ ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ‘ಉಳಿದವರು ಕಂಡಂತೆ’ ಸಿನಿಮಾದ ರಿಚರ್ಡ್ ಪಾತ್ರವನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ.

Tags:    

Similar News