ಕನ್ನಡದ ಮೊದಲ ವಾಕ್ಚಿತ್ರ ʼಸತಿ ಸುಲೋಚನಾʼ ಮರುಸೃಷ್ಟಿ

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ' ಬಿಡುಗಡೆಯಾಗಿ ಮಾರ್ಚ್ 3ಕ್ಕೆ 91 ವರ್ಷಗಳಾಗಿವೆ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರ ರಾವ್, ತ್ರಿಪುರಾಂಭ ಮುಂತಾದವರು ಅಭಿನಯಿಸಿದ ಈ ಚಿತ್ರವು ಇದೀಗ ಮರುಸೃಷ್ಟಿಯಾಗುವುದಕ್ಕೆ ಸಜ್ಜಾಗಿದೆ.;

Update: 2025-03-05 01:00 GMT

ಭಾರತದಲ್ಲಿ ಸಿನಿಮಾ ಕುರಿತು ಸಿನಿಮಾಗಳಾಗಿದ್ದು ಹೊಸದೇನಲ್ಲ. ಈ ಹಿಂದೆ, ಭಾರತದ ಮೊದಲ ಮೂಕಿ ಚಿತ್ರ ‘ರಾಜಾ ಹರಿಶ್ಚಂದ್ರ’ ಹೇಗೆ ತಯಾರಾಯಿತು, ಆ ಚಿತ್ರ ಮಾಡುವುದಕ್ಕೆ ದಾದಾ ಸಾಹೇಬ್ ಫಾಲ್ಕೆ ಎಷ್ಟು ಕಷ್ಟಪಟ್ಟಿದ್ದರು ಎಂದು ‘ಹರಿಶ್ಚಂದ್ರಾಚಿ ಫ್ಯಾಕ್ಟರಿ ಎಂಬ ಮರಾಠಿ ಚಿತ್ರದಲ್ಲಿ ತೋರಿಸಲಾಗಿತ್ತು.

ಅದೇ ರೀತಿ ಮಲಯಾಳಂನ ಮೊದಲ ಮೂಕಿ ಚಿತ್ರ ‘ವಿಕಟಕುಮಾರನ್’ ತಯಾರಾದ ಬಗ್ಗೆ ‘ಸೆಲ್ಯುಲಾಯ್ಡ್’ ಎಂಬ ಚಿತ್ರ ತೆರೆದಿಟ್ಟಿತ್ತು. ಈಗ ಕನ್ನಡದಲ್ಲೂ ಅಂಥದ್ದೊಂದು ಪ್ರಯೋಗವಾಗಿತ್ತು, ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ನಿರ್ಮಾಣವಾಗಿದ್ದು ಹೇಗೆ ಎಂದು ‘ಸತಿ ಸುಲೋಚನಾ - 3-3-1934’ ಎಂಬ ಹೊಸ ಚಿತ್ರದ ಮೂಲಕ ಪಿ. ಶೇಷಾದ್ರಿ ಹೇಳುವುದಕ್ಕೆ ಹೊರಟಿದ್ದಾರೆ.

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ' ಬಿಡುಗಡೆಯಾಗಿ ಮಾರ್ಚ್ 3ಕ್ಕೆ 91 ವರ್ಷಗಳಾಗಿವೆ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರ ರಾವ್, ತ್ರಿಪುರಾಂಭ ಮುಂತಾದವರು ಅಭಿನಯಿಸಿದ ಈ ಚಿತ್ರವು ಇದೀಗ ಮರುಸೃಷ್ಟಿಯಾಗುವುದಕ್ಕೆ ಸಜ್ಜಾಗಿದೆ. ಹಾಗಂತ ‘ಸತಿ ಸುಲೋಚನಾ’ ಚಿತ್ರ ಮತ್ತೊಮ್ಮೆ ನಿರ್ಮಾಣವಾಗುತ್ತಿಲ್ಲ. ಅದರ ಬದಲು, ‘ಸತಿ ಸುಲೋಚನಾ’ ನಿರ್ಮಾಣದ ಹಿಂದಿನ ಕಥೆಯನ್ನು ಹೇಳುವುದಕ್ಕೆ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಹೊರಟಿದ್ದಾರೆ. ಅವರೀಗ ‘ಸತಿ ಸುಲೋಚನಾ - 3-3-34' ಎಂಬ ಹೊಸ ಚಿತ್ರವನ್ನು ಘೋಷಿಸಿದ್ದು, ಈ ಚಿತ್ರವು ಮುಂದಿನ ಮಾರ್ಚ್ 3ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.


ಪಿ. ಶೇಷಾದ್ರಿ ಅವರ ಈ ಕನಸಿಗೆ ಜೊತೆಯಾಗಿ ನಿಂತಿರುವವರು ಸೃಜನ್ ಲೋಕೇಶ್. ಸೃಜನ್ ಅವರ ತಾತ ಸುಬ್ಬಯ್ಯ ನಾಯ್ಡು, ‘ಸತಿ ಸುಲೋಚನಾ’ ಚಿತ್ರದ ನಾಯಕರಾಗುವುದರ ಮೂಲಕ ಕನ್ನಡ ಚಿತ್ರರಂಗದ ಮೊದಲ ನಾಯಕರೆನಿಸಿಕೊಂಡಿದ್ದರು. ಇದೀಗ ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ಮಾಡಿದ ಪಾತ್ರವನ್ನು ಸೃಜನ್ ಮಾಡುವುದರ ಜೊತೆಗೆ, ಚಿತ್ರವನ್ನು ತಮ್ಮ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ತಾತನ ಕುರಿತಾದ ಚಿತ್ರವನ್ನು ತಂದೆಯ ಹೆಸರಿನ ನಿರ‍್ಮಾಣ ಸಂಸ್ಥೆಯಲ್ಲಿ ಮೊಮ್ಮಗ ನಿರ್ಮಿಸುತ್ತಿರುವ ಜೊತೆಗೆ ನಟಿಸುತ್ತಿರುವ ಬಹಳ ಅಪರೂಪ.

ಮೂಲ ‘ಸತಿ ಸುಲೋಚನಾ’ ಚಿತ್ರವು ರಾಮಾಯಣದ ಉಪಕಥೆಯಾಗಿದ್ದು, ಈ ಚಿತ್ರವನನ್ನು ಷಾ ಚಮನ್‌ಲಾಲ್ ಡುಂಗಾಜಿ ಮತ್ತು ಷಾ ಭೂರ್‌ಮಲ್ ಚಮನ್‌ಲಾಲ್‌ಜಿ ಜೊತೆಯಾಗಿ ನಿರ್ಮಿಸಿದ್ದರು. ಈ ಚಿತ್ರವನ್ನು ಹಿರಿಯ ನಟಿ ಲಕ್ಷ್ಮೀ ಅವರ ತಂದೆ ವೈ.ವಿ. ರಾವ್ ನಿರ್ದೇಶನ ಮಾಡಿದರೆ, ಚಿತ್ರಕ್ಕೆ ಬೆಳ್ಳಾವೆ ನರಹರಿ ಶಾಸ್ತ್ರಿ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದರು. ಈ ಮೂಲಕ ಅವರು ಕನ್ನಡದ ಮೊದಲ ಚಿತ್ರಸಾಹಿತಿ ಎಂದನಿಸಿಕೊಂಡರು. ಚಿತ್ರದಲ್ಲಿ ರಾವಣನ ಪಾತ್ರ ಮಾಡುವುದರ ಜೊತೆಜೊತೆಗೆ ಚಿತ್ರಕ್ಕೆ ಸಂಗೀತ ಸಂಯೋಸಿದ್ದವರು ಆರ್. ನಾಗೇಂದ್ರ ರಾವ್. ಇನ್ನು, ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು, ತ್ರಿಪುರಾಂಭ, ಕಮಲಾ ಬಾಯಿ, ವೈ.ವಿ. ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.


‘ಸತಿ ಸುಲೋಚನಾ -೩ ೩-೩-೩೪' ಕುರಿತು ಮಾತನಾಡುವ ಪಿ. ಶೇಷಾದ್ರಿ, ‘ಕನ್ನಡದ ಮೊದಲ ಚಿತ್ರದ ಕೆಲವು ಫೋಟೋಗಳನ್ನು ಹೊರತುಪಡಿಸಿದರೆ, ಒಂದು ತುಣುಕು ಸಹ ಇಲ್ಲ. ಆ ಚಿತ್ರದ ಚಿತ್ರಕಥೆ ಸಹ ಇಲ್ಲ. ಆ ಚಿತ್ರವನ್ನು ನೋಡಿದರ‍್ಯಾರೂ ಈಗ ಬದುಕಿಲ್ಲ. ಮೂಲಗಳ ಪ್ರಕಾರ, ಬೆಳ್ಳಾವೆ ನರಹರಿಶಾಸ್ತಿಗಳು ಒಟ್ಟು 51 ನಾಟಕಗಳನ್ನು ಬರೆದಿದ್ದರಂತೆ. ಅದರಲ್ಲಿ ಇದೂ ಒಂದು ಎಂದು ಹೇಳಲಾಗುತ್ತದೆ. ರಾಮಾಯಾಣದ ಉಪಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ರಾವಣನ ಮಗ ಇಂದ್ರಜಿತುವಿನ ಹೆಂಡತಿಯ ಸುತ್ತ ಈ ಚಿತ್ರ ಸುತ್ತುತ್ತದೆ. ಕನ್ನಡದಲ್ಲಿ ಮೊದಲು ಈ ಚಿತ್ರವಾದ ನಂತರ ತೆಲುಗು ಮತ್ತು ಹಿಂದಿಯಲ್ಲೂ ‘ಸತಿ ಸುಲೋಚನಾ' ಚಿತ್ರಗಳಾಗಿವೆ. ನಾವು ‘ಸತಿ ಸುಲೋಚನಾ’ ಚಿತ್ರ ಮಾಡುತ್ತಿಲ್ಲ. ಕನ್ನಡದ ಮೊದಲ ಚಿತ್ರ ಹೇಗೆ ತಯಾರಾಯಿತು ಎಂಬುದರ ಕುರಿತು ಚಿತ್ರ ಮಾಡುತ್ತಿದ್ದೇವೆ. ಏಕೆಂದರೆ, ಆ ಚಿತ್ರವಾದ ಸಂದರ್ಭದಲ್ಲಿ ಲೈಟುಗಳಿರಲಿಲ್ಲ. ಸೂರ್ಯನ ಬೆಳಕಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಕೊಲ್ಹಾಪುರದ ಸ್ಟುಡಿಯೋದಲ್ಲಿ ಸೂರ್ಯನ ಬೆಳಕನ್ನು ಬಳಸಿಕೊಂಡು ರಿಫ್ಲೆಕ್ಟರ್‌ಗಳ ಮೂಲಕ ಬೆಳಕನ್ನು ಬಳಸಿಕೊಳ್ಳಲಾಗಿತ್ತು. ಅದೆಲ್ಲವನ್ನೂ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ' ಎಂದರು.

ಈ ಚಿತ್ರದ ವಿಶೇಷತೆಯೆಂದರೆ, ಇದರಲ್ಲಿ ಎರಡು ಪ್ರೇಮಕಥೆಗಳಿವೆ. ‘ಈ ಚಿತ್ರದ ಚಿತ್ರೀಕರಣದ ಸಂರ‍್ಭದಲ್ಲಿ ಎರಡು ಪ್ರೇಮಕಥೆಗಳು ನಡೆದವು. ಪ್ರಮುಖವಾಗಿ ಸುಬ್ಬಯ್ಯ ನಾಯ್ಡು ಅವರಿಗೆ ನಟಿ ಲಕ್ಷ್ಮಿ ಬಾಯಿ ಮೇಲೆ ಪ್ರೇಮಾಂಕುರವಾದರೆ, ಆರ್, ನಾಗೇಂದ್ರ ರಾವ್ ಅವರಿಗೆ ಲಕ್ಷ್ಮಿ ಬಾಯಿ ಸಹೋದರಿ ಕಮಲಾ ಬಾಯಿ ಅವರ ಮೇಲೆ ಪ್ರೇಮವಾಯಿತು. ಈ ಎರಡೂ ಪ್ರೇಮಕಥೆಗಳು ಚಿತ್ರದಲ್ಲಿವೆ. ಸುಬ್ಬಯ್ಯ ನಾಯ್ಡು ಪಾತ್ರವನ್ನು ಸೃಜನ್ ಲೋಕೇಶ್ ನಿರ್ವಹಿಸುತ್ತಿದ್ದಾರೆ. ಮಿಕ್ಕ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಿ, ಮುಂದಿನ ವರ್ಷ ಬಿಡುಗಡೆಯಾಗಲಿದೆ' ಎಂದರು.


ಈ ಚಿತ್ರದ ಕುರಿತು ಮಾತನಾಡುವ ಸೃಜನ್ ಲೋಕೇಶ್, ‘ನಾವು ಪ್ರತಿ ವರ್ಷ ಮಾರ್ಚ್ 3ರಂದು ‘ಸತಿ ಸುಲೋಚನಾ’ ಚಿತ್ರದ ಬಗ್ಗೆ ನೆನಪಿಸಿಕೊಳ್ಳುತ್ತೇವೆ. ಆ ನಂತರ ಮರೆತುಬಿಡುತ್ತೇವೆ. ‘ಸತಿ ಸುಲೋಚನಾ' ಕನ್ನಡದ ಮೊದಲ ಚಿತ್ರ ಎಂಬ ವಿಷಯವನ್ನು ಹೊರತುಪಡಿಸಿದರೆ, ನಮಗೆ ಆ ಚಿತ್ರ ಬಗ್ಗೆ ಹೆಚ್ಚು ವಿಷಯ ಗೊತ್ತಿಲ್ಲ. ಆ ಚಿತ್ರ ಹೇಗಾಯ್ತು? ನಿರ್ಮಾಣದ ಸಂದರ್ಭದಲ್ಲಿ ಏನೆಲ್ಲಾ ಆಯ್ತು? ಎಂಬುದರ ಬಗ್ಗೆ ಹೆಚ್ಚು ಮಾಹಿತಿಗಳಿಲ್ಲ. ಚಿತ್ರದ ಪ್ರಿಂಟ್ ಎಲ್ಲೂ ಇಲ್ಲ. ನಮಗೆ ಸಿಕ್ಕಿರುವ ಮಾಹಿತಿಗಳನ್ನು ಇಟ್ಟುಕೊಂಡು ಒಂದು ಕಥೆ ಮಾಡಿ, ಚಿತ್ರ ಮಾಡುತ್ತಿದ್ದೇವೆ. ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವ ಚಿತ್ರ ಮಾಡಬೇಕು ಎಂಬ ಗುರಿಯಿಂದ ಈ ಚಿತ್ರ ಮಾಡುತ್ತಿದ್ದೇವೆ. ಮುಂದಿನ ವರ್ಷ ಮಾರ್ಚ್ 3 ರಂದು ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ.

Tags:    

Similar News