ರೋಹಿತ್ ವೇಮುಲ ಪ್ರಕರಣ: ಸರ್ಕಾರದಿಂದ ಹೆಚ್ಚಿನ ತನಿಖೆಯ ಭರವಸೆ

ಪ್ರಕರಣ ಮುಚ್ಚುವಿಕೆ ವರದಿಯನ್ನು ಪ್ರಶ್ನಿಸಲು ಕುಟುಂಬ ನಿರ್ಧಾರ

Update: 2024-05-04 06:43 GMT

ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿ ಸಲ್ಲಿಸಿದ್ದಾರೆ. ಆದರೆ, ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ರವಿ ಗುಪ್ತಾ, ಪ್ರಕರಣದ ತನಿಖೆಯನ್ನು ಮುಂದುವರಿಸಲು ಅನುಮತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.

ರೋಹಿತ್ ಅವರ ಕುಟುಂಬ ಮತ್ತು ಇತರರು ಪ್ರಕರಣದ ಮುಚ್ಚುವಿಕೆ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಪೊಲೀಸರು ತನಿಖೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಗುಪ್ತಾ ಹೇಳಿದರು. 

ಮುಚ್ಚುವಿಕೆ ವರದಿ ʻಸಾಕ್ಷ್ಯಾಧಾರಗಳ ಕೊರತೆʼಯಿಂದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ ಮಾತ್ರವಲ್ಲದೆ ರೋಹಿತ್ ದಲಿತನಲ್ಲ ಎಂದು ಪ್ರತಿಪಾದಿಸಿದೆ. ರೋಹಿತ್ ತನ್ನ ʻನಿಜವಾದ ಜಾತಿ ಗುರುತುʼ ಪತ್ತೆಯಾಗುತ್ತದೆ; ಕುಟುಂಬ ಜಾತಿ ಪ್ರಮಾಣಪತ್ರವನ್ನು ನಕಲು ಮಾಡಿದೆ ಎಂಬುದು ಬಹಿರಂಗಗೊಳ್ಳಲಿದೆ ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ಹೇಳಿದೆ. ಆದರೆ, ಪೊಲೀಸರು ಈ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಪುರಾವೆ ಒದಗಿಸಿಲ್ಲ. 

ಹೈದರಾಬಾದ್ ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿ ಅಪ್ಪಾ ರಾವ್ ಪೊಡಿಲೆ, ಬಿಜೆಪಿಯ ಮಾಜಿ ಸಂಸದ ಬಂಡಾರು ದತ್ತಾತ್ರೇಯ, ಬಿಜೆಪಿ ಮಾಜಿ ಎಂಎಲ್‌ಸಿ ಎನ್ ರಾಮಚಂದರ್ ರಾವ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಕೆಲವು ಎಬಿವಿಪಿ ಮುಖಂಡರು ಪ್ರಕರಣದ ಆರೋಪಿಗಳಾಗಿದ್ದರು. 

ವರದಿಯನ್ನುಪ್ರಶ್ನಿಸಲು ನಿರ್ಧಾರ: ತೆಲಂಗಾಣ ಪೊಲೀಸರ ಮುಚ್ಚುವಿಕೆ ವರದಿಯನ್ನು ಕಾನೂನುಬದ್ಧವಾಗಿ ಪ್ರಶ್ನಿಸುವುದಾಗಿ ವೇಮುಲ ಅವರ ಕುಟುಂಬ ಹೇಳಿದೆ. 

ʻಕೆಳ ಹಂತದ ನ್ಯಾಯಾಲಯದಲ್ಲಿ ಪ್ರತಿಭಟನೆ ಅರ್ಜಿ ಸಲ್ಲಿಸಲು ತೆಲಂಗಾಣ ಹೈಕೋರ್ಟ್ ಅವಕಾಶ ನೀಡಿದೆ. ರೋಹಿತ್ ವೇಮುಲ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ್ದಾರೋ ಇಲ್ಲವೋ ಎಂಬುದನ್ನು ಗುಂಟೂರಿನ ಜಿಲ್ಲಾಧಿಕಾರಿ ಹೇಳಬೇಕು. ಅವರು ಎಸ್‌ಸಿ ಅಲ್ಲ ಎಂದು ಪೊಲೀಸರು ಹೇಗೆ ಹೇಳುತ್ತಾರೆ? ಈ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಲು ಯೋಜಿ ಸಲಾಗಿದೆʼ ಎಂದು ಸಹೋದರ ರಾಜಾ ವೇಮುಲ ಹೇಳಿದ್ದಾರೆ. 

ʻಪ್ರಕರಣದ ತನಿಖಾಧಿಕಾರಿಯಾದ ಮಾದಾಪುರದ ಸಹಾಯಕ ಪೊಲೀಸ್ ಕಮಿಷನರ್ ನಡೆಸಿದ ತನಿಖೆ ಆಧಾರದ ಮೇಲೆ ನವೆಂಬರ್‌ಗೆ ಮುನ್ನ ಅಂತಿಮ ಮುಕ್ತಾಯ ವರದಿ ಸಿದ್ಧಪಡಿಸಲಾಗಿದೆ. ಆನಂತರ, ಮಾರ್ಚ್ 21 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆʼ ಎಂದು ಡಿಜಿಪಿ ಗುಪ್ತಾ ಹೇಳಿದರು.

ಅಂತಿಮ ವರದಿಯಲ್ಲಿ ಏನಿದೆ?: ರೋಹಿತ್ ವೇಮುಲ ಅವರು ಜನವರಿ 2016ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, 2024, ಮೇ 3ರಂದು ತೆಲಂಗಾಣ ಪೊಲೀಸರು ಮುಕ್ತಾಯ ವರದಿ ಸಲ್ಲಿಸಿದ್ದಾರೆ. ಹೈದ್ರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಪಿಎಚ್‌.ಡಿ., ಅಧ್ಯಯನ ನಡೆಸುತ್ತಿದ್ದ ರೋಹಿತ್‌, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅಧ್ಯಯನದಲ್ಲಿ ಹಿಂದುಳಿದಿದ್ದರು. ಇದು ಒತ್ತಡಕ್ಕೆ ಕಾರಣವಾಯಿತು. ಮೊದಲ ಪಿಎಚ್‌.ಡಿ.,ಯನ್ನು 2 ವರ್ಷಗಳ ನಂತರ ನಿಲ್ಲಿಸಿ, ಮತ್ತೊಂದು ಪಿಎಚ್‌.ಡಿ.,ಗೆ ಸೇರಿದರು. ಶೈಕ್ಷಣಿಕೇತರ ಚಟು ವಟಿಕೆಗಳಿಂದ ಪ್ರಗತಿ ಆಗಲಿಲ್ಲ,ʼ ಎಂದು ವರದಿಯಲ್ಲಿದೆ.

ತಾಯಿಯಿಂದ ನಕಲಿ ಜಾತಿಪತ್ರ: ತಾಯಿ ರಾಧಿಕಾ ವೇಮುಲ ಅವರು ನಕಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದರಿಂದ, ರೋಹಿತ್‌ ಒತ್ತಡಕ್ಕೆ ಸಿಲುಕಿದರು. ʻಮೃತನಿಗೆ ತಾನು ಪರಿಶಿಷ್ಟ ಜಾತಿಗೆ ಸೇರಿದವನಲ್ಲ. ಆದರೆ, ತಾಯಿ ಎಸ್‌ಸಿ ಪ್ರಮಾಣಪತ್ರ ಪಡೆದಿದ್ದಾಳೆ ಎಂಬುದು ತಿಳಿದಿದೆ. ಒಂದುವೇಳೆ ವಿಷಯ ಬಹಿರಂಗಗೊಂಡಲ್ಲಿ ಪದವಿ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಆತಂಕವಿದ್ದಿತ್ತು,ʼ ಎಂದು ಪೊಲೀಸರು ದೂರಿದ್ದಾರೆ. ʻಸಾಕಷ್ಟು ಪ್ರಯತ್ನದ ಹೊರತಾಗಿಯೂ, ಆರೋಪಿಗಳು ಮೃತನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆ ಕಂಡುಬಂದಿಲ್ಲʼ ಎಂದು ಪೊಲೀಸರು ತಿಳಿಸಿದ್ದಾರೆ. 

ಖ್ಯಾತ ವಿಜ್ಞಾನಿ ಕಾರ್ಲ್ ಸಗಾನ್ ಅವರ ಹೆಜ್ಜೆಗಳನ್ನು ಅನುಸರಿಸಲು ಬಯಸಿದ್ದ ರೋಹಿತ್‌, ವಿಶ್ವವಿದ್ಯಾನಿಲಯದ ಆಡಳಿತದ ಕಿರುಕುಳದಿಂದ ಜನವರಿ 17, 2016 ರಂದು ಆತ್ಮಹತ್ಯೆ ಮಾಡಿಕೊಂಡರು. ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘದ ಸದಸ್ಯರಾಗಿದ್ದ ಅವರು ಕ್ಯಾಂಪಸ್‌ನಲ್ಲಿ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಧ್ವನಿ ಎತ್ತಿದರು. ವಿಶ್ವವಿದ್ಯಾನಿಲಯ ಅವರ ಮಾಸಿಕ ಫೆಲೋಶಿಪ್ ಅನ್ನು ನಿಲ್ಲಿಸಿತು. ಅವರು ಬರೆದ ಆತ್ಮಹತ್ಯೆ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

Tags:    

Similar News