ವಿಶ್ವಾಸಮತಕ್ಕೆ ಆಗ್ರಹ: ರಾಜ್ಯಪಾಲರಿಗೆ ಜೆಜೆಪಿ ನಾಯಕ ಚೌತಾಲಾ ಪತ್ರ
ಹರಿಯಾಣದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಜೆಜೆಪಿ ನಾಯಕ ದುಷ್ಯಂತ್ ಚೌತಾಲಾ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಒತ್ತಾಯಿಸಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಬರೆದ ಪತ್ರದಲ್ಲಿ ಚೌತಾಲಾ,ʻಮೂವರು ಶಾಸಕರ ರಾಜೀನಾಮೆ ಮತ್ತು ಬೆಂಬಲ ಹಿಂಪಡೆ ಯುವಿಕೆಯಿಂದ ಬಿಜೆಪಿ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಬಹುಮತವನ್ನು ಸಾಬೀತುಪಡಿಸಲು ತಕ್ಷಣವೇ ಅಧಿವೇಶನವನ್ನು ಕರೆಯಲು ನಿರ್ದೇಶಿಸಬೇಕೆಂದು ಒತ್ತಾಯಿಸುತ್ತೇನೆʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೂವರು ಸ್ವತಂತ್ರ ಶಾಸಕರಾದ ಸೋಂಬೀರ್ ಸಾಂಗ್ವಾನ್ (ದಾದ್ರಿ), ರಣಧೀರ್ ಸಿಂಗ್ ಗೊಲ್ಲೆನ್ (ಪುಂಡ್ರಿ) ಮತ್ತು ಧರಂಪಾಲ್ ಗೊಂಡರ್ (ನಿಲೋಖೇರಿ) ಇತ್ತೀಚೆಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ʻಎರಡು ತಿಂಗಳ ಹಿಂದೆ ರಚನೆಯಾದ ಈ ಸರ್ಕಾರ ಈಗ ಬಹುಮತ ಕಳೆದುಕೊಂಡಿದೆ. ಏಕೆಂದರೆ, ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ ಮತ್ತು ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಬೆಂಬಲಿಸುತ್ತೇವೆ ಮತ್ತು ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆದಿದ್ದೇವೆ,ʼ ಎಂದು ಚೌತಾಲಾ ಹೇಳಿದರು.
ವರ್ಷಾಂತ್ಯ ಮತದಾನ: ಲೋಕಸಭೆ ಚುನಾವಣೆಗೆ ಕೇವಲ ಹದಿನೈದು ದಿನ ಇರುವಾಗ ಮತ್ತು ಅಕ್ಟೋಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವಾಗ ರಾಜ್ಯದಲ್ಲಿ ತ್ವರಿತ ರಾಜಕೀಯ ಬೆಳವಣಿಗೆಗಳು ನಡೆದಿವೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 30 ಮತ್ತು ಜೆಜೆಪಿ 10 ಶಾಸಕರು ಇದ್ದಾರೆ. ಐಎನ್‌ಎಲ್‌ಡಿ ಮತ್ತು ಹರಿಯಾಣ ಲೋಕಿತ್ ಪಕ್ಷ ತಲಾ ಒಬ್ಬರು ಮತ್ತು 6 ಪಕ್ಷೇತರ ಶಾಸಕರಿದ್ದಾರೆ. ಸರ್ಕಾರಕ್ಕೆ ಇಬ್ಬರು ಸ್ವತಂತ್ರ ಶಾಸಕರ ಬೆಂಬಲವಿದೆ.