ಕಾಂಗ್ರೆಸ್ ಮಾಜಿ ನಾಯಕಿ ರಾಧಿಕಾ ಖೇರಾ, ನಟ ಶೇಖರ್ ಸುಮನ್ ಬಿಜೆಪಿ ಸೇರ್ಪಡೆ
ಮಂಗಳವಾರ (ಮೇ 7): ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ ಮತ್ತು ನಟ ಶೇಖರ್ ಸುಮನ್ ಬಿಜೆಪಿಗೆ ಸೇರ್ಪಡೆಗೊಂಡರು.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲುನಿ ಉಪಸ್ಥಿತರಿದ್ದರು.
ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ಹಿರಿಯ ನಾಯಕರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಮಾಧ್ಯಮ ವಿಭಾಗದ ಮಾಜಿ ರಾಷ್ಟ್ರೀಯ ಸಂಯೋಜಕಿ ರಾಧಿಕಾ ಖೇರಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖೇರಾ, ಏಪ್ರಿಲ್ 30 ರಂದು ಛತ್ತೀಸ್‌ಗಢ ಕಾಂಗ್ರೆಸ್‌ನ ಸಂವಹನ ವಿಭಾಗದ ಅಧ್ಯಕ್ಷ ಸುಶೀಲ್ ಆನಂದ್ ಶುಕ್ಲಾ ಅವರು ರಾಯ್‌ಪುರದ ಪಕ್ಷದ ಕಚೇರಿಯ ಕೋಣೆಯೊಂದರಲ್ಲಿ ಬಂಧಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆ ಸಂದರ್ಭದಲ್ಲಿ ರಾಹುಲ್ ಅವರಿಗೆ ಮದ್ಯ ನೀಡಿದ್ದರು ಎಂದು ಆರೋಪಿಸಿದರು.
ʻಶುಕ್ಲಾ ಅವರು ತಂಡ ಕೊರ್ಬಾದಲ್ಲಿದ್ದಾಗ ದುರ್ವತನೆ ತೋರಿದ್ದರು. ಈ ಬಗ್ಗೆ ಸಚಿನ್ ಪೈಲಟ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಮತ್ತಿತರಿಗೆ ತಿಳಿಸಿದ್ದರೂ,ನಿರ್ಲಕ್ಷಿಸಿದರು.ಭಾಷಣಗಳಲ್ಲಿ ಹಿಂದೂ ಧರ್ಮದ ಉಲ್ಲೇಖಗಳನ್ನು ಕಡಿಮೆ ಮಾಡಲು ಪಕ್ಷದ ನಾಯಕರು ತನಗೆ ಹೇಳಿದ್ದರುʼ ಎಂದು ಅವರು ಆರೋಪಿಸಿದ್ದಾರೆ.
ಶೇಖರ್ ಸುಮನ್ ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿಯವರ ನೆಟ್‌ಫ್ಲಿಕ್ಸ್ ಸರಣಿ ʻಹೀರಾಮಂಡಿʼಯಲ್ಲಿ ಪಾತ್ರ ವಹಿಸಿದ್ದರು.