ಡೀಪ್‌ ಫೇಕ್ ವಿವಾದ: ಕಾಂಗ್ರೆಸ್ ಸುಳ್ಳು ಹರಡುತ್ತಿದೆ- ಅಮಿತ್ ಶಾ

Update: 2024-04-30 07:32 GMT

ಏಪ್ರಿಲ್ 30- ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಲಿದೆ ಮತ್ತು ಮೀಸಲು ಕೊನೆಗೊಳಿಸಲಿದೆ ಎಂದು ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಗುವಾಹಟಿಯಲ್ಲಿ ದೂರಿದ್ದಾರೆ. 

ಇತ್ತೀಚೆಗೆ ವೈರಲ್‌ ಆಗಿರುವ ಡೀಪ್‌ಫೇಕ್ ವಿಡಿಯೋದಲ್ಲಿ ಶಾ ಅವರು ಮೀಸಲು ತೆಗೆದುಹಾಕುವುದಾಗಿ ಹೇಳುತ್ತಿದ್ದಾರೆ. ವಿಡಿಯೋ ಶೇರ್ ಮಾಡಿದ ಆರೋಪದ ಮೇಲೆ ಅಸ್ಸಾಂನ ಗುವಾಹಟಿಯ ರೀತಂ ಸಿಂಗ್ ಎಂಬ ಕಾಂಗ್ರೆಸ್ ಕಾರ್ಯಕರ್ತನನ್ನು ಸೋಮವಾರ ಬಂಧಿಸಲಾಗಿದೆ. 

ʻಅವರ (ಕಾಂಗ್ರೆಸ್) ಹತಾಶೆ ಎಷ್ಟು ಮಟ್ಟಕ್ಕೆ ತಲುಪಿದೆ ಎಂದರೆ ಅವರು ನನ್ನ ಮತ್ತು ಹಲವಾರು ಬಿಜೆಪಿ ನಾಯಕರ ನಕಲಿ ವಿಡಿಯೋಗಳನ್ನು ಹಂಚುತ್ತಿದ್ದಾರೆ. ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಮತ್ತು ಇತರರು ನಕಲಿ ವಿಡಿಯೋ ಫಾರ್ವರ್ಡ್ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನ ಪ್ರಮುಖ ನಾಯಕರೊಬ್ಬರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಇದು ಅವರ ಹತಾಶೆ ಮತ್ತು ನಿರಾಶೆಯನ್ನು ಪ್ರತಿಬಿಂಬಿಸುತ್ತದೆ. ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ರಾಜಕೀಯವನ್ನು ಅತ್ಯಂತ ಕೆಳ ಮಟ್ಟಕ್ಕೆ ಕೊಂಡೊಯ್ಯಲು ಆರಂಭಿಸಿದರು. ನಕಲಿ ವಿಡಿಯೋ ಪ್ರಸಾರದ ಮೂಲಕ ಸಾರ್ವಜನಿಕ ಬೆಂಬಲ ಪಡೆಯಲು ಯತ್ನಿಸು ವುದು ಖಂಡನೀಯ ಮತ್ತು ಯಾವುದೇ ಪ್ರಮುಖ ಪಕ್ಷ ಇದನ್ನು ಮಾಡಬಾರದುʼ ಎಂದು ಶಾ ಹೇಳಿದರು. 

400ಕ್ಕೂ ಅಧಿಕ ಸ್ಥಾನ: ʻಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಬಿಜೆಪಿ 400 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳ ಗುರಿಯತ್ತ ಸಾಗುತ್ತಿದೆ. ಬಿಜೆಪಿ ಸಂವಿಧಾನವನ್ನು ಬದಲಿಸುತ್ತದೆ ಮತ್ತು ಮೀಸಲು ಕೊನೆಗೊಳಿಸುತ್ತದೆ ಎಂದು ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ನಾವು ಮತದಾರರನ್ನು ಅಲ್ಪಸಂಖ್ಯಾತರು ಅಥವಾ ಬಹುಸಂಖ್ಯಾತರು ಎಂದು ನೋಡುವುದಿಲ್ಲ. ಅಸ್ಸಾಂನ 14 ಲೋಕಸಭೆ ಸ್ಥಾನಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿಗೆ ಧರ್ಮದ ಆಧಾರದ ಮೇಲೆ ಮೀಸಲಿನಲ್ಲಿ ನಂಬಿಕೆ ಇಲ್ಲ. ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಒಲವು ಹೊಂದಿದ್ದೇವೆʼ ಎಂದು ಹೇಳಿದರು.

ನೈಜ ವೀಡಿಯೊ ವಿರುದ್ಧ ತಿದ್ದಿದ ವೀಡಿಯೊ: ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಿದರು ಮತ್ತು ತಿದ್ದಿದ ವಿಡಿಯೋದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಪ್ರದರ್ಶಿಸಲು ಅವರು ಎರಡೂ ವಿಡಿಯೋಗಳನ್ನುತೋರಿಸಿದರು. ʻಧಾರ್ಮಿಕ ಕೋಟಾ ನೀಡುವುದು ಅನ್ಯಾಯ ಮತ್ತು ಅದಕ್ಕೆ ಅನುಮತಿ ನೀಡುವುದಿಲ್ಲ. ಕರ್ನಾಟಕದಲ್ಲಿ ಈಗಾಗಲೇ ತೆಗೆದು ಹಾಕಿದ್ದೇವೆ. ನಾನು ವಿಡಿಯೋದಲ್ಲಿ ಹೇಳಿದ್ದು ಇದನ್ನೇ. ಬಿಜೆಪಿ ಎಲ್ಲಾ ಮೀಸಲು ರದ್ದುಪಡಿಸುತ್ತದೆ ಎಂದು ತಿರುಚಲಾಗಿದೆʼ ಎಂದು ಸುದ್ದಿಗಾರರಿಗೆ ತಿಳಿಸಿದರು.

Tags:    

Similar News