ದಕ್ಷಿಣ ಭಾರತದ ʼಇಡ್ಲಿʼಗೆ ಗೌರವ ಸಲ್ಲಿಸಿದ ಗೂಗಲ್ ಡೂಡಲ್
ʻನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ಇಡ್ಲಿ ತಯಾರಿಸಲಾಗುತ್ತದೆ. ಇಡ್ಲಿಯನ್ನು ʼಆವಿಯಲ್ಲಿ ಬೇಯಿಸಿದ ದಕ್ಷಿಣ ಭಾರತೀಯ ಕೇಕ್ʼ ಎಂದು ಗೂಗಲ್ ಬಣ್ಣಿಸಿದೆ.
ಗೂಗಲ್ ಡೂಡಲ್‌ನಲ್ಲಿ ಇಡ್ಲಿ ಸಂಭ್ರಮ
ದಕ್ಷಿಣ ಭಾರತದ ಜನಪ್ರಿಯ ಉಪಹಾರವಾಗಿರುವ ಇಡ್ಲಿಗೆ ವಿಶೇಷ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಭಾರತೀಯರಿಗೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಜನರಿಗೆ ಇದು ಹೆಮ್ಮೆಯ ವಿಚಾರವಾಗಿದೆ.
ಇಡ್ಲಿಯನ್ನುʻನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾಗುತ್ತದೆ. ಇದನ್ನು ʼಆವಿಯಲ್ಲಿ ಬೇಯಿಸಿದ ದಕ್ಷಿಣ ಭಾರತೀಯ ಕೇಕ್ʼ ಎಂದು ಗೂಗಲ್ ಬಣ್ಣಿಸಿದೆ. ಇಡ್ಲಿ ಈಗ ಅಧಿಕೃತವಾಗಿ ಗೂಗಲ್‌ನ ʻಆಹಾರ ಮತ್ತು ಪಾನೀಯʼ ಡೂಡಲ್ ಥೀಮ್ ಆಗಿದೆ.
ಡೂಡಲ್‌ನಲ್ಲಿ ಇಡ್ಲಿ ಸೌಂದರ್ಯ
ಡೂಡಲ್ ಅನ್ನು ಗೂಗಲ್ ಲೋಗೋದಂತೆ ವಿನ್ಯಾಸಗೊಳಿಸಲಾಗಿದೆ. "Google" ಪದದ ಪ್ರತಿಯೊಂದು ಅಕ್ಷರವು ಇಡ್ಲಿಯ ವಿಭಿನ್ನ ಅಂಶಗಳನ್ನು ಹೊಂದಿದೆ. 'G' ಎಂಬುದು ಇಡ್ಲಿಯ ಮುಖ್ಯ ಅಂಶವಾದ ಅಕ್ಕಿ ಧಾನ್ಯಗಳನ್ನು ಪ್ರತಿನಿಧಿಸಲಿದೆ. 'O' ಎಂಬುದು ಬಟ್ಟಲಿನಲ್ಲಿಟ್ಟ ಬಿಳಿ ಇಡ್ಲಿಯ ಹಿಟ್ಟು. ಎರಡನೇ 'O' ಇಡ್ಲಿ ಹಿಟ್ಟಿನೊಂದಿಗೆ ಸಾಂಪ್ರದಾಯಿಕ ಇಡ್ಲಿ ತಯಾರಿಸುವ ಪಾತ್ರೆಯಾಗಿದೆ. ಇನ್ನೊಂದು 'G' ಹಲವಾರು ಇಡ್ಲಿಗಳ ಸಮೂಹವಾದರೆ, 'L' ವಿವಿಧ ಬಣ್ಣದ ಚಟ್ನಿಗಳನ್ನು ಸಂಕೇತಿಸಿದೆ. ಕೊನೆಯದಾದ 'E' ಅಕ್ಷರವು ಇಡ್ಲಿ ಭಕ್ಷ್ಯವನ್ನು ಪ್ರತಿನಿಧಿಸಿದೆ. ಈ ಸಂಪೂರ್ಣ ಇಡ್ಲಿ ಖಾದ್ಯವನ್ನು ಸಂಪ್ರದಾಯಬದ್ಧ ಬಾಳೆ ಎಲೆಯ ಮೇಲೆ ಇರಿಸಿ ಡ್ಯೂಡಲ್ ನಲ್ಲಿ ಪ್ರಕಟಿಸಿದೆ.
ಇಡ್ಲಿಗೆ ಉಂಟು ವಿದೇಶಿ ನಂಟು?
ಇಡ್ಲಿಯು ಭಾರತದಲ್ಲಿ ಹುಟ್ಟಿಕೊಂಡಿದೆ ಎಂಬ ನಂಬಿಕೆ ಇದೆ. ಆದರೆ ಇತಿಹಾಸಕಾರರು ಎರಡು ಪ್ರಮುಖ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ. ಇಡ್ಲಿಯು ವಿದೇಶಿ ಮೂಲದ್ದಾಗಿದೆ ಎಂಬ ವಾದವೂ ಕೇಳಿ ಬರುತ್ತಿದೆ.
ಇಂಡೋನೇಷ್ಯಾ ಸಿದ್ಧಾಂತ
ಖ್ಯಾತ ಆಹಾರ ಇತಿಹಾಸಕಾರ ಕೆ.ಟಿ. ಅಚಾಯ ಅವರ 2018 ರ ವರದಿ ಪ್ರಕಾರ, ಇಡ್ಲಿಯು ಮಧ್ಯಕಾಲೀನ ಇಂಡೋನೇಷ್ಯಾದ ಖಾದ್ಯದಿಂದ ಬಂದಿರಬಹುದು. ವ್ಯಾಪಾರಕ್ಕಾಗಿ ಅಲ್ಲಿಗೆ ಪ್ರಯಾಣಿಸಿದ ಭಾರತೀಯ ಅಡುಗೆಯವರು ಈ ವಿಧಾನವನ್ನು ಕಲಿತು ದೇಶಕ್ಕೆ ಮರಳಿ ತಂದರು ಎನ್ನಲಾಗಿದೆ.
ಅರೇಬಿಯಾ ಸಿದ್ಧಾಂತ
ಇನ್ನೊಂದು ಸಿದ್ಧಾಂತದ ಪ್ರಕಾರ, ದಕ್ಷಿಣ ಭಾರತದಲ್ಲಿ ನೆಲೆಸಿದ್ದ ಅರಬ್ ವ್ಯಾಪಾರಿಗಳು ತಯಾರಿಸುತ್ತಿದ್ದ ಅಕ್ಕಿ ಕೇಕ್‌ಗಳೇ ಇಡ್ಲಿಯಾಗಿ ಮಾರ್ಪಟ್ಟವು ಎಂದೂ ಹೇಳಲಾಗುತ್ತದೆ.