ಆರ್ಟಿಕಲ್ 370 ರದ್ದು ವಿರೋಧಿಸಿ ಐಎಎಸ್‌ಗೆ ರಾಜೀನಾಮೆ ನೀಡಿದ್ದ ಕಣ್ಣನ್ ಗೋಪಿನಾಥನ್ ಕಾಂಗ್ರೆಸ್‌ಗೆ ಸೇರ್ಪಡೆ
ಕೇರಳ ಮೂಲದವರಾದ ಕಣ್ಣನ್ ಗೋಪಿನಾಥನ್, 2012ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ನಂತರ, ಅಲ್ಲಿನ ಜನರಿಗೆ 'ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ' ಎಂದು ಆರೋಪಿಸಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ವಿರೋಧಿಸಿ 2019ರಲ್ಲಿ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ದೇಶಾದ್ಯಂತ ಸುದ್ದಿಯಾಗಿದ್ದ ಮಾಜಿ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಇಂದು (ಸೋಮವಾರ) ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. "ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲದು," ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಯುವ ನಾಯಕರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಮತ್ತು ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಅವರ ಸಮ್ಮುಖದಲ್ಲಿ ಗೋಪಿನಾಥನ್ ಅವರು ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು.
ಕಾಂಗ್ರೆಸ್ ಮಾತ್ರ ದೇಶವನ್ನು ಮುನ್ನಡೆಸಬಲ್ಲದು ಎಂದು ಕಣ್ಣನ್
ಪಕ್ಷಕ್ಕೆ ಸೇರಿದ ನಂತರ ಮಾತನಾಡಿದ ಕಣ್ಣನ್ ಗೋಪಿನಾಥನ್, "ಬಿಜೆಪಿ ಸರ್ಕಾರವು ದೇಶವನ್ನು ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದು ನನಗೆ ಮನವರಿಕೆಯಾದಾಗ ಐಎಎಸ್ ಹುದ್ದೆಯನ್ನು ತ್ಯಜಿಸಿದೆ. ಸರ್ಕಾರದ ತಪ್ಪುಗಳ ವಿರುದ್ಧ ನಾನು ಹೋರಾಡಲೇಬೇಕು. ದೇಶದಾದ್ಯಂತ 80-90 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನರೊಂದಿಗೆ ಮತ್ತು ನಾಯಕರೊಂದಿಗೆ ಮಾತನಾಡಿದಾಗ, ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬಲ್ಲದು ಎಂಬುದು ನನಗೆ ಸ್ಪಷ್ಟವಾಯಿತು," ಎಂದು ಹೇಳಿದರು.
ಗೋಪಿನಾಥನ್ ಯಾರು?
ಕೇರಳ ಮೂಲದವರಾದ ಕಣ್ಣನ್ ಗೋಪಿನಾಥನ್, 2012ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ನಂತರ, ಅಲ್ಲಿನ ಜನರಿಗೆ 'ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ' ಎಂದು ಆರೋಪಿಸಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಂದಿನಿಂದ, ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಇತರ ಸರ್ಕಾರದ ನೀತಿಗಳ ಪ್ರಬಲ ವಿಮರ್ಶಕರಾಗಿದ್ದರು. ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರನ್ನು ಹಲವು ಬಾರಿ ಪೊಲೀಸರು ವಶಕ್ಕೆ ಪಡೆದಿದ್ದರು.
ಗೋಪಿನಾಥನ್ ಅವರ ಸೇರ್ಪಡೆಯನ್ನು ಸ್ವಾಗತಿಸಿದ ಕೆ.ಸಿ. ವೇಣುಗೋಪಾಲ್, "ಅವರು ದೇಶದ ದೀನದಲಿತರು ಮತ್ತು ತಳ ಸಮುದಾಯಗಳ ಬಗ್ಗೆ ಕಾಳಜಿ ಹೊಂದಿರುವ, ಯಾವಾಗಲೂ ನ್ಯಾಯಕ್ಕಾಗಿ ಹೋರಾಡಿದ ಧೈರ್ಯಶಾಲಿ ಅಧಿಕಾರಿ. ಅವರ ಸೇರ್ಪಡೆಯು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ," ಎಂದು ಹೇಳಿದರು.