"ಆದಾಯವಿಲ್ಲ, ಕೇಂದ್ರ ಸಚಿವ ಸ್ಥಾನ ಬೇಡ": ಸಾರ್ವಜನಿಕ ಕಾರ್ಯಕ್ರಮದಲ್ಲೇ ಘೋಷಿಸಿದ ಸುರೇಶ್ ಗೋಪಿ
"ಚುನಾವಣೆಗೆ ಒಂದು ದಿನ ಮೊದಲೂ, ನಾನು ಸಚಿವನಾಗಲು ಬಯಸುವುದಿಲ್ಲ, ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ವರದಿಗಾರರಿಗೆ ಹೇಳಿದ್ದೆ," ಎಂದು ಅವರು ತಮ್ಮ ಹಿಂದಿನ ನಿಲುವನ್ನು ಪುನರುಚ್ಚರಿಸಿದರು.
ಕೇಂದ್ರ ಸಚಿವ ಸುರೇಶ್ ಗೋಪಿ
ಕೇರಳದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾದ ಮಲಯಾಳಂ ನಟ ಸುರೇಶ್ ಗೋಪಿ, ಇದೀಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿ, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸಚಿವ ಹುದ್ದೆಯಿಂದಾಗಿ ತಮ್ಮ ಆದಾಯ ಸಂಪೂರ್ಣವಾಗಿ ನಿಂತುಹೋಗಿದ್ದು, ತಾವು ಮತ್ತೆ ನಟನೆಗೆ ಮರಳಲು ಬಯಸುವುದಾಗಿ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ.
ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಸುರೇಶ್ ಗೋಪಿ, "ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ನನ್ನ ಆದಾಯ ಗಮನಾರ್ಹವಾಗಿ ಕಡಿಮೆಯಾಗಿದೆ. ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಿದೆ; ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ," ಎಂದು ಹೇಳಿದ್ದಾರೆ.
"ನಾನು ಎಂದಿಗೂ ಸಚಿವನಾಗಬೇಕೆಂದು ಪ್ರಾರ್ಥಿಸಿರಲಿಲ್ಲ. ಚುನಾವಣೆಗೆ ಒಂದು ದಿನ ಮೊದಲೂ, ನಾನು ಸಚಿವನಾಗಲು ಬಯಸುವುದಿಲ್ಲ, ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ವರದಿಗಾರರಿಗೆ ಹೇಳಿದ್ದೆ," ಎಂದು ಅವರು ತಮ್ಮ ಹಿಂದಿನ ನಿಲುವನ್ನು ಪುನರುಚ್ಚರಿಸಿದರು
ಸಚಿವ ಸ್ಥಾನಕ್ಕೆ ಸದಾನಂದನ್ ಮಾಸ್ಟರ್ ಹೆಸರು ಶಿಫಾರಸು
ತಾವು ರಾಜೀನಾಮೆ ಸಲ್ಲಿಸಿದ ನಂತರ ತೆರವಾಗುವ ಸಚಿವ ಸ್ಥಾನವನ್ನು, ಇತ್ತೀಚೆಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಕಣ್ಣೂರಿನ ಬಿಜೆಪಿ ಹಿರಿಯ ನಾಯಕ ಸಿ. ಸದಾನಂದನ್ ಮಾಸ್ಟರ್ ಅವರಿಗೆ ನೀಡಬೇಕೆಂದು ಸುರೇಶ್ ಗೋಪಿ ಮನವಿ ಮಾಡಿದ್ದಾರೆ. "ನನ್ನನ್ನು ಸಚಿವ ಸ್ಥಾನದಿಂದ ತೆಗೆದು, ಸದಾನಂದನ್ ಮಾಸ್ಟರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ನಾನು ನಂಬುತ್ತೇನೆ," ಎಂದು ಅವರು ಹೇಳಿದರು.
ಸುರೇಶ್ ಗೋಪಿ ಅವರು ಪ್ರಸ್ತುತ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟೀಕೆಗಳಿಗೆ ತಿರುಗೇಟು
ಇದೇ ವೇಳೆ, ತಮ್ಮ ಮಾತುಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದ ಸುರೇಶ್ ಗೋಪಿ, "ಪ್ರಜಾ" ಎಂಬ ಪದವನ್ನು ಬಳಸಿದ್ದಕ್ಕೆ ಬಂದ ಟೀಕೆಗಳಿಗೆ ಖಡಕ್ ತಿರುಗೇಟು ನೀಡಿದರು. "ಪ್ರಜಾ ಎಂಬ ಪದವನ್ನು ಬಳಸುವುದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದ ಅವರು, ತಮ್ಮ ವಿರೋಧಿಗಳು ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಹೇಳಿದರು.