ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದ ಆರೋಪ: ಮಲಯಾಳಂ ನಟ ಜಯಕೃಷ್ಣನ್ ಮಂಗಳೂರಿನಲ್ಲಿ ಬಂಧನ
x

ಕ್ಯಾಬ್ ಚಾಲಕನಿಗೆ 'ಟೆರರಿಸ್ಟ್' ಎಂದ ಆರೋಪ: ಮಲಯಾಳಂ ನಟ ಜಯಕೃಷ್ಣನ್ ಮಂಗಳೂರಿನಲ್ಲಿ ಬಂಧನ

ಚಾಲಕನನ್ನು ‘ಮುಸ್ಲಿಂ ತೀವ್ರವಾದಿ’, ‘ಟೆರರಿಸ್ಟ್’ ಎಂದು ಅಪಹಾಸ್ಯ ಮಾಡಿದ್ದಾರೆ. ಮಲಯಾಳಂ ಭಾಷೆಯಲ್ಲಿ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಅಹ್ಮದ್ ಶಫೀಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ಅಪ್ಲಿಕೇಷನ್​ ಮೂಲಕ ಕ್ಯಾಬ್ ಬುಕ್ ಮಾಡಿ, ಅದರ ಚಾಲಕನಿಗೆ ‘ಮುಸ್ಲಿಂ ಭಯೋತ್ಪಾದಕ’ ಎಂದು ನಿಂದಿಸಿದ ಆರೋಪದ ಮೇಲೆ ಖ್ಯಾತ ಮಲಯಾಳಂ ನಟ ಜಯಕೃಷ್ಣನ್ ಅವರನ್ನು ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಸಂತೋಷ್ ಅಬ್ರಾಹಂ ಎಂಬಾತನನ್ನೂ ಬಂಧಿಸಲಾಗಿದ್ದು, ಮೂರನೇ ಆರೋಪಿ ವಿಮಲ್‌ಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಅಕ್ಟೋರ್​ 9ರಂದು ರಾತ್ರಿ ಕೇರಳ ಮೂಲದ ಸಂತೋಷ್ ಅಬ್ರಾಹಂ, ಜಯಕೃಷ್ಣನ್ ಮತ್ತು ವಿಮಲ್ ಎಂಬುವವರು ಆ್ಯಪ್ ಮೂಲಕ ಮಂಗಳೂರಿನ ಬಿಜೈ ನ್ಯೂ ರೋಡ್‌ಗೆ ಪಿಕ್‌ಅಪ್ ಕೋರಿ ಕ್ಯಾಬ್ ಬುಕ್ ಮಾಡಿದ್ದರು.

ಈ ಬುಕಿಂಗ್ ಸ್ವೀಕರಿಸಿದ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಪಿಕ್‌ಅಪ್ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಕರೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಹಿಂದಿ ಭಾಷೆಯಲ್ಲಿ ಮಾತನಾಡಿ, ಚಾಲಕನನ್ನು ‘ಮುಸ್ಲಿಂ ತೀವ್ರವಾದಿ’, ‘ಟೆರರಿಸ್ಟ್’ ಎಂದು ಅಪಹಾಸ್ಯ ಮಾಡಿದ್ದಾರೆ. ನಂತರ, ಮಲಯಾಳಂ ಭಾಷೆಯಲ್ಲಿ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಅಹ್ಮದ್ ಶಫೀಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನ್ಯೂರೋಡ್ ಬಳಿ ಕೇರಳ ನೋಂದಣಿಯ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತು ಮದ್ಯದ ನಶೆಯಲ್ಲಿ ಇವರು ಓಲಾ ಬುಕ್ ಮಾಡಿದ್ದರು. ಬೇರೆ ಬೇರೆ ಕಡೆ ಲೊಕೇಶನ್ ಹಾಕಿ ದಾರಿ ತಪ್ಪಿಸುವಂತೆ ವರ್ತಿಸಿದ್ದಾರೆ. ಅಲ್ಲದೆ, ಟೆರರಿಸ್ಟ್ ಎಂದು ಹೇಳಿ ನಿಂದಿಸಿದ್ದಾರೆಂದು ದೂರಿನಲ್ಲಿ ಅಹ್ಮದ್ ಶಫೀಕ್ ತಿಳಿಸಿದ್ದಾರೆ.

ಪ್ರಕರಣ ದಾಖಲು; ಬಂಧನ

ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ನೀಡಿದ ದೂರಿನ ಅನ್ವಯ, ದಿನಾಂಕ 10ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNS) ಕಲಂ 352 (ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು 353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ನಟ ಜಯಕೃಷ್ಣನ್ ಮತ್ತು ಸಂತೋಷ್ ಅಬ್ರಾಹಂ ಅವರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ವಿಮಲ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Read More
Next Story