ವೃತ್ತಿಪರ ದೇಹದಾರ್ಢ್ಯ ಪಟು, ನಟ ವರೀಂದರ್ ಸಿಂಗ್ ಘುಮಾನ್ ಇನ್ನಿಲ್ಲ

ವರೀಂದರ್ ಸಿಂಗ್ ಘುಮಾನ್ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸಸ್ಯಾಹಾರಿ ಜೀವನಶೈಲಿಯಿಂದ ಫಿಟ್‌ನೆಸ್ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದಿದ್ದರು.

Update: 2025-10-10 07:39 GMT

ವರೀಂದರ್ ಸಿಂಗ್ ಘುಮಾನ್ ನಿಧನ

Click the Play button to listen to article

ಪ್ರಸಿದ್ಧ ಭಾರತೀಯ ವೃತ್ತಿಪರ ದೇಹದಾರ್ಢ್ಯ ಪಟು ಮತ್ತು ನಟ ವರೀಂದರ್ ಸಿಂಗ್ ಘುಮಾನ್ (42) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಭುಜದ ನೋವಿನಿಂದ ಚಿಕಿತ್ಸೆಗೆ ದಾಖಲಾಗಿದ್ದ ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  

ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದ ಘುಮಾನ್ ಅವರು ಕ್ರೀಡೆ ಮತ್ತು ಮನರಂಜನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದರು. 2009 ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತು ಮಿಸ್ಟರ್ ಏಷ್ಯಾ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಫಿಟ್‌ನೆಸ್ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. 

ಸಸ್ಯಾಹಾರಿ ಬಾಡಿಬಿಲ್ಡರ್ 

ವರೀಂದರ್ ಸಿಂಗ್ ಘುಮಾನ್ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸಸ್ಯಾಹಾರಿ ಜೀವನಶೈಲಿಯಿಂದ ಫಿಟ್‌ನೆಸ್ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದಿದ್ದರು. ವಿಶ್ವದ ಮೊದಲ ಸಸ್ಯಾಹಾರಿ ವೃತ್ತಿಪರ ಬಾಡಿಬಿಲ್ಡರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಘುಮಾನ್‌ ಅವರ ಜನಪ್ರಿಯತೆಯು ಅವರಿಗೆ ಅಂತರರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿತ್ತು. 

ಅರ್ನಾಲ್ಡ್ ಶ್ವಾರ್ಜಿ ನೆಗ್ಗರ್ ಅವರು ಏಷ್ಯಾದಲ್ಲಿ ಆರೋಗ್ಯ ಉತ್ಪನ್ನಗಳನ್ನು ಉತ್ತೇಜಿಸಲು ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದರು. ಫಿಟ್‌ನೆಸ್ ಮೇಲಿನ ಅವರ ಉತ್ಸಾಹವು ಜಲಂಧರ್‌ನಲ್ಲಿ ಜಿಮ್ ಸ್ಥಾಪಿಸಲು ಕಾರಣವಾಯಿತು. ಘುಮಾನ್‌ ಅವರು 1 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿದ್ದರು. 

ನಟನಾ ವೃತ್ತಿ, ರಾಜಕೀಯ ಮಹತ್ವಾಕಾಂಕ್ಷೆ

ದೇಹದಾರ್ಢ್ಯದಿಂದ ನಟನೆಯತ್ತ ವಾಲಿದ ಘುಮಾನ್ ಅವರು 2012 ರಲ್ಲಿ ಪಂಜಾಬಿ ಚಲನಚಿತ್ರ 'ಕಬಡ್ಡಿ ಒನ್ಸ್ ಅಗೇನ್' ಮೂಲಕ ಸಿನಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು 'ರೋರ್: ಟೈಗರ್ಸ್ ಆಫ್ ದಿ ಸುಂದರ್‌ಬನ್ಸ್' (2014) ಮತ್ತು 'ಮಾರ್ಜಾವಾನ್' (2019) ಚಿತ್ರಗಳಲ್ಲಿ ಕಾಣಿಸಿಕೊಂಡರು.

ಸಲ್ಮಾನ್ ಖಾನ್ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ 'ಟೈಗರ್- 3' (2023) ನಲ್ಲಿ ಪಾಕಿಸ್ತಾನಿ ಜೈಲು ಕಾವಲುಗಾರ ಶಕೀಲ್ ಪಾತ್ರವು ಒಂದು. 2027 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸುವ ಮಹತ್ವಾಕಾಂಕ್ಷೆ ವ್ಯಕ್ತಪಡಿಸಿದ್ದರು.

ಅಭಿಮಾನಿಗಳಿಂದ ಸಂತಾಪ

ಘುಮಾನ್ ಅವರ ನಿಧನ ಸುದ್ದಿ ಅವರ ಅಭಿಮಾನಿಗಳು ಮತ್ತು ಉದ್ಯಮದ ಸ್ನೇಹಿತರಿಗೆ ಆಘಾತವನ್ನುಂಟು ಮಾಡಿದೆ. ರಾಜಕಾರಣಿಗಳು ಸಹ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಘುಮಾನ್ ಅವರನ್ನು "ಪಂಜಾಬ್‌ನ ಹೆಮ್ಮೆ" ಎಂದು ಬಣ್ಣಿಸಿದ್ದಾರೆ. 

"ಪಂಜಾಬ್‌ನ ಹೆಮ್ಮೆ, 'ಭಾರತದ ಹೀ-ಮ್ಯಾನ್' ವರೀಂದರ್ ಘುಮಾನ್ ಜಿ ನಿಧನವು ದೇಶಕ್ಕೆ ತುಂಬಲಾಗದ ನಷ್ಟ. ತಮ್ಮ ಕಠಿಣ ಪರಿಶ್ರಮ ಮತ್ತು ಸಸ್ಯಾಹಾರಿ ಜೀವನಶೈಲಿಯಿಂದ ಫಿಟ್‌ನೆಸ್ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದಿದ್ದರು. ಅವರ ಜೀವನವು ಯಾವಾಗಲೂ ಯುವಕರಿಗೆ ಸ್ಫೂರ್ತಿಯ ಮೂಲವಾಗಿರಲಿದೆ" ಎಂದು ಬಿಜೆಪಿ ನಾಯಕರೊಬ್ಬರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags:    

Similar News