ಭಾರತ-ಆಫ್ಘನ್ ದೋಸ್ತಿ, ಪಾಕಿಸ್ತಾನಕ್ಕೆ ಆತಂಕ; ಆಫ್ಘನ್ ರಾಯಭಾರಿಗೆ ಸಮನ್ಸ್
ಭಾರತ ಪ್ರವಾಸದಲ್ಲಿರುವ ಮುತ್ತಕಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಡೆಸಿದ ದ್ವಿಪಕ್ಷೀಯ ಮಾತುಕತೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯೇ ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಪ್ರವಾಸವು ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಭಾರತದೊಂದಿಗೆ ಬಾಂಧವ್ಯ ವೃದ್ಧಿಯ ಆಶಯದೊಂದಿಗೆ ಮುತ್ತಕಿ ಹೆಜ್ಜೆ ಇಡುತ್ತಿದ್ದಂತೆಯೇ, ಇತ್ತ ಪಾಕಿಸ್ತಾನವು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಆಫ್ಘನ್ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
ಭಾರತ ಪ್ರವಾಸದಲ್ಲಿರುವ ಮುತ್ತಕಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಡೆಸಿದ ದ್ವಿಪಕ್ಷೀಯ ಮಾತುಕತೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯೇ ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅಫ್ಘಾನಿಸ್ತಾನವು ಖಂಡಿಸಿದ್ದನ್ನು ಮತ್ತು ಜಮ್ಮು-ಕಾಶ್ಮೀರವನ್ನು ಭಾರತದ ಭಾಗವೆಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದನ್ನು ಪಾಕಿಸ್ತಾನ ಬಲವಾಗಿ ವಿರೋಧಿಸಿದೆ. ಇದು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆ ಎಂದು ಆರೋಪಿಸಿ, ಇಸ್ಲಾಮಾಬಾದ್‌ನಲ್ಲಿರುವ ಆಫ್ಘನ್ ರಾಯಭಾರಿಯನ್ನು ಕರೆಸಿ ತನ್ನ ಆಕ್ಷೇಪವನ್ನು ಅಧಿಕೃತವಾಗಿ ದಾಖಲಿಸಿದೆ.
ಭಾರತದೊಂದಿಗೆ ಬಾಂಧವ್ಯ ವೃದ್ಧಿಯತ್ತ ತಾಲಿಬಾನ್
ಶನಿವಾರ ಉತ್ತರ ಪ್ರದೇಶದ ದೇವ್‌ಬಂದ್‌ಗೆ ಭೇಟಿ ನೀಡಿದ್ದ ಮುತ್ತಕಿ, "ಭಾರತದೊಂದಿಗೆ ನಮ್ಮ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಶೀಘ್ರದಲ್ಲೇ ಭಾರತಕ್ಕೆ ಹೊಸ ರಾಯಭಾರಿಯನ್ನು ಕಳುಹಿಸುವುದಾಗಿಯೂ ಅವರು ಘೋಷಿಸಿದರು. ನಾಲ್ಕು ವರ್ಷಗಳ ಹಿಂದೆ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಹಿರಿಯ ತಾಲಿಬಾನ್ ಸಚಿವರ ಈ ನಡೆ, ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ತೆರೆಯುವ ಸೂಚನೆ ನೀಡಿದೆ.
ಪಾಕಿಸ್ತಾನಕ್ಕೆ ತಿರುಗೇಟು
ಇದೇ ವೇಳೆ, "ಭಯೋತ್ಪಾದನೆಯು ಪಾಕಿಸ್ತಾನದ ಆಂತರಿಕ ಸಮಸ್ಯೆ" ಎಂಬ ಮುತ್ತಕಿ ಅವರ ಹೇಳಿಕೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ. ಆದರೆ, "ಯಾವುದೇ ಮೂರನೇ ದೇಶದ ವಿರುದ್ಧ ನಮ್ಮ ನೆಲವನ್ನು ಬಳಸಲು ನಾವು ಅನುಮತಿಸುವುದಿಲ್ಲ" ಎಂದು ಮುತ್ತಕಿ ಭಾರತದಲ್ಲಿ ಹೇಳಿಕೆ ನೀಡಿರುವುದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಭಾರತ-ಅಫ್ಘಾನಿಸ್ತಾನದ ಈ ಹೊಸ ಸ್ನೇಹವು ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ತೀವ್ರ ಹಿನ್ನಡೆಯುಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಮೂರು ದೇಶಗಳ ನಡುವಿನ ಸಂಬಂಧಗಳು ಹೊಸ ತಿರುವು ಪಡೆಯಲಿವೆ.