H1-B ವೀಸಾ ನಿಯಮ ಬದಲಾವಣೆ: ಭಾರತೀಯ ಉದ್ಯೋಗಿಗಳ ಮೇಲೆ ಏನು ಪರಿಣಾಮ?

ಅಮೆರಿಕದ ಟ್ರಂಪ್ ಸರ್ಕಾರ ಎಚ್-1ಬಿ ವೀಸಾ ಲಾಟರಿ ವ್ಯವಸ್ಥೆಯನ್ನು ರದ್ದುಗೊಳಿಸಿ, ವೇತನ ಮತ್ತು ಕೌಶಲ್ಯ ಆಧಾರಿತ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದು ಫೆಬ್ರವರಿ 2026 ರಿಂದ ಜಾರಿಯಾಗಲಿದೆ.

Update: 2025-12-24 03:09 GMT
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕದ ಟ್ರಂಪ್ ಸರ್ಕಾರ ಎಚ್-1ಬಿ (H-1B) ವೀಸಾ ಹಂಚಿಕೆಯಲ್ಲಿ ದಶಕಗಳಿಂದ ಅನುಸರಿಸುತ್ತಿದ್ದ ʻರಾಂಡಮ್‌ ಲಾಟರಿ' (Random Lottery) ವ್ಯವಸ್ಥೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಇದರ ಬದಲಿಗೆ ಹೆಚ್ಚಿನ ವೇತನ ಮತ್ತು ಉನ್ನತ ಕೌಶಲ್ಯ ಹೊಂದಿರುವವರಿಗೆ ಆದ್ಯತೆ ನೀಡುವ 'ವೇತನ ಆಧಾರಿತ' ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದೆ.

ಕೌಶಲ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ

ಡಿಸೆಂಬರ್ 23 ರಂದು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ (DHS), ಹೊಸ ವ್ಯವಸ್ಥೆಯು ಕೌಶಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿದೆ ಎಂದು ತಿಳಿಸಿದೆ. ಈ ಮೂಲಕ ಅಮೆರಿಕದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಬಲ್ಲ ಪ್ರತಿಭೆಗಳನ್ನು ಆಕರ್ಷಿಸುವುದು ಸರ್ಕಾರದ ಉದ್ದೇಶವಾಗಿದೆ.

ಲಾಟರಿ ವ್ಯವಸ್ಥೆಯ ದುರುಪಯೋಗ

ಪ್ರಸ್ತುತ ಇರುವ ಲಾಟರಿ ವ್ಯವಸ್ಥೆಯನ್ನು ಅಮೆರಿಕದ ಕೆಲವು ಕಂಪನಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಡಿಎಚ್‌ಎಸ್ (DHS) ಗಂಭೀರವಾಗಿ ಹೇಳಿದೆ. ಅಮೆರಿಕದ ಕಾರ್ಮಿಕರಿಗಿಂತ ಕಡಿಮೆ ವೇತನಕ್ಕೆ ವಿದೇಶಿ ಕಾರ್ಮಿಕರನ್ನು ಕರೆತರುವ ಏಕೈಕ ಉದ್ದೇಶದಿಂದ ಅನೇಕ ಕಂಪನಿಗಳು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬುದು ಸರ್ಕಾರದ ಆರೋಪ.

ಯುಎಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಷನ್ ಸರ್ವಿಸಸ್ (USCIS) ವಕ್ತಾರ ಮ್ಯಾಥ್ಯೂ ಟ್ರೇಗೆಸರ್ ಮಾತನಾಡಿ, "ಅಸ್ತಿತ್ವದಲ್ಲಿದ್ದ ಲಾಟರಿ ಪ್ರಕ್ರಿಯೆಯನ್ನು ಉದ್ಯೋಗದಾತರು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಹೊಸ ನಿಯಮವು ಕಾಂಗ್ರೆಸ್‌ನ ಮೂಲ ಉದ್ದೇಶವನ್ನು ಈಡೇರಿಸಲಿದೆ ಮತ್ತು ಅಮೆರಿಕದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ" ಎಂದಿದ್ದಾರೆ.

ಪ್ರಮುಖ ಬದಲಾವಣೆಗಳು ಮತ್ತು ಮಿತಿ

ಎಚ್-1ಬಿ ವೀಸಾಗಳ ವಾರ್ಷಿಕ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ವರ್ಷ ಒಟ್ಟು 65,000 ಸಾಮಾನ್ಯ ವೀಸಾಗಳು ಮತ್ತು ಅಮೆರಿಕದಲ್ಲಿ ಉನ್ನತ ಪದವಿ ಪಡೆದವರಿಗೆ ಹೆಚ್ಚುವರಿ 20,000 ವೀಸಾಗಳನ್ನು ನೀಡಲಾಗುತ್ತದೆ. ಆದರೆ, ಆಯ್ಕೆಯು ಈಗ ಸಂಪೂರ್ಣವಾಗಿ ಅರ್ಹತೆ ಮತ್ತು ನೀಡಲಾಗುವ ವೇತನದ ಪ್ರಮಾಣವನ್ನು ಅವಲಂಬಿಸಿರುತ್ತದೆ.

ಫೆಬ್ರವರಿ 2026 ರಿಂದ ಜಾರಿ

ಈ ಹೊಸ ನಿಯಮವು ಫೆಬ್ರವರಿ 27, 2026 ರಿಂದ ಜಾರಿಗೆ ಬರಲಿದೆ ಮತ್ತು ಹಣಕಾಸು ವರ್ಷ 2027 ರ ವೀಸಾ ನೋಂದಣಿ ಪ್ರಕ್ರಿಯೆಗೆ ಅನ್ವಯವಾಗಲಿದೆ. "ಅಮೆರಿಕದ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು 'ಅಮೆರಿಕನ್ನರು ಮೊದಲು' (America First) ಎಂಬ ನೀತಿಯನ್ನು ಎತ್ತಿ ಹಿಡಿಯುವುದು ನಮ್ಮ ಬದ್ಧತೆಯಾಗಿದೆ," ಎಂದು ಟ್ರೇಗೆಸರ್ ಪುನರುಚ್ಚರಿಸಿದ್ದಾರೆ.

ಐಟಿ ಉದ್ಯೋಗಿಗಳ ಮೇಲೆ ಏನು ಪರಿಣಾಮ?

ಅಮೆರಿಕಾದ ಎಚ್-1ಬಿ (H-1B) ವೀಸಾ ವ್ಯವಸ್ಥೆಯಲ್ಲಿ ಲಾಟರಿ ಪದ್ಧತಿ ರದ್ದಾಗಿ, ವೇತನ ಆಧಾರಿತ ಆಯ್ಕೆ ಪ್ರಕ್ರಿಯೆ ಜಾರಿಗೆ ಬರುವುದರಿಂದ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಮಿಶ್ರ ಪರಿಣಾಮಗಳು ಉಂಟಾಗಲಿವೆ. ಹೊಸ ನಿಯಮದ ಪ್ರಕಾರ, ಯಾರು ಅತಿ ಹೆಚ್ಚು ಸಂಬಳ ಪಡೆಯುತ್ತಾರೋ ಅವರಿಗೆ ವೀಸಾ ಸಿಗುವ ಸಾಧ್ಯತೆ ಹೆಚ್ಚು. ಐಟಿ ಕ್ಷೇತ್ರದಲ್ಲಿ 8-10 ವರ್ಷಗಳ ಅನುಭವವಿದ್ದು, ಅಮೆರಿಕಾದಲ್ಲಿ ಹೆಚ್ಚಿನ ವೇತನ ಪಡೆಯುವ (Level 3 ಮತ್ತು Level 4 ವೇತನ ಶ್ರೇಣಿ) ಭಾರತೀಯ ಉದ್ಯೋಗಿಗಳಿಗೆ ಲಾಟರಿಗಿಂತ ಈ ವ್ಯವಸ್ಥೆ ಹೆಚ್ಚು ಲಾಭದಾಯಕ.

ವೃತ್ತಿ ಬದಕು ಆರಂಭಿಸುತ್ತಿರುವ ಅಥವಾ 1-3 ವರ್ಷಗಳ ಅನುಭವ ಇರುವವರಿಗೆ ಸಾಮಾನ್ಯವಾಗಿ ಕಡಿಮೆ ವೇತನ (Level 1 ಮತ್ತು Level 2) ನೀಡಲಾಗುತ್ತದೆ. ವೇತನ ಆಧಾರಿತ ಆದ್ಯತೆ ನೀಡಿದಾಗ, ಇವರಿಗೆ ವೀಸಾ ಸಿಗುವ ಅವಕಾಶಗಳು ಕ್ಷೀಣಿಸುತ್ತವೆ. ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಮಾಸ್ಟರ್ಸ್ ಮುಗಿಸಿ ಅಲ್ಲಿಯೇ ಉದ್ಯೋಗಕ್ಕೆ ಸೇರುವ ಭಾರತೀಯ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಬಹುದು. ಏಕೆಂದರೆ ಅವರಿಗೆ ಈಗಾಗಲೇ ಉನ್ನತ ವೇತನದ ಆಫರ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಏನಿದು 'ರಾಂಡಮ್ ಲಾಟರಿ' ವ್ಯವಸ್ಥೆ?

'ರಾಂಡಮ್ ಲಾಟರಿ' ಎನ್ನುವುದು ಅಮೆರಿಕಾದಲ್ಲಿ H-1B ವೀಸಾಗಳನ್ನು ಹಂಚಿಕೆ ಮಾಡಲು ಇಲ್ಲಿಯವರೆಗೆ ಬಳಸುತ್ತಿದ್ದ ಒಂದು ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆಯಾಗಿದೆ. ಪ್ರತಿ ವರ್ಷ ಅಮೆರಿಕಾದ ಕಂಪನಿಗಳು ವಿದೇಶಿ ನೌಕರರಿಗಾಗಿ ಲಕ್ಷಾಂತರ ಅರ್ಜಿಗಳನ್ನು ಸಲ್ಲಿಸುತ್ತವೆ. ಆದರೆ, ವಾರ್ಷಿಕವಾಗಿ ನೀಡಲಾಗುವ ವೀಸಾಗಳ ಸಂಖ್ಯೆ ಸೀಮಿತವಾಗಿರುತ್ತದೆ (ಒಟ್ಟು 85,000). ಅರ್ಜಿಗಳ ಸಂಖ್ಯೆ ಈ ಮಿತಿಗಿಂತ ಹೆಚ್ಚಾದಾಗ, ಕಂಪ್ಯೂಟರ್ ಮೂಲಕ ಯಾವುದೇ ಒಬ್ಬ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. ಇದು ಒಂದು ಲಾಟರಿ ಎತ್ತಿದಂತೆಯೇ ಇರುತ್ತದೆ.

ಟ್ರಂಪ್ ಸರ್ಕಾರದ ವಿರೋಧ ಏಕೆ?

ವರದಿಯಲ್ಲಿ ಹೇಳಿರುವಂತೆ, ಈ ಲಾಟರಿ ವ್ಯವಸ್ಥೆಯನ್ನು ಕೆಲವು ಕಂಪನಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದವು. ಉನ್ನತ ಪ್ರತಿಭೆಗಳ ಬದಲಿಗೆ, ಕಡಿಮೆ ವೇತನಕ್ಕೆ ಸಿಗುವ ಸಾಮಾನ್ಯ ಕೆಲಸಗಾರರನ್ನು ಕರೆತರಲು ಲಾಟರಿ ವ್ಯವಸ್ಥೆ ಅನುಕೂಲಕರವಾಗಿತ್ತು.ಅಗ್ಗದ ದರದಲ್ಲಿ ವಿದೇಶಿ ಕಾರ್ಮಿಕರು ಸಿಗುವುದರಿಂದ, ಅಮೆರಿಕದ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿದ್ದವು.

Tags:    

Similar News