ಭಾರತದಿಂದ ಅಕ್ಕಿ ಖರೀದಿಸಲು ಚಿಂತನೆ; ಉದ್ವಿಗ್ನತೆ ನಡುವೆ ಶಾಂತಿ ಪತಾಕೆ ಹಾರಿಸಿದ ಬಾಂಗ್ಲಾ!

ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತದೊಂದಿಗೆ ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಮುಂದಾಗಿದೆ. ರಾಜಕೀಯವನ್ನು ಹೊರಗಿಟ್ಟು ವ್ಯಾಪಾರಕ್ಕೆ ಆದ್ಯತೆ ನೀಡಲು ಯೂನಸ್‌ ಸರ್ಕಾರ ನಿರ್ಧರಿಸಿದೆ.

Update: 2025-12-24 03:42 GMT
ಮೊಹಮ್ಮದ್‌ ಯೂನಸ್‌
Click the Play button to listen to article

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರು ಭಾರತದೊಂದಿಗೆ ಹದಗೆಟ್ಟಿರುವ ದ್ವಿಪಕ್ಷೀಯ ಬಾಂಧವ್ಯ ಹಾಗೂ ಆರ್ಥಿಕ ಸಂಬಂಧಗಳನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಸರ್ಕಾರದ ಹಣಕಾಸು ಸಲಹೆಗಾರ ಸಲೇಹುದ್ದೀನ್ ಅಹ್ಮದ್ ತಿಳಿಸಿದ್ದಾರೆ.

ರಾಜಕೀಯಕ್ಕಿಂತ ಆರ್ಥಿಕತೆಗೆ ಆದ್ಯತೆ

ಮಂಗಳವಾರ ನಡೆದ ಸರ್ಕಾರಿ ಖರೀದಿ ಸಮಿತಿ ಸಭೆಯ ನಂತರ ಮಾತನಾಡಿದ ಅಹ್ಮದ್, "ರಾಜಕೀಯ ವಾಕ್ಸಮರಗಳನ್ನು ಬದಿಗಿಟ್ಟು, ಕೇವಲ ಆರ್ಥಿಕ ಹಿತಾಸಕ್ತಿಗಳ ಆಧಾರದ ಮೇಲೆ ಭಾರತದೊಂದಿಗೆ ಸಂಬಂಧ ಬೆಳೆಸಲು ಯೂನುಸ್ ಆಡಳಿತ ಶ್ರಮಿಸುತ್ತಿದೆ," ಎಂದಿದ್ದಾರೆ. ಮುಖ್ಯ ಸಲಹೆಗಾರರು ವಿವಿಧ ಪಾಲುದಾರರೊಂದಿಗೆ ಈ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದಿಂದ ಅಕ್ಕಿ ಆಮದು

ಭಾರತದೊಂದಿಗಿನ ಸಂಬಂಧ ಸುಧಾರಣೆಯ ಸಂಕೇತವಾಗಿ ಬಾಂಗ್ಲಾದೇಶವು ಭಾರತದಿಂದ 50,000 ಟನ್ ಅಕ್ಕಿ ಖರೀದಿಸಲು ಅನುಮೋದನೆ ನೀಡಿದೆ. "ನಮ್ಮ ವ್ಯಾಪಾರ ನೀತಿಯು ರಾಜಕೀಯ ಪ್ರೇರಿತವಲ್ಲ. ವಿಯೆಟ್ನಾಂಗೆ ಹೋಲಿಸಿದರೆ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುವುದು ಅಗ್ಗವಾಗಿದೆ. ಭಾರತದಿಂದ ಖರೀದಿಸಿದರೆ ಪ್ರತಿ ಕೆಜಿಗೆ 10 ಟಾಕಾ (ಸುಮಾರು 0.082 ಡಾಲರ್) ಉಳಿತಾಯವಾಗುತ್ತದೆ," ಎಂದು ಅಹ್ಮದ್ ವಿವರಿಸಿದ್ದಾರೆ.

ಹದಗೆಟ್ಟ ಭಾರತ-ಬಾಂಗ್ಲಾ ಸಂಬಂಧ

1971ರ ಸ್ವಾತಂತ್ರ್ಯಾನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಇಷ್ಟೊಂದು ಹದಗೆಟ್ಟಿರುವುದು ಇದೇ ಮೊದಲು ಎಂದು ರಾಜತಾಂತ್ರಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ರಾಯಭಾರಿಗಳಿಗೆ ಪದೇ ಪದೆ ಸಮನ್ಸ್‌ ನಡುವೆಯೂ, "ಪರಿಸ್ಥಿತಿ ಅಂದುಕೊಂಡಷ್ಟು ಬಿಗಡಾಯಿಸಿಲ್ಲ. ಇದನ್ನು ಸರಿಪಡಿಸಲು ಯೂನಸ್‌ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ" ಎಂದು ಸಲೇಹುದ್ದೀನ್ ಅಹ್ಮದ್ ತಿಳಿಸಿದ್ದಾರೆ.

ಕೆಲವು ಬಾಹ್ಯ ಶಕ್ತಿಗಳು ಅಥವಾ ವ್ಯಕ್ತಿಗಳು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರಬಹುದು, ಆದರೆ ಅವು ದೇಶದ ಅಧಿಕೃತ ಧ್ವನಿಯಲ್ಲ. ಅಂತಹ ಹೇಳಿಕೆಗಳು ಬಾಂಗ್ಲಾದೇಶಕ್ಕೆ ಸಂಕೀರ್ಣ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ವಿದ್ಯಾರ್ಥಿ ನಾಯಕ ಉಸ್ಮಾನ್‌ ಹಾದಿ ಹತ್ಯೆ ಖಂಡಿಸಿ ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರ, ಗಲಭೆಯ ನಡೆಯುತ್ತಲೇ ಇದೆ. ಶೇಖ್ ಹಸೀನಾ ಪಲಾಯಣದ ಬಳಿಕ ಹದಗೆಟ್ಟಿದ್ದ ಭಾರತ-ಬಾಂಗ್ಲಾದೇಶದ ಸಂಬಂಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈಗ ಬಾಂಗ್ಲಾದೇಶವ ದೆಹಲಿಯಲ್ಲಿರುವ ತನ್ನ ಹೈಕಮಿಷನ್ ಮತ್ತು ತ್ರಿಪುರಾದಲ್ಲಿರುವ ಮಿಷನ್‌ನಲ್ಲಿ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮತ್ತೊಂದೆಡೆ ಬಾಂಗ್ಲಾದೇಶದ ಮೈಮೆನ್‌ಸಿಂಗ್‌ನಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಇಸ್ಲಾಮಿಸ್ಟ್ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ, ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಮುಂದೆ ಭಾರಿ ಪ್ರತಿಭಟನೆ ಭುಗಿಲೆದ್ದಿತ್ತು. ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೀದಿಗಿಳಿದಿದ್ದರು.

Tags:    

Similar News