ಏಪ್ರಿಲ್ 22- ವೈದ್ಯರೊಂದಿಗೆ ವಿಡಿಯೋ ಸಮಾಲೋಚನೆಗೆ ಕೇಜ್ರಿವಾಲ್ ಅವರು ಮಾಡಿದ ಮನವಿಯನ್ನು ತಿರಸ್ಕರಿಸಿರುವ ದೆಹಲಿ ನ್ಯಾಯಾಲಯ, ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಮತ್ತು ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ಅಗತ್ಯವಿದೆಯೇ ಎಂದು ನಿರ್ಧರಿಸಬೇಕೆಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನಿರ್ದೇಶಿಸಿದೆ.
ಸಿಬಿಐ ಮತ್ತು ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ತಮ್ಮ ವೈದ್ಯರೊಂದಿಗೆ ವಿಡಿಯೋ ಸಮಾಲೋಚನೆಗೆ ಕೇಜ್ರಿವಾಲ್ ಅವರ ಮನವಿಯನ್ನು ನಿರಾಕರಿಸಿದರು.
ಜೈಲಿನಲ್ಲಿ ಇನ್ಸುಲಿನ್ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ಏಪ್ರಿಲ್ 19ರಂದು ಆರೋಪಿಸಿದ್ದರು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ʻಆತಂಕಕಾರಿʼ ಯಾಗಿ ಏರಿಕೆಯಾಗಿದೆ ಎಂದಿದ್ದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಎಐಐಎಂಎಸ್ ವೈದ್ಯರು ʻನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕಿಲ್ಲʼ ಎಂದರು ಎಂಬ ಜೈಲು ಅಧಿಕಾರಿಗಳ ಹೇಳಿಕೆಯನ್ನು ಎಎಪಿ ನಾಯಕ ತಿರಸ್ಕರಿಸಿದರು.
ಎಎಪಿ ಮೂಲಗಳ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟ ದಿನದಲ್ಲಿ ಮೂರು ಬಾರಿ ಹೆಚ್ಚಾಗುವುದರಿಂದ ಇನ್ಸುಲಿನ್ ಅನ್ನು ಕೇಳುತ್ತಿದ್ದಾರೆ. ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕೇಜ್ರಿವಾಲ್, ಮಾರ್ಚ್ 21 ರಿಂದ ತಿಹಾರ್ ಜೈಲಿನಲ್ಲಿದ್ದಾರೆ.