ನಾಯ್ಡು, ಬಿಜೆಪಿಯಿಂದ ನೇರ ಲಾಭ ವರ್ಗಾವಣೆಗೆ ತಡೆ: ಜಗನ್ ಮೋಹನ್ ರೆಡ್ಡಿ
ಅಮರಾವತಿ (ಆಂಧ್ರಪ್ರದೇಶ), ಮೇ 7: ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಬಿಜೆಪಿ ರಾಜ್ಯಾಧ್ಯಕ್ಷೆ ಡಿ. ಪುರಂದೇಶ್ವರಿ ಆಂಧ್ರಪ್ರದೇಶದಲ್ಲಿ ಕಲ್ಯಾಣ ಯೋಜನೆಗಳ ವಿತರಣೆಯನ್ನು ಸ್ಥಗಿತಗೊಳಿಸುತ್ತಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮಂಗಳವಾರ ಆರೋಪಿಸಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ರಾಜನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ,ʻರಾಜ್ಯದ ಜನಕಲ್ಯಾಣ ಯೋಜನೆಗಳಾದ ಪಿಂಚಣಿ ಮತ್ತು ಇನ್‌ಪುಟ್ ಸಬ್ಸಿಡಿ ಸೇರಿದಂತೆ ನೇರ ಲಾಭ ವರ್ಗಾವಣೆ (ಡಿಬಿಟಿ)ಯನ್ನು ನಿಲ್ಲಿಸುವಂತೆ ಚುನಾವಣೆ ಆಯೋಗದ ಮೇಲೆ ಒತ್ತಡ ಹೇರುತ್ತಿದ್ದಾರೆʼ ಎಂದು ದೂರಿದರು.
ʻನಾಯ್ಡು ಅವರ ನಾಟಕವನ್ನು ಜನರು ನೋಡುತ್ತಿದ್ದಾರೆ. ದೆಹಲಿ ಮೂಲದ ಮೈತ್ರಿ ಪಾಲುದಾರ(ಬಿಜೆಪಿ)ನ ಮೂಲಕ ವಿವಾದ ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಮನೆ ಬಾಗಿಲಿಗೆ ಕಲ್ಯಾಣ ಪಿಂಚಣಿ ಪಡೆದವರು ಈಗ ಕಂಬದಿಂದ ಕಂಬಕ್ಕೆ ಅಲೆದಾಡುವ ಸ್ಥಿತಿ ಬಂದಿದೆʼ ಎಂದು ಆರೋಪಿಸಿದರು.
ʻಪಿಂಚಣಿ ಸೇವೆಗಳನ್ನು ಮರುಸ್ಥಾಪಿಸಲು ತಮ್ಮನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಜೂನ್ 4 ರಂದು ಪಕ್ಷ ಅಧಿಕಾರವನ್ನು ಮರಳಿ ಪಡೆಯಲಿದೆ. ವಾರದೊಳಗೆ ಎಲ್ಲಾ ಕಲ್ಯಾಣ ಯೋಜನೆಗಳ ವಿತರಣೆಯನ್ನು ತ್ವರಿತಗೊಳಿಸಲಿದೆ,ʼ ಎಂದು ರೆಡ್ಡಿ ಹೇಳಿದರು.
ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಭಾಗವಾಗಿವೆ. ರಾಜ್ಯದ 175 ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದೆ.