ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಮೇ 27, 2024 ಕೊನೆಯ ದಿನಾಂಕ. ಆಯ್ಕೆ ಪ್ರಕ್ರಿಯೆಯು ಅರ್ಜಿ ಪರಿಶೀಲನೆ, ವೈಯಕ್ತಿಕ ಸಂದ ರ್ಶನ ಮತ್ತು ಪಟ್ಟಿ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ ಎಂದು ಬಿಸಿಸಿಐ ಹೇಳಿದೆ.

Update: 2024-05-14 07:29 GMT

ಹೊಸದಿಲ್ಲಿ, ಮೇ 13- ಭಾರತೀಯ ಕ್ರಿಕೆಟ್‌ ಮಂಡಳಿ(ಬಿಸಿಸಿಐ) ಮೂರೂವರೆ ವರ್ಷಗಳ ಅವಧಿಗೆ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮುಂದಿನ ತಿಂಗಳು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನೊಂದಿಗೆ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. 

ಅರ್ಜಿ ಸಲ್ಲಿಸಲು ಮೇ 27, 2024 ಕೊನೆಯ ದಿನಾಂಕ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆ ಪ್ರಕ್ರಿಯೆಯು ಅರ್ಜಿ ಪರಿಶೀಲನೆ, ವೈಯಕ್ತಿಕ ಸಂದರ್ಶನ ಮತ್ತು ಪಟ್ಟಿ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಆಯ್ಕೆಯಾದ ತರಬೇತುದಾರರು ಜುಲೈ 1 ರಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಅಧಿಕಾರಾವಧಿ ಡಿಸೆಂಬರ್ 31, 2027 ರಂದು ಮುಕ್ತಾಯಗೊಳ್ಳುತ್ತದೆ. 

ಅರ್ಹತೆಗಳೇನು?: 60 ವರ್ಷಕ್ಕಿಂತ ಕಡಿಮೆ ವಯ‌ಸ್ಸು, ಕನಿಷ್ಠ 30 ಟೆಸ್ಟ್ ಅಥವಾ 50 ಒಂದು ದಿನದ ಪಂದ್ಯ ಆಡಿರಬೇಕು ಮತ್ತು ಟೆಸ್ಟ್‌ ಆಡುವ ರಾಷ್ಟ್ರವೊಂದರ ತಂಡದಲ್ಲಿ ಕನಿಷ್ಠ ಎರಡು ವರ್ಷ ಕಾಲ ಕೋಚ್‌ ಆಗಿ ಪಾತ್ರ ನಿರ್ವಹಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ. 

ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ʻರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಬೇಕೆಂದರೆ, ಮತ್ತೆ ಅರ್ಜಿ ಸಲ್ಲಿಸಬೇಕು. ನಾವು ಮೂರು ವರ್ಷ ಕಾಲದ ದೀರ್ಘಾವಧಿಯ ಕೋಚ್‌ಗೆ ಹುಡುಕುತ್ತಿದ್ದೇವೆʼ ಎಂದು ಮಾಹಿತಿ ನೀಡಿದ್ದರು.

ದ್ರಾವಿಡ್ ಅವರು ನವೆಂಬರ್ 2021 ರಿಂದ ಸೇವೆ ಸಲ್ಲಿಸಿದ್ದಾರೆ. ಅವರ ಎರಡು ವರ್ಷಗಳ ಒಪ್ಪಂದ 2023ರಲ್ಲಿ ಸ್ವದೇಶದಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನೊಂದಿಗೆ ಕೊನೆಗೊಂಡಿತು. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ಅಮೆರಿಕಾದಲ್ಲಿ ಟಿ20 ವಿಶ್ವಕಪ್‌ಗೆ ಮೊದಲು ಹೊಸ ತರಬೇತುದಾರರನ್ನು ನೇಮಿಸಲು ಸಮಯದ ಕೊರತೆಯಿಂದಾಗಿ ಒಪ್ಪಂದವನ್ನು ವಿಸ್ತರಿಸಲಾಯಿತು.

ಹೊಸ ತರಬೇತಿದಾರರಿಗೆ ಹಲವು ಸವಾಲು: ಜುಲೈನಲ್ಲಿ ಶ್ರೀಲಂಕಾದಲ್ಲಿ ವೈಟ್ ಬಾಲ್ ಸರಣಿ ನಡೆಯಲಿದೆ. ಆನಂತರ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ದೇಶದಲ್ಲಿ ಟೆಸ್ಟ್ ಸರಣಿ ನಡೆಯಲಿದೆ. ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಕ್ಕೆ ಭಾರತ ತಂಡ ತೆರಳಲಿದೆ. 2025 ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ, ವರ್ಷದ ಮಧ್ಯದಲ್ಲಿ ಇಂಗ್ಲೆಂಡ್ ಪ್ರವಾಸವಿದೆ. 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಟಿ 20 ವಿಶ್ವಕಪ್‌ ಸಹ ಆತಿಥ್ಯ ವಹಿಸಲಿವೆ. 2027ರಲ್ಲಿ ದಕ್ಷಿಣ ಆಫ್ರಿಕದಲ್ಲಿ 50 ಓವರ್‌ಗಳ ವಿಶ್ವಕಪ್ ನಡೆಯಲಿದೆ. 

ನೂತನ ಕೋಚ್ ಸ್ಟಾರ್‌ ಕ್ರಿಕೆಟರ್‌ ಗಳಾದ  ವಿರಾಟ್ ಕೊಹ್ಲಿ ಮತ್ತು ಪ್ರಸ್ತುತ ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

Tags:    

Similar News