ನಟಿ ನಿಧಿ ಅಗರ್ವಾಲ್ ಮೇಲೆ ಮುಗಿಬಿದ್ದ ಜನ; ನಟಿಯ ಸುರಕ್ಷತೆ ಬಗ್ಗೆ ಆಕ್ರೋಶ
ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದ ನಟಿ ನಿಧಿ ಅಗರ್ವಾಲ್ ಅವರನ್ನು ಅಭಿಮಾನಿಗಳು ಸುತ್ತುವರಿದು, ಅವರ ಮೇಲೆ ಮುಗಿಬಿದ್ದಿದ್ದಾರೆ.
ನಟಿ ನಿಧಿ ಅಗರ್ವಾಲ್ ಮೇಲೆ ಮುಗಿಬಿದ್ದ ಕಿಡಿಗೇಡಿಗಳು
ತೆಲುಗಿನ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' ಪ್ರಚಾರ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಕಹಿ ಅನುಭವ ಎದುರಿಸಿದ್ದಾರೆ. ಹೈದರಾಬಾದ್‌ನ ಮಾಲ್ ಒಂದರಲ್ಲಿ ನಡೆದ ಚಿತ್ರದ ಹಾಡಿನ ಬಿಡುಗಡೆ ಸಮಾರಂಭಕ್ಕೆ ನಿಧಿ ಅಗರ್ವಾಲ್ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಹೊರಬರುವಾಗ ನೂರಾರು ಅಭಿಮಾನಿಗಳು ಒಮ್ಮೆಗೆ ನಟಿಯನ್ನು ಮುತ್ತಿಕೊಂಡಿದ್ದಾರೆ. ಈ ನೂಕುನುಗ್ಗಲನ್ನು ದುರ್ಬಳಕೆ ಮಾಡಿಕೊಂಡ ಕೆಲವು ಕಿಡಿಗೇಡಿಗಳು ನಟಿಯ ಜೊತೆ ಅಸಭ್ಯವಾಗಿ ವರ್ತಿಸಲು ಮತ್ತು ಅವರನ್ನು ಅನುಚಿತವಾಗಿ ಮುಟ್ಟಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ನಡೆದಿದ್ದೇನು?
ಬುಧವಾರ ಹೈದರಾಬಾದ್‌ನ ಕೂಕಟ್‌ಪಲ್ಲಿಯಲ್ಲಿರುವ ಲುಲು ಮಾಲ್‌ನಲ್ಲಿ 'ಸಹನಾ ಸಹನಾ' ಹಾಡಿನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟಿ ನಿಧಿ ಅಗರ್ವಾಲ್, ರಿಧಿ ಕುಮಾರ್, ನಿರ್ದೇಶಕ ಮಾರುತಿ ಮತ್ತು ನಿರ್ಮಾಪಕ ಟಿ.ಜಿ. ವಿಶ್ವಪ್ರಸಾದ್ ಆಗಮಿಸಿದ್ದರು. ಪ್ರಭಾಸ್ ಅವರ ಸಿನಿಮಾ ಎಂಬ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಕಾರ್ಯಕ್ರಮ ಮುಗಿಸಿ ನಿಧಿ ಅಗರ್ವಾಲ್ ಕಾರಿನತ್ತ ತೆರಳುತ್ತಿದ್ದಾಗ, ಅಭಿಮಾನಿಗಳು ನಿಯಂತ್ರಣ ಮೀರಿ ಅವರ ಮೇಲೆ ಮುಗಿಬಿದ್ದಿದ್ದಾರೆ. ಸೆಕ್ಯೂರಿಟಿ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಕೆಲವರು ನಟಿಯನ್ನು ಮುಟ್ಟಲು ಪ್ರಯತ್ನಿಸಿದ್ದು, ನಿಧಿ ತೀವ್ರ ಅಸಹನೆ ಮತ್ತು ಭಯಕ್ಕೊಳಗಾದರು. ಹೇಗೋ ಕಷ್ಟಪಟ್ಟು ಕಾರು ಹತ್ತಿದ ನಟಿ, ಮುಖ ಮುಚ್ಚಿಕೊಂಡು ಏನಿದು ಇಷ್ಟೊಂದು ಅತಿರೇಕ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇವರು ಪ್ರಾಣಿಗಳಿಗಿಂತ ಕಡೆ
ಈ ಘಟನೆಯ ಬಗ್ಗೆ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ. ನಟಿಗೆ ಆದ ಅವಮಾನವನ್ನು ಖಂಡಿಸಿರುವ ಅವರು,ಇವರು ನರಿಗಳಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಒಂದು ಗುಂಪು ಸೇರಿದರೆ ಪುರುಷರು ಮಹಿಳೆಯನ್ನು ಹೇಗೆ ಹಿಂಸಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಇಂತಹ ಮನಸ್ಥಿತಿಯ ಜನರನ್ನು ದೇವರು ಬೇರೆ ಗ್ರಹಕ್ಕೆ ಯಾಕೆ ಕಳುಹಿಸಬಾರದು? ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿರ್ವಹಣಾ ವೈಫಲ್ಯಕ್ಕೆ ನೆಟ್ಟಿಗರ ಕಿಡಿ
ಸಿನಿಮಾ ತಂಡ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ನಟಿಯರ ಜೀವನಕ್ಕೆ ಧಕ್ಕೆ ತರುವುದು ಮತ್ತು ಅವರ ಮೇಲೆ ಬೀಳುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.