ಮಣಿಪುರ: ಸಂಘರ್ಷದ ಒಂದು ವರ್ಷದ ಬಳಿಕ ಪರಿಸ್ಥಿತಿ

ವಿಭಜಿತ ರಾಜ್ಯ, ಬೇರ್ಪಟ್ಟ ಜನರು. ಜನಾಂಗೀಯ ಸಂಘರ್ಷ ಆಳವಾದ ಬಿರುಕು ಮೂಡಿಸಿದೆ

Update: 2024-05-04 10:53 GMT

ಸರಿಯಾಗಿ 1 ವರ್ಷದ ಹಿಂದೆ ಮಣಿಪುರಿಗಳ ತಾಯ್ನಾಡು ವಿಭಾಗಗೊಂಡಿತು ಮತ್ತು ಸಮಾಜ ಬೇರ್ಪಟ್ಟಿತು. ತಲೆಮಾರುಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಕುಟುಂಬಗಳು ಮತ್ತು ನೆರೆಹೊರೆಯವರು ಪ್ರತ್ಯೇಕಗೊಂಡರು.

ಮೇ 3, 2023, ಎರಡು ಮಣಿಪುರಗಳು ಅಸ್ತಿತ್ವಕ್ಕೆ ಬಂದ ದಿನವೆಂದು ಜನರ ಸಾಮೂಹಿಕ ಸ್ಮರಣೆ ಮೇಲೆ ದಾಖಲಾಗಿದೆ. ರಾಜ್ಯ ನಿಯಂತ್ರಣ ರೇಖೆಯಿಂದ ವಿಭಜಿಸಲ್ಪಟ್ಟಿತು. ಮೈಟಿ ಸಮುದಾಯದ ಪರಿಶಿಷ್ಟ ಪಂಗಡ(ಎಸ್‌ಟಿ) ಸ್ಥಾನಮಾನದ ಬೇಡಿಕೆಯನ್ನುವಿರೋಧಿಸಿ ಬೆಟ್ಟದ ಜಿಲ್ಲೆಗಳಲ್ಲಿ ಆಯೋಜಿಸಿದ 'ಬುಡಕಟ್ಟು ಐಕ್ಯತಾ ಮೆರವಣಿಗೆ'ಯು ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗೆ ಕಾರಣವಾಯಿತು. ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರಿದ ಈ ಸಂಘರ್ಷ 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಿದೆ.

ಈಶಾನ್ಯ ರಾಜ್ಯದ ಮೂರು ಪ್ರಮುಖ ಜನಾಂಗೀಯ ಗುಂಪುಗಳು ರಾಜ್ಯದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ನೆಲೆ ಹೊಂದಿವೆ-- ಕಣಿವೆಯಲ್ಲಿ ಮೈಟಿ, ದಕ್ಷಿಣದ ಬೆಟ್ಟಗಳಲ್ಲಿ ಕುಕಿ ಮತ್ತು ಉತ್ತರದ ಬೆಟ್ಟಗಳಲ್ಲಿ ನಾಗಾ. ಆದರೆ, ಮೇ ತಿಂಗಳವರೆಗೆ ಈ ಸಮುದಾಯಗಳ ನಡುವೆ ಸಂಪೂರ್ಣ ಪ್ರತ್ಯೇಕತೆ ಹಿಂದೆಂದೂ ಇರಲಿಲ್ಲ. ಈಗ ಮೈಟಿಗಳು ಇಂಫಾಲ್ ಕಣಿವೆಯಲ್ಲಿ ಕೇಂದ್ರೀಕೃತವಾಗಿದ್ದು, ಕುಕಿಗಳು ಬೆಟ್ಟಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಶತ್ರು ರಾಷ್ಟ್ರಗಳ ನಡುವಿನ ಗಡಿ: ಬಯಲು ಮತ್ತು ಬೆಟ್ಟದ ಜಿಲ್ಲೆಗಳ ನಡುವೆ ಯುದ್ಧದಲ್ಲಿ ತೊಡಗಿಕೊಂಡ ರಾಷ್ಟ್ರಗಳ ಮಧ್ಯೆ ಇರುವಂಥ ರಕ್ಷಾಕವಚವನ್ನು ನೋಡಬಹುದು. ಬಿಷ್ಣುಪುರ ಮತ್ತು ಕುಕಿ ಪ್ರಾಬಲ್ಯದ ಚುರಾಚಂದ್‌ಪುರದ ನಡುವಿನ ಗಡಿಯಲ್ಲಿ ಅಥವಾ ಮೈಟಿ ನಿಯಂತ್ರಿ ತ ಇಂಫಾಲ್ ಪಶ್ಚಿಮ ಮತ್ತು ಕುಕಿ 'ಪ್ರದೇಶ' ಕಾಂಗ್‌ಪೋಪಿ ನಡುವೆ ಉಕ್ಕಿನ ಮುಳ್ಳುಗಳ ಸುರುಳಿಗಳು, ಶಸ್ತ್ರಸಜ್ಜಿತ ವಾಹನಗಳು-ಭದ್ರತಾ ಸಿಬ್ಬಂದಿ, ಮರಳು ಚೀಲದ ಬಂಕರ್‌ಗಳು, ಚೆಕ್‌ಪೋಸ್ಟ್‌ಗಳನ್ನು ಕಾಣಬಹುದು. ಸಂಘರ್ಷ ನಾಗರಿಕ ಸಮಾಜವನ್ನು ಮಾತ್ರವಲ್ಲದೆ, ಪೊಲೀಸ್ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳನ್ನೂ ಪ್ರತ್ಯೇಕಿಸಿದೆ. 

ʻರಾಜ್ಯ ಕನಿಷ್ಠ ಎರಡು ದಶಕಗಳಷ್ಟು ಹಿಂದಕ್ಕೆ ಹೋಗಿದೆʼ ಎಂದು ಅಧಿಕಾರಿಯೊಬ್ಬರು ಹೇಳಿದರು.ಹೇಳಿಕೆಯನ್ನು ಅವರ ಅನೇಕ ಸಹೋದ್ಯೋಗಿಗಳು ಪ್ರತಿಧ್ವನಿಸಿದರು. ಪೊಲೀಸ್ ಸಿಬ್ಬಂದಿ ಮತ್ತು ಮೈಟಿ ಅಥವಾ ಕುಕಿ ಸಮುದಾಯಗಳಿಗೆ ಸೇರಿದ ಪಡೆಗಳು ಸಹ ತಮ್ಮ ಪ್ರದೇಶಗಳಿಗೆ ಸೀಮಿತವಾಗಿರುತ್ತವೆ ಮತ್ತು ಇನ್ನೊಂದು ಕಡೆಗೆ ಪ್ರಯಾಣಿಸಲು ಸಾಧ್ಯವಿಲ್ಲ. ಈ ಚೆಕ್‌ಪಾಯಿಂಟ್‌ಗಳಲ್ಲಿ ಭದ್ರತಾ ಪಡೆಗಳು ಮಾತ್ರವಲ್ಲದೆ, ತಮ್ಮ ಕುಟುಂಬಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಶಸ್ತ್ರಾಸ್ತ್ರ ಕೈಗೆತ್ತಿಕೊಂಡಿದ್ದೇವೆ ಎಂದು ಹೇಳು ಗ್ರಾಮ ಸ್ವಯಂಸೇವಕರ ತಂಡಗಳು ಕೂಡ ಇರುತ್ತವೆ.

ಭದ್ರತಾ ಪಡೆಗಳಲ್ಲಿ ನಂಬಿಕೆಯ ಕೊರತೆ: ʻಭದ್ರತಾ ಪಡೆಗಳಿವೆ. ಆದರೆ, ಅವರ ಉಪಸ್ಥಿತಿ ಸಾಕು ಎಂದು ನಂಬುವುದಿಲ್ಲ. ಅದು ಸಾಕಾಗಿ ದ್ದರೆ, ನಾವು ಈ ಪರಿಸ್ಥಿತಿಯನ್ನು ನೋಡಬೇಕಿರಲಿಲ್ಲ.ನಮ್ಮ ಪ್ರೀತಿಪಾತ್ರರು ಸಾವುನೋವಿನ ಸರ್ಕಾರಿ ಅಂಕಿಅಂಶದ ಭಾಗ ಆಗದಂತೆ ನೋಡಿಕೊಳ್ಳಲು ಈ ಕೆಲಸಕ್ಕೆ ಮುಂದಾಗಿದ್ದೇವೆʼ ಎಂದು ರಾತ್ರಿ ಕಾವಲಿನಲ್ಲಿದ್ದ ಗ್ರಾಮ ಸ್ವಯಂಸೇವಕರೊಬ್ಬರು ಅನಾಮಧೇಯತೆಯ ಷರತ್ತಿನ ಮೇಲೆ ತಿಳಿಸಿದರು. 

ಪದವಿ ಅಧ್ಯಯನವನ್ನು ಕಳೆದ ಮೇ ತಿಂಗಳಿನಲ್ಲಿ ತ್ಯಜಿಸಿದ ಇವರು, ಶಸ್ತ್ರಾಸ್ತ್ರಗಳನ್ನು ಬಳಸುವ ಮೂಲಭೂತ ತರಬೇತಿ ಪಡೆದಿದ್ದಾರೆ. ಅವರ ಬಳಿಯಿದ್ದ ಬಂದೂಕಿನ ಬಗ್ಗೆ ಪ್ರಶ್ನಿಸಿದಾಗ, ʻಇದು ಪರವಾನಗಿ ಪಡೆದ ಆಯುಧ. ಚುನಾವಣೆಗೆ ಮುನ್ನ ಅದನ್ನು ಒಪ್ಪಿಸಲು ನಿರಾಕರಿಸಿದ್ದೇವೆʼ ಎಂದು ಪ್ರತಿಕ್ರಿಯಿಸಿದರು.

ಬೆಟ್ಟಗಳಿಂದ ಕಣಿವೆಗೆ ಮತ್ತು ಕಣಿವೆಯಿಂದ ಬೆಟ್ಟಗಳಿಗೆ ಇತರ ಸಮುದಾಯದ ಜನರಿಗೆ ಪ್ರಯಾಣ ನಿರ್ಬಂಧಿಸಲಾಗಿದೆ. ಕುಕಿ ಅಲ್ಲದವರು ಮತ್ತು ಮೈಟಿಯೇತರರು ಪರಿಶೀಲನೆಯಲ್ಲಿ ತೇರ್ಗಡೆಯಾದಲ್ಲಿ ಪ್ರಯಾಣ ಮಾಡಬಹುದು. ಆದರೆ, ಅದಕ್ಕಾಗಿ ಸರ್ಕಾರಿ ಅಧಿಕಾರಿಗಳು ಮತ್ತು ವರದಿಗಾರರು, ನಾಗಾ ಅಥವಾ ಮುಸ್ಲಿಂ ಸಹಾಯಕರನ್ನು ಅವಲಂಬಿಸಬೇಕಾಗುತ್ತದೆ.

ಚುರಚಂದಪುರ ಪ್ರಯಾಣದ ವೇಳೆ ವರದಿಗಾರನನ್ನು ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ನಿಲ್ಲಿಸಲಾಯಿತು. ಸ್ವಯಂಸೇವಕರು ಯಾರನ್ನು ಭೇಟಿಯಾಗಲು ಹೊರಟಿದ್ದೇನೆ ಎಂದು ಕೇಳಿದರು. ವಿವರ, ಐಡಿ ನಕಲು ಮತ್ತು ಸ್ಥಳೀಯ ವಿಳಾಸವನ್ನುದಾಖಲಿಸಿಕೊಳ್ಳಲಾಯಿತು. ಎರಡು ಪ್ರದೇಶಗಳ ನಡುವೆ ಸಂಚರಿಸುವ ನಾಗಾಗಳು ಮತ್ತು ಮುಸ್ಲಿಮರು, ದೇಣಿಗೆ ನೀಡುವುದನ್ನು ಸ್ವಯಂಸೇವಕರು ಕಡ್ಡಾಯಗೊಳಿಸಿದ್ದಾರೆ.

ಗಂಭೀರ ಪರಿಣಾಮ: ಉದ್ವಿಗ್ನತೆಯ ಮುಂದುವರಿಕೆ ದೊಡ್ಡ ಮತ್ತು ಸಣ್ಣ ರೀತಿಯಲ್ಲಿ ಜನರ ಮೇಲೆ ವಿಪರಿಣಾಮ ಬೀರುತ್ತದೆ. ಇಂಫಾಲ್‌ನಲ್ಲಿರುವ ಸೌಲಭ್ಯಗಳು ಕೈಗೆ ಎಟುಕದ ಕಾರಣ, ಚುರಚಂದಪುರದ ಜನರು ಪ್ರಯಾಣಕ್ಕೆ 12 ಗಂಟೆಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳುವ ಐಜ್ವಾಲ್‌ಗೆ ಪ್ರಯಾಣಿಸುತ್ತಿದ್ದಾರೆ.

ಇಂಫಾಲ್ ವಿಮಾನ ನಿಲ್ದಾಣವು ಕುಕಿಗಳಿಗೆ ಲಭ್ಯವಿಲ್ಲದೆ ಇರುವುದರಿಂದ, ವಿಮಾನವೇರಲು ಇದೇ ಸರ್ಕಸ್‌ ಮಾಡಬೇಕಾಗುತ್ತದೆ. ಚುರಚಂದಪುರದ ಪರಿಹಾರ ಶಿಬಿರಗಳಿಗೆ ಕೂಡ ದಿನಸಿ ಸಾಮಾನುಗಳನ್ನು ಅದೇ ಮಾರ್ಗದ ಮೂಲಕ ಸಾಗಿಸಲಾಗುತ್ತದೆ. 

ವಿದ್ಯಾರ್ಥಿಗಳು ಸಂಘರ್ಷದ ಮತ್ತೊಂದು ಬಲಿಪಶು. ಹೊರಗಿನ ವಿಶ್ವವಿದ್ಯಾಲಯಗಳಿಗೆ ವರ್ಗಾವಣೆ ಪಡೆಯುವ ಬದಲು ಚುರಚಂದಪುರದಲ್ಲೇ ಉಳಿದುಕೊಂಡಿರುವ ಕಾಲೇಜು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಠೇವಣಿ ಮಾಡಬೇಕು. ಅಸ್ಸಾಂ ರೈಫಲ್ಸ್ ರಕ್ಷಣೆಯಲ್ಲಿ ಡಿಸಿ ಕಚೇರಿಯು ಈ ಲಕೋಟೆಗಳನ್ನು ಹೆಲಿಕಾಪ್ಟರ್‌ಗಳಲ್ಲಿ ಕಣಿವೆಯ ಕಾಲೇಜುಗಳಿಗೆ ಕಳುಹಿಸುತ್ತದೆ. ʻವಿಶ್ವವಿದ್ಯಾನಿಲಯದ ಎಲ್ಲಾ ಶಿಕ್ಷಕರು ಮೈಟಿಗಳು. ಆನ್‌ಲೈನ್‌ನಲ್ಲಿ ಸಲ್ಲಿಸಿದ ನಮ್ಮ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿಲ್ಲ.ನೆಪ ಹೇಳುತ್ತಾರೆ. ರಾಜ್ಯದಲ್ಲಿ ಶಿಕ್ಷಣ ಮುಂದುವ ರಿಸಲು ಬೇರೆ ಅವಕಾಶವಿಲ್ಲ. ಆದರೆ, ರಾಜ್ಯದಿಂದ ಹೊರಗೆ ಹೋಗಬೇಕೆಂದರೆ ಕುಟುಂಬವನ್ನು ತ್ಯಜಿಸಬೇಕಾಗುತ್ತದೆ. ಇದು ನನಗೆ ಇಷ್ಟವಿಲ್ಲʼ ಎಂದು ಕಾನೂನು ವಿದ್ಯಾರ್ಥಿಯೊಬ್ಬರು ಹೇಳಿದರು. 

ಮನೆಗಳೇ ಇಲ್ಲ: ಮಣಿಪುರದ ಜನಸಂಖ್ಯೆಯಲ್ಲಿ ಶೇ. 53 ರಷ್ಟಿರುವ ಮೈಟಿಗಳು, ಬೆಟ್ಟಗಳಿಂದ ಸ್ಥಳಾಂತರಗೊಂಡು, ಪರಿಹಾರ ಶಿಬಿರ ಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆಗಳು ನಾಶವಾಗಿವೆ. ಮನೆ, ಜೀವನೋಪಾಯವನ್ನು ನಿರ್ಮಿಸಲು ದಶಕಗಳೇ ಬೇಕುʼ ಎಂದು ಚುರಾ ಚಂದ್‌ಪುರದಲ್ಲಿ ಸಾರಿಗೆ ವಹಿವಾಟು ನಡೆಸುವ ಸಿಮ್ ಖಾಂಗ್ ಹೇಳಿದರು. ಶಸ್ತ್ರಾಗಾರಗಳಿಂದ ಲೂಟಿ ಮಾಡಿದ 4,200 ಕ್ಕೂ ಹೆಚ್ಚು ಆಯುಧಗಳು ಇನ್ನೂ ಪತ್ತೆಯಾಗಿಲ್ಲ. ಯುವಕರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಸಾಮಾನ್ಯ ದೃಶ್ಯ.

ರುವಾಂಡಾ ತರಹದ ಜನಾಂಗೀಯ ಸಂಘರ್ಷ: ಮಣಿಪುರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಜೆಎನ್‌ಯು ಪ್ರೊ.ಬಿಮೋಲ್ ಅಕೋಜಮ್ ಪ್ರಕಾರ, ಮಣಿಪುರದ ಹಿಂಸಾಚಾರ ʻರುವಾಂಡಾದ ಜನಾಂಗೀಯ ಸಂಘರ್ಷʼಕ್ಕೆ ಸಮವಾದದ್ದು. ಕುಕಿಗಳು ಮತ್ತು ಮೈಟಿಗಳನ್ನು ಸುರಕ್ಷತೆಯ ಹೆಸರಿನಲ್ಲಿ ಭೌಗೋಳಿಕವಾಗಿ ಪ್ರತ್ಯೇಕಿಸುವುದು ದೇಶದ ಕಲ್ಪನೆಗೇ ವಿರುದ್ಧವಾದುದು. ʻಭಾರತದಂತಹ ಪ್ರಜಾಪ್ರಭುತ್ವದಲ್ಲಿ ಇಂಥದ್ದು ಸಂಭವಿಸಬಹುದು ಎಂದು ನಾನು ನಂಬುವುದಿಲ್ಲʼ ಎಂದು ಅವರು ತಿಳಿಸಿದರು.

ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ರಾಜ್ಯ ಕಾನೂನು ಸಚಿವ ಬಸಂತ ಕುಮಾರ್ ಸಿಂಗ್, ʻತಮ್ಮ ಪಕ್ಷ ಪ್ರತ್ಯೇಕತೆಯನ್ನು ಅನುಮೋದಿಸುವುದಿಲ್ಲ ಮತ್ತು ಏಕೀಕೃತ ಮಣಿಪುರ ನಮ್ಮ ಉದ್ದೇಶʼ  ಎಂದು ಹೇಳಿದರು. ಏಪ್ರಿಲ್ 19 ರಂದು ಮತದಾನ ನಡೆದ ಪ್ರದೇಶದ ಹಾಲಿ ಸಂಸದ ಬಿಜೆಪಿಯ ರಾಜ್‌ಕುಮಾರ್ ರಂಜನ್ ಸಿಂಗ್, ಕೇಂದ್ರ ಸರ್ಕಾರದ ರಾಜ್ಯ ಸಚಿವರೂ ಆಗಿದ್ದಾರೆ. 

ಅಧಿಕಾರಿಗಳ ಪ್ರಕಾರ, 50,000 ಕ್ಕೂ ಹೆಚ್ಚು ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ರಾಜಕಾರಣಿಗಳು ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿರುವಾಗ, ಸಾವಿರಾರು ಜನರು ಶಾಂತ ಮತ್ತು ನೆಮ್ಮದಿಯ ಬದುಕಿಗಾಗಿ ಕಾಯುತ್ತಿದ್ದಾರೆ.

ಏಪ್ರಿಲ್ 19 ಮತ್ತು 26 ರಂದು ರಾಜ್ಯದ ಎರಡು ಲೋಕಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ.

Tags:    

Similar News