'ಆಪರೇಷನ್ ಸಿಂದೂರ್' ಕುರಿತು ರಾಜನಾಥ್, ಜೈಶಂಕರ್ ಭಾಷಣಕ್ಕೆ ಪ್ರಧಾನಿ ಮೋದಿ ಶ್ಲಾಘನೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೀ ಅವರದ್ದು ಅತ್ಯುತ್ತಮ ಭಾಷಣ. ಇದು 'ಆಪರೇಷನ್ ಸಿಂದೂರ್' ನಲ್ಲಿ ನಮ್ಮ ಭದ್ರತಾ ವ್ಯವಸ್ಥೆಯ ಯಶಸ್ಸು ಮತ್ತು ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಬಗ್ಗೆ ಉತ್ತಮ ಒಳನೋಟವನ್ನು ನೀಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.;
ರಕ್ಷಣಾ ಸಚಿವ ರಾಜನಾಥಸಿಂಗ್, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್
ಪಹಲ್ಗಾಮ್ ಉಗ್ರರ ದಾಳಿ ಮತ್ತು 'ಆಪರೇಷನ್ ಸಿಂದೂರ್' ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾಡಿದ ಭಾಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಂಗಳವಾರ (ಜುಲೈ 29) 'X' (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, "ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೀ ಅವರದ್ದು ಅತ್ಯುತ್ತಮ ಭಾಷಣ. ಇದು 'ಆಪರೇಷನ್ ಸಿಂದೂರ್' ನಲ್ಲಿ ನಮ್ಮ ಭದ್ರತಾ ವ್ಯವಸ್ಥೆಯ ಯಶಸ್ಸು ಮತ್ತು ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಬಗ್ಗೆ ಉತ್ತಮ ಒಳನೋಟವನ್ನು ನೀಡಿದೆ," ಎಂದು ಬರೆದುಕೊಂಡಿದ್ದಾರೆ.
ಜೈಶಂಕರ್ ಅವರ ಭಾಷಣವನ್ನು ಶ್ಲಾಘಿಸಿದ ಅವರು, "ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಭಾಷಣ ಅದ್ಭುತವಾಗಿತ್ತು. 'ಆಪರೇಷನ್ ಸಿಂದೂರ್' ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತದ ದೃಷ್ಟಿಕೋನವನ್ನು ಇಡೀ ಜಗತ್ತು ಸ್ಪಷ್ಟವಾಗಿ ಕೇಳಿದೆ ಎಂಬುದನ್ನು ಅವರು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದ್ದಾರೆ," ಎಂದು ಹೇಳಿದ್ದಾರೆ.
ರಾಜನಾಥ್ ಮತ್ತು ಜೈಶಂಕರ್ ಹೇಳಿದ್ದೇನು?
ಸೋಮವಾರ ಲೋಕಸಭೆಯಲ್ಲಿ 'ಆಪರೇಷನ್ ಸಿಂದೂರ್' ಕುರಿತ ಚರ್ಚೆಯನ್ನು ಆರಂಭಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಭಾರತ ಯಾವುದೇ ಹಂತಕ್ಕೂ ಹೋಗಲು ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. "ಪಾಕಿಸ್ತಾನದಲ್ಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಆರಂಭಿಸಲಾದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯು ನಿಗದಿತ ಉದ್ದೇಶಗಳನ್ನು ಸಾಧಿಸಿದ್ದರಿಂದ ಸದ್ಯಕ್ಕೆ ವಿರಾಮದಲ್ಲಿದೆ. ಆದರೆ, ಇಸ್ಲಾಮಾಬಾದ್‌ನಿಂದ ಯಾವುದೇ ದುಸ್ಸಾಹಸ ನಡೆದರೆ ಅದನ್ನು ಪುನರಾರಂಭಿಸಬಹುದು," ಎಂದು ಅವರು ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, "ಪಹಲ್ಗಾಮ್ ದಾಳಿಯ ನಂತರ ಭಾರತದ ರಾಜತಾಂತ್ರಿಕ ಪ್ರಯತ್ನಗಳು ದೊಡ್ಡ ಯಶಸ್ಸು ಕಂಡಿವೆ. ವಿಶ್ವಸಂಸ್ಥೆಯ 190 ರಾಷ್ಟ್ರಗಳ ಪೈಕಿ ಕೇವಲ 3 ರಾಷ್ಟ್ರಗಳು ಮಾತ್ರ 'ಆಪರೇಷನ್ ಸಿಂದೂರ್' ಅನ್ನು ವಿರೋಧಿಸಿದವು. ದಾಳಿಗೊಳಗಾದ ದೇಶಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂಬುದಕ್ಕೆ ಜಾಗತಿಕವಾಗಿ ಅಗಾಧ ಬೆಂಬಲ ವ್ಯಕ್ತವಾಯಿತು," ಎಂದು ತಿಳಿಸಿದರು.