ಸಾಲ ವಂಚನೆ ಪ್ರಕರಣ: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಇಡಿ ಸಮನ್ಸ್

ಇಡಿ ತನಿಖೆಯು ಕೇವಲ ಯೆಸ್ ಬ್ಯಾಂಕ್ ಪ್ರಕರಣಕ್ಕೆ ಸೀಮಿತವಾಗಿಲ್ಲ. ಕನಿಷ್ಠ ಎರಡು ಸಿಬಿಐ ಎಫ್‌ಐಆರ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಹಂಚಿಕೊಂಡ ವರದಿಗಳನ್ನು ಇದು ಆಧರಿಸಿದೆ.;

Update: 2025-08-01 04:34 GMT

ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಆಗಸ್ಟ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.

ದೆಹಲಿಯ ಇಡಿ ಪ್ರಧಾನ ಕಚೇರಿಯಲ್ಲಿ ಅಂಬಾನಿ ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಅಧಿಕೃತ ಮೂಲಗಳ ಪ್ರಕಾರ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು. ಕಳೆದ ವಾರ ಅನಿಲ್ ಅಂಬಾನಿ ಅವರ ಒಡೆತನದ ಹಲವು ಕಂಪನಿಗಳು ಮತ್ತು ಉದ್ಯೋಗಿಗಳ ಮೇಲೆ ಇಡಿ ದಾಳಿ ನಡೆಸಿದ ಬೆನ್ನಲ್ಲೇ ಈ ಸಮನ್ಸ್ ನೀಡಲಾಗಿದೆ. ಜುಲೈ 24 ರಂದು ಆರಂಭವಾದ ಈ ಶೋಧ ಕಾರ್ಯ ಮೂರು ದಿನಗಳ ಕಾಲ ನಡೆದಿತ್ತು.

ತನಿಖೆಯ ಪ್ರಮುಖ ಉದ್ದೇಶ ಏನು? 

ಇಡಿ ತನಿಖೆಯು 10,000 ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದೆ. ಈ ಶೋಧ ಕಾರ್ಯವು ಮುಂಬೈನ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದಿದ್ದು, 50 ಕಂಪನಿಗಳು ಮತ್ತು 25 ವ್ಯಕ್ತಿಗಳನ್ನು ಗುರಿಯಾಗಿಸಲಾಗಿತ್ತು.

ಮೂಲಗಳ ಪ್ರಕಾರ, 2017-2019ರ ನಡುವೆ ಯೆಸ್ ಬ್ಯಾಂಕ್‌ನಿಂದ ಅಂಬಾನಿ ಗ್ರೂಪ್ ಕಂಪನಿಗಳಿಗೆ ನೀಡಲಾಗಿದ್ದ ಸುಮಾರು 3,000 ಕೋಟಿ ರೂ. ಸಾಲವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪವೇ ಈ ತನಿಖೆಯ ಕೇಂದ್ರಬಿಂದುವಾಗಿದೆ. ಇಡಿ ತನಿಖೆಯ ಪ್ರಕಾರ, ಯೆಸ್ ಬ್ಯಾಂಕ್‌ ಸಾಲ ಮಂಜೂರು ಮಾಡುವ ಮೊದಲು ಅಂಬಾನಿ ಸಮೂಹದಿಂದ "ಲಂಚ" ಪಡೆದಿದ್ದಾರೆ. ಬ್ಯಾಂಕ್‌ನ ನಿಯಮಗಳನ್ನು ಉಲ್ಲಂಘಿಸಿ, ಹಿಂದಿನ ದಿನಾಂಕ ನಮೂದಿಸಿ ಸಾಲ ಅನುಮೋದನೆ ಮಾಡಿರುವುದು ಮತ್ತು ಸರಿಯಾದ ಪರಿಶೀಲನೆ ಇಲ್ಲದೆ ಹೂಡಿಕೆ ಮಾಡಿರುವ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ. ಈ ಸಾಲದ ಹಣವನ್ನು ಹಲವು ಸಮೂಹ ಕಂಪನಿಗಳು ಮತ್ತು "ನಕಲಿ" ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ.

ಇತರೆ ಪ್ರಕರಣಗಳು ಮತ್ತು ಕಂಪನಿಗಳ ಪ್ರತಿಕ್ರಿಯೆ

ಇಡಿ ತನಿಖೆಯು ಕೇವಲ ಯೆಸ್ ಬ್ಯಾಂಕ್ ಪ್ರಕರಣಕ್ಕೆ ಸೀಮಿತವಾಗಿಲ್ಲ. ಕನಿಷ್ಠ ಎರಡು ಸಿಬಿಐ ಎಫ್‌ಐಆರ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಹಂಚಿಕೊಂಡ ವರದಿಗಳನ್ನು ಇದು ಆಧರಿಸಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCOM) ಮತ್ತು ಕೆನರಾ ಬ್ಯಾಂಕ್ ನಡುವಿನ 1,050 ಕೋಟಿಗೂ ರೂಪಾಯಿಗೂ ಅಧಿಕ ಸಾಲ ವಂಚನೆ ಕೂಡ ಇಡಿ ತನಿಖೆಯ ವ್ಯಾಪ್ತಿಯಲ್ಲಿ ಸೇರಿದೆ.

ಇಡಿ ದಾಳಿಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್, ತಮ್ಮ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಷೇರುಪೇಟೆಗೆ ತಿಳಿಸಿವೆ. ಈ ಆರೋಪಗಳು 10 ವರ್ಷ ಹಳೆಯ RCOM ಅಥವಾ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ವಹಿವಾಟುಗಳಿಗೆ ಸಂಬಂಧಿಸಿವೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ. 

Tags:    

Similar News