ಬ್ಯಾಂಕುಗಳಲ್ಲಿ ಬಿದ್ದಿವೆ 67,000 ಕೋಟಿ ರೂ.ಗೂ ಅಧಿಕ ಕ್ಲೈಮ್ ಮಾಡದ ಠೇವಣಿಗಳು
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಬ್ಯಾಂಕುಗಳು ಈ ಕ್ಲೈಮ್ ಮಾಡದ ಠೇವಣಿಗಳನ್ನು ಮೂಲ ಖಾತೆದಾರರು, ಅವರ ನಾಮಿನಿಗಳು ಅಥವಾ ಕಾನೂನು ಉತ್ತರಾಧಿಕಾರಿಗಳಿಗೆ ಹಿಂದಿರುಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ.;
ಭಾರತದ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಜೂನ್ 30ರ ವೇಳೆಗೆ 67,000 ಕೋಟಿ ರೂಪಾಯಿಗಿಂತಲೂ ಅಧಿಕ ಕ್ಲೈಮ್ ಮಾಡದ ಠೇವಣಿಗಳು ಸಂಗ್ರಹಗೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಬೃಹತ್ ಮೊತ್ತವು ಅನೇಕ ಖಾತೆದಾರರಿಗೆ ತಲುಪಬೇಕಾಗಿದ್ದು, ಆರ್ಥಿಕ ಇಲಾಖೆಯು ಈ ಕುರಿತು ಗಮನ ಹರಿಸಿದೆ.
ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ನೀಡಿದ ಅಂಕಿಅಂಶಗಳ ಪ್ರಕಾರ, ದೇಶದ 12 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಟ್ಟು 58,330.26 ಕೋಟಿ ರೂಪಾಯಿಗಳಷ್ಟು ಕ್ಲೈಮ್ ಮಾಡದ ಠೇವಣಿಗಳಿದ್ದರೆ, ಖಾಸಗಿ ವಲಯದ ಬ್ಯಾಂಕುಗಳಲ್ಲಿ ಈ ಮೊತ್ತ 8,673.72 ಕೋಟಿ ರೂಪಾಯಿಗಳಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 19,329.92 ಕೋಟಿ ರೂ.ಗಳೊಂದಿಗೆ ಅತಿ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (6,910.67 ಕೋಟಿ ರೂ.) ಮತ್ತು ಕೆನರಾ ಬ್ಯಾಂಕ್ (6,278.14 ಕೋಟಿ ರೂ.) ಇವೆ. ಖಾಸಗಿ ವಲಯದಲ್ಲಿ ಐಸಿಐಸಿಐ ಬ್ಯಾಂಕ್ 2,063.45 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್ (1,609.56 ಕೋಟಿ ರೂ.) ಮತ್ತು ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ (1,360.16 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಬ್ಯಾಂಕುಗಳು ಈ ಕ್ಲೈಮ್ ಮಾಡದ ಠೇವಣಿಗಳನ್ನು ಮೂಲ ಖಾತೆದಾರರು, ಅವರ ನಾಮಿನಿಗಳು ಅಥವಾ ಕಾನೂನು ಉತ್ತರಾಧಿಕಾರಿಗಳಿಗೆ ಹಿಂದಿರುಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಇದರ ಭಾಗವಾಗಿ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಠೇವಣಿಗಳ ಪಟ್ಟಿಯನ್ನು ಬ್ಯಾಂಕುಗಳು ತಮ್ಮ ವೆಬ್ಸೈಟ್ಗಳಲ್ಲಿ ಪ್ರದರ್ಶಿಸಬೇಕು. ಖಾತೆದಾರರು ಮತ್ತು ಅವರ ಕಾನೂನು ವಾರೀಸುದಾರರು ಇರುವಿಕೆಯನ್ನು ಪತ್ತೆಹಚ್ಚಿ, ಸೂಕ್ತ ಹಕ್ಕುದಾರರಿಗೆ ಹಣವನ್ನು ಹಿಂದಿರುಗಿಸಬೇಕು. ಅಲ್ಲದೆ, ದೂರುಗಳ ತ್ವರಿತ ಇತ್ಯರ್ಥಕ್ಕಾಗಿ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ದಾಖಲೆ ನಿರ್ವಹಣೆ ಹಾಗೂ ಕ್ಲೈಮ್ ಮಾಡದ ಠೇವಣಿ ಖಾತೆಗಳ ಆವರ್ತಕ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದೆ.
ಆರ್ಸಿಬಿಐ ಮಹತ್ವದ ಉಪಕ್ರಮಗಳಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆ (2014) ಪ್ರಮುಖವಾಗಿದೆ. ಈ ಯೋಜನೆಯ ಮೂಲಕ ಆರ್ಬಿಐ ಮುದ್ರಣ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ. ಇದರ ಜೊತೆಗೆ, ಕ್ಲೈಮ್ ಮಾಡದ ಠೇವಣಿಗಳನ್ನು ಹುಡುಕುವ ಪ್ರಕ್ರಿಯೆಯನ್ನು ಸುಲಭಗೊಳಿಸಲು UDGAM (Unclaimed Deposits- Gateway to Access Information) ಎಂಬ ಕೇಂದ್ರೀಕೃತ ವೆಬ್ ಪೋರ್ಟಲ್ ಅನ್ನು ಆರ್ಬಿಐ ಆರಂಭಿಸಿದೆ.
2025ರ ಜುಲೈ 1ರ ವೇಳೆಗೆ 8,59,683 ಬಳಕೆದಾರರು UDGAM ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು, ವಿವಿಧ ಬ್ಯಾಂಕುಗಳಲ್ಲಿರುವ ಕ್ಲೈಮ್ ಮಾಡದ ಠೇವಣಿಗಳನ್ನು ಒಂದೇ ಸ್ಥಳದಲ್ಲಿ ಹುಡುಕಲು ಇದನ್ನು ಬಳಸಿಕೊಂಡಿದ್ದಾರೆ. ಈ ಕ್ರಮಗಳು ಕೋಟ್ಯಂತರ ರೂಪಾಯಿಗಳಷ್ಟು ಹಣವನ್ನು ಸೂಕ್ತ ಹಕ್ಕುದಾರರಿಗೆ ತಲುಪಿಸಲು ಸಹಾಯ ಮಾಡುತ್ತವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ತಮ್ಮ ಹಿಂದಿನ ಬ್ಯಾಂಕ್ ಖಾತೆಗಳ ವಿವರಗಳನ್ನು UDGAM ಪೋರ್ಟಲ್ ಮೂಲಕ ಪರಿಶೀಲಿಸಿ, ಕ್ಲೈಮ್ ಮಾಡದ ಠೇವಣಿಗಳು ಇದ್ದರೆ ಅವುಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಆರಂಭಿಸಬಹುದಾಗಿದೆ.