ವೆನಿಜುವೆಲಾದ ಮರಿಯಾ ಕೊರಿನಾ ಮಚಾಡೊಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ; ಟ್ರಂಪ್ ನಿರೀಕ್ಷೆ ಹುಸಿ
ಮರಿಯಾ ಕೊರಿನಾ ಮಚಾಡೊ ಅವರು ವೆನಿಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿಯಾಗಿದ್ದು, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಸರ್ಕಾರದ ಕಟು ವಿಮರ್ಶಕಿಯಾಗಿದ್ದಾರೆ.
ವೆನಿಜುವೆಲಾದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊ (Maria Corina Machado) ಅವರು 2025ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ, 'ಏಳು ಯುದ್ಧಗಳನ್ನು ಕೊನೆಗಾಣಿಸಿದ್ದೇನೆ' ಎಂದು ಹೇಳಿಕೊಂಡು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.
ನಾರ್ವೆಯ ನೊಬೆಲ್ ಸಮಿತಿಯು ಈ ಕುರಿತು ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪ್ರಕಟಣೆ ಹೊರಡಿಸಿದ್ದು, "ವೆನಿಜುವೆಲಾ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ಕಡೆಗೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಗಾಗಿ ನಡೆಸಿದ ದಣಿವರಿಯದ ಹೋರಾಟವನ್ನು ಪರಿಗಣಿಸಿ, ನಾರ್ವೆಯ ನೊಬೆಲ್ ಸಮಿತಿಯು 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಮರಿಯಾ ಕೊರಿನಾ ಮಚಾಡೊ ಅವರಿಗೆ ನೀಡಲು ನಿರ್ಧರಿಸಿದೆ" ಎಂದು ತಿಳಿಸಿದೆ.
ಮರಿಯಾ ಕೊರಿನಾ ಮಚಾಡೊ ಅವರು ವೆನಿಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿಯಾಗಿದ್ದು, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಸರ್ಕಾರದ ಕಟು ವಿಮರ್ಶಕಿಯಾಗಿದ್ದಾರೆ. ಸರ್ಕಾರದ ದಬ್ಬಾಳಿಕೆ, ಬೆದರಿಕೆ ಮತ್ತು ಕಿರುಕುಳಗಳ ನಡುವೆಯೂ ಅವರು ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. "ಕಳೆದ ವರ್ಷ, ಮರಿಯಾ ಕೊರಿನಾ ಮಚಾಡೊ ಅವರು ಅಜ್ಞಾತ ಸ್ಥಳದಲ್ಲಿ ವಾಸಿಸುವಂತೆ ಒತ್ತಡಕ್ಕೆ ಸಿಲುಕಿದ್ದರು. ಅವರ ಜೀವಕ್ಕೆ ಗಂಭೀರ ಬೆದರಿಕೆಗಳಿದ್ದರೂ, ಅವರು ದೇಶದಲ್ಲಿಯೇ ಉಳಿದುಕೊಂಡರು. ಅವರ ಈ ಆಯ್ಕೆಯು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ" ಎಂದು ನೊಬೆಲ್ ಸಮಿತಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
"ಸರ್ವಾಧಿಕಾರಿಗಳು ಅಧಿಕಾರವನ್ನು ವಶಪಡಿಸಿಕೊಂಡಾಗ, ಸ್ವಾತಂತ್ರ್ಯಕ್ಕಾಗಿ ಎದ್ದುನಿಂತು ಹೋರಾಡುವ ಧೈರ್ಯಶಾಲಿ ರಕ್ಷಕರನ್ನು ಗುರುತಿಸುವುದು ನಿರ್ಣಾಯಕ. ಪ್ರಜಾಪ್ರಭುತ್ವವು ಮೌನವಾಗಿರಲು ನಿರಾಕರಿಸುವ, ಗಂಭೀರ ಅಪಾಯಗಳ ನಡುವೆಯೂ ಮುಂದೆ ಬರಲು ಧೈರ್ಯ ಮಾಡುವ ಮತ್ತು ಸ್ವಾತಂತ್ರ್ಯವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು, ಆದರೆ ಅದನ್ನು ಯಾವಾಗಲೂ ಮಾತು, ಧೈರ್ಯ ಮತ್ತು ದೃಢತೆಯಿಂದ ರಕ್ಷಿಸಬೇಕು ಎಂದು ನಮಗೆ ನೆನಪಿಸುವ ಜನರ ಮೇಲೆ ಅವಲಂಬಿತವಾಗಿದೆ" ಎಂದು ಸಮಿತಿಯು ಶ್ಲಾಘಿಸಿದೆ.