ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್; ರೆಪೊ ದರ ಇಳಿಸಿದ ಆರ್‌ಬಿಐ

ಕಳೆದ ಮೂರು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಭೆ ನಡೆದಿದ್ದು, ರೆಪೊ ದರ ಇಳಿಕೆಯ ಕುರಿತು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ನಿರ್ಧಾರವನ್ನು ಪ್ರಕಟಿಸಿದರು.;

Update: 2025-06-06 05:13 GMT

ಮುಂಬೈ : ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಸೇರಿ ಯಾವುದೇ ರೀತಿಯ ವೈಯಕ್ತಿಕ ಸಾಲ ಮಾಡಿದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೌದು, ರೆಪೊ ದರದಲ್ಲಿ ಆರ್‌ಬಿಐ ಬರೋಬ್ಬರಿ 50 ಬೇಸಿಸ್ ಪಾಯಿಂಟ್‌ಗಳನ್ನು ಇಳಿಕೆ ಮಾಡಿದೆ. ಇದರಿಂದಾಗಿ ವೈಯಕ್ತಿಕ ಸಾಲ ಮಾಡಿದವರ ಮಾಸಿಕ ಇಎಂಐ ಮೊತ್ತದಲ್ಲಿ ಭಾರಿ ಇಳಿಕೆಯಾಗಲಿದ್ದು, ಸಾಲಗಾರರ ಇಎಂಐ ಹೊರೆಯ ಭಾರ ಇನ್ನು ಹಗುರವಾಗಲಿದೆ.

ಕಳೆದ ಮೂರು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಭೆ ನಡೆದಿದ್ದು, ರೆಪೊ ದರ ಇಳಿಕೆಯ ಕುರಿತು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ನಿರ್ಧಾರವನ್ನು ಪ್ರಕಟಿಸಿದರು. ಇದರೊಂದಿಗೆ ರೆಪೊ ದರ ಈಗ ಶೇ.5.5ಕ್ಕೆ ಇಳಿಕೆಯಾಗಿದೆ. ಇದಕ್ಕೂ ಮೊದಲು ರೆಪೊ ದರವು ಶೇ.6.5ರಷ್ಟು ಇತ್ತು. ಎರಡು ಎಂಪಿಸಿ ಸಭೆಗಳಲ್ಲಿ ಆರ್‌ಬಿಐ ತಲಾ 25 ಬೇಸಿಸ್ ಪಾಯಿಂಟ್‌ಗಳನ್ನು ಇಳಿಕೆ ಮಾಡಿದ ಕಾರಣ ರೆಪೊ ದರ ಶೇ.6ಕ್ಕೆ ಇಳಿಕೆಯಾಗಿತ್ತು. ಈಗ 50 ಬೇಸಿಸ್ ಪಾಯಿಂಟ್‌ಗಳನ್ನು ಇಳಿಕೆ ಮಾಡಿರುವ ಕಾರಣ ಶೇ.5.5 ಆಗಿದೆ.

ಭಾರತದಲ್ಲಿ ಹಣದುಬ್ಬರವು ದಿನೇದಿನೆ ನಿಯಂತ್ರಣಕ್ಕೆ ಬರುತ್ತಿದೆ. ಪ್ರಸ್ತುತ ಹಣದುಬ್ಬರ ಪ್ರಮಾಣವು ಶೇ.3.34ರಷ್ಟಿದೆ. ಇದು ಆರ್‌ಬಿಐ ನಿಗದಿಪಡಿಸಿದ ಗುರಿಗಿಂತ ಕಡಿಮೆಯೇ ಇದೆ. ಮತ್ತೊಂದೆಡೆ, ದೇಶದ ಆರ್ಥಿಕತೆಯು ಬಲಿಷ್ಠವಾಗುತ್ತಿದೆ. ಇದೇ ಕಾರಣದಿಂದಾಗಿ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರೆಪೊ ದರದ ಇಳಿಕೆಯಿಂದ ಸಾಲಗಾರರ ಇಎಂಐ ಹೊರೆ ತಗ್ಗಲಿದೆ. ಅವರಿಗೆ ಮಾಸಿಕ ಹಣ ಉಳಿತಾಯವಾಗಲಿದೆ. ಆ ಹಣವನ್ನು ಹೂಡಿಕೆ ಅಥವಾ ಖರ್ಚು ಮಾಡುವುದರಿಂದ, ಅದು ದೇಶದ ಆರ್ಥಿಕತೆಗೇ ಪೂರಕವಾಗಲಿದೆ. ಅದರಲ್ಲೂ, ನಗರ ಪ್ರದೇಶಗಳಲ್ಲಿ ಗ್ರಾಹಕ ಬಳಕೆ (ಕನ್ಸಂಪ್ಶನ್) ಜಾಸ್ತಿಯಾಗುವುದರಿಂದ ಆರ್ಥಿಕತೆಗೆ ಪೂರಕವಾಗುತ್ತದೆ ಎಂಬುದು ಆರ್‌ಬಿಐ ಲೆಕ್ಕಾಚಾರವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Tags:    

Similar News