ಯೋಗಿ ಆದಿತ್ಯನಾಥ್ ಯುಪಿಯ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ: ಹೊಸ ದಾಖಲೆ ಸೃಷ್ಟಿ
ಮಾರ್ಚ್ 19, 2017 ರಿಂದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಕೇಸರಿ ವಸ್ತ್ರಧಾರಿ ಬಿಜೆಪಿಯ ನಾಯಕರಾದ ಯೋಗಿ ಆದಿತ್ಯನಾಥ್ ಅವರು, ಸತತವಾಗಿ ಎಂಟು ವರ್ಷ 132 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ.;
ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ, ಉತ್ತರ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿದ್ದ ಮತ್ತು ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದ ಗೋವಿಂದ ವಲ್ಲಭ ಪಂತ್ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ.
ಮಾರ್ಚ್ 19, 2017 ರಿಂದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಕೇಸರಿ ವಸ್ತ್ರಧಾರಿ ಬಿಜೆಪಿಯ ನಾಯಕರಾದ ಯೋಗಿ ಆದಿತ್ಯನಾಥ್ ಅವರು, ಸತತವಾಗಿ ಎಂಟು ವರ್ಷ 132 ದಿನಗಳ (ನಾಲ್ಕು ತಿಂಗಳು ಮತ್ತು 10 ದಿನಗಳು) ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಮೂಲಕ ಈ ಅಪೂರ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಗೋವಿಂದ ಬಲ್ಲಭ ಪಂತ್ ಅವರು ಎಂಟು ವರ್ಷ 127 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
ಎರಡು ಬಾರಿ ಮುಖ್ಯಮಂತ್ರಿ
ಎಂಟು ವರ್ಷಗಳ ಹಿಂದೆ, 2017ರ ಮಾರ್ಚ್ 19 ರಂದು ಬಿಜೆಪಿ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ, ಯೋಗಿ ಆದಿತ್ಯನಾಥ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ತಮ್ಮ ಮೊದಲ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ, 2022ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತೆ ಜಯಗಳಿಸಿದಾಗ, 2022ರ ಮಾರ್ಚ್ 25 ರಂದು ಯೋಗಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳಿಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವುದರಿಂದ, ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇತರ ಮುಖ್ಯಮಂತ್ರಿಗಳ ಅವಧಿ
ಉತ್ತರ ಪ್ರದೇಶದ ಇತರೆ ಮುಖ್ಯಮಂತ್ರಿಗಳ ಅವಧಿಯನ್ನು ಗಮನಿಸಿದರೆ, ಮಾಯಾವತಿ ಅವರು ಏಳು ವರ್ಷ 16 ದಿನಗಳ ಕಾಲ, ಮುಲಾಯಂ ಸಿಂಗ್ ಯಾದವ್ ಅವರು ಆರು ವರ್ಷ 274 ದಿನಗಳ ಕಾಲ, ಡಾ. ಸಂಪೂರ್ಣಾನಂದ ಅವರು ಐದು ವರ್ಷ 345 ದಿನಗಳ ಕಾಲ, ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಐದು ವರ್ಷ 4 ದಿನಗಳ ಕಾಲ, ನಾರಾಯಣ ದತ್ ತಿವಾರಿ ಅವರು ಮೂರು ವರ್ಷ 314 ದಿನಗಳ ಕಾಲ, ಚಂದ್ರಭಾನು ಗುಪ್ತಾ ಅವರು ಮೂರು ವರ್ಷ 311 ದಿನಗಳ ಕಾಲ, ಮತ್ತು ಕಲ್ಯಾಣ್ ಸಿಂಗ್ ಅವರು ಮೂರು ವರ್ಷ 217 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ 22ನೇ ಮುಖ್ಯಮಂತ್ರಿಯಾಗಿದ್ದಾರೆ. ಗೋರಕ್ಷ ಪೀಠಾಧೀಶ್ವರರಾದ ಅವರು, 1998ರಲ್ಲಿ ಕೇವಲ 26ನೇ ವಯಸ್ಸಿನಲ್ಲಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು.