ʼಆಪರೇಷನ್ ಸಿಂಧೂರ್ʼ ವೇಳೆ ಮೋದಿ-ಟ್ರಂಪ್ ಮಧ್ಯೆ ಸಂಭಾಷಣೆ ನಡೆದಿಲ್ಲ: ಜೈಶಂಕರ್ ಸ್ಪಷ್ಟನೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸುವಲ್ಲಿ ವ್ಯಾಪಾರದ ಬೆದರಿಕೆ ಬಳಸಿಕೊಂಡು ಮಧ್ಯಸ್ಥಿಕೆ ವಹಿಸುವ ಬಗ್ಗೆ ಟ್ರಂಪ್ ನೀಡಿದ್ದ ಹೇಳಿಕೆ ಸಂಬಂಧ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.;
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಮೂರನೇ ದಿನದ ಚರ್ಚೆಯಲ್ಲಿ ಭಾಷಣ ಮಾಡುತ್ತಿರುವುದು
ಜಮ್ಮುಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಕೇಂದ್ರ ಸರ್ಕಾರ ನಡೆಸಿದ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಕುರಿತಂತೆ ಪ್ರತಿಪಕ್ಷಗಳ ಆಗ್ರಹದ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಸಭೆ ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಸದನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಂತರ ಜಾರಿಯಾದ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದಂತೆ ಯಾವುದೇ ವ್ಯಾಪಾರ ಸಂಬಂಧಿತ ಕಾರಣಗಳಿಂದ ಕಾರ್ಯಾಚರಣೆ ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಏಪ್ರಿಲ್ 22 ಮತ್ತು ಜೂನ್ 16 ರ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆಯೂ ನಡೆದಿಲ್ಲ ಎಂದು ಜೈಶಂಕರ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸುವಲ್ಲಿ ವ್ಯಾಪಾರದ ಅಸ್ತ್ರ ಬಳಸಿಕೊಳ್ಳಲಾಯಿತು ಎಂಬ ಟ್ರಂಪ್ ಹೇಳಿಕೆ ನಂತರ ಪ್ರತಿಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದವು. ಈ ಸಂಬಂಧ ಚರ್ಚೆ ನಡೆಸುವಂತೆ ಆಗ್ರಹಿಸಿದ್ದವು.
ಭಾರತವು ಗಡಿಯಾಚೆಗಿನ ಭಯೋತ್ಪಾದನೆ ಸಹಿಸುವುದಿಲ್ಲ. ಆಪರೇಷನ್ ಸಿಂಧೂರ್ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ನೆರೆಯ ರಾಷ್ಟ್ರ ದಾಳಿ ಮಾಡಿದಾಗಲೆಲ್ಲಾ ಈ ರೀತಿಯ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಜೈಶಂಕರ್ ಹೇಳಿದರು.
ಮಂಗಳವಾರ (ಜುಲೈ 29) ಲೋಕಸಭೆಯಲ್ಲಿ ನಡೆದ ಚರ್ಚೆಯ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ್ ಬಗ್ಗೆ ವಿವರವಾದ ವಿವರಣೆ ನೀಡಿದ್ದರು.
ಇಂದು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದು, ಬಳಿಕ ಸದನದ ನಾಯಕ ಜೆ.ಪಿ. ನಡ್ಡಾ ಅವರು ಮಾತನಾಡಲಿದ್ದಾರೆ. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸತ್ತಿನ ಮಳೆಗಾಲದ ಅಧಿವೇಶನವು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಲೋಕಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದೆ.