ಡಾಲಿ ಧನಂಜಯ್ ಗೆ ಕಾಂಗ್ರೆಸ್ ನಿಂದ ಟಿಕೆಟ್?: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..

ಕಾಂಗ್ರೆಸ್ ನಿಂದ ಚಿತ್ರ ನಟ ಡಾಲಿ ಧನಂಜಯ್ ಅವರಿಗೆ ಟಿಕೆಟ್ ನೀಡುತ್ತಾರೆ ಎನ್ನುವ ಮಾತು ಕೇಳಿಬಂದಿದೆ.;

Update: 2024-02-18 08:49 GMT

ಮಂಡ್ಯ: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಭರ್ಜರಿ ತಯಾರಿ ನಡೆಯುತ್ತಿದ್ದು, ಕಾಂಗ್ರೆಸ್ ನಿಂದ ಚಿತ್ರ ನಟ ಡಾಲಿ ಧನಂಜಯ ಅವರಿಗೆ ಟಿಕೆಟ್ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದೆ.‌ ಇದೀಗ ಸಿದ್ದರಾಮಯ್ಯ ಈ ವಿಚಾರವಾಗಿ ಮಂಡ್ಯದ ಜಿಲ್ಲೆಯಲ್ಲಿ ಮಳುವಳ್ಳಿಯಲ್ಲಿ ಮಾತನಾಡಿದ್ದಾರೆ.

ಇಂದು (ಭಾನುವಾರ)  ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು ಈ ಬಾರಿ ಕನಿಷ್ಠ ಇಪ್ಪತ್ತು ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು 28 ಕ್ಕೆ 28 ನ್ನೂ ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಆದರೆ ಅವರಿಗೆ ಜನ ಈ ಬಾರಿ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ತಿಳಿದಿದೆ. ಅದಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದರು.

ಸ್ಥಳೀಯವಾಗಿ ಶಾಸಕರು, ಜಿಲ್ಲಾ ಬ್ಲಾಕ್ ಸಮಿತಿ ಅಧ್ಯಕ್ಷರು, ಮುಖಂಡರು ಯಾರನ್ನು ಸೂಚಿಸುತ್ತಾರೋ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದರು.

ಡಾಲಿ ಧನಂಜಯ್ ಗೆ ಕಾಂಗ್ರೆಸ್ ನಿಂದ ಟಿಕೆಟ್?

ಈ ವೇಳೆ ಚಿತ್ರ ನಟ ಡಾಲಿ ಧನಂಜಯ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼʼನಮ್ಮ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಇದರ ಬಗ್ಗೆ ನನಗೆ ಗೊತ್ತೂ ಇಲ್ಲʼʼ ಎಂದು ಹೇಳಿದರು.

ಕಳೆದ ಬಾರಿ ಮೈತ್ರಿಯಿಂದ ಬಿಜೆಪಿಯನ್ನು ಎದುರಿಸಿದ್ದು ಈ ಬಾರಿ ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸುತ್ತಿದ್ದೇವೆ. ಈಗ ನಮ್ಮ ಎದುರಿಗೆ ಒಂದೇ ವಿರೋಧ ಪಕ್ಷವಿದೆ. ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಿದೆ. ಜೆಡಿಎಸ್ ಒಂದು ಪ್ರತ್ಯೇಕ ಪಕ್ಷ ವಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿಯವರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ನಾಯಕರು ಬಜೆಟ್ ಬಗ್ಗೆ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼಅವರಿಗೆ ಬಜೆಟ್ ಅರ್ಥವಾಗಿಲ್ಲ. ಬಡವರ ವಿರೋಧಿ ಬಿಜೆಪಿಗೆ ಬಜೆಟ್ ಅರ್ಥವಾಗೋಲ್ಲ. ಬಡವರ ಪರವಾಗಿ ನಾವು ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳು ಮಾತ್ರವಲ್ಲದೆ ಮೂಲಸೌಕರ್ಯ ಅಭಿವೃದ್ಧಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೂ ಒತ್ತು ನೀಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಕೇಂದ್ರದಿಂದ 1.87 ಲಕ್ಷ ಕೋಟಿ ರೂ.ಗಳು ನಮಗೆ ನಷ್ಟವಾಗಿದೆ. ಆ ಅನುದಾನ ಬಂದರೆ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯಕ್ಕೆ ಕೊಡಬಹುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Similar News