ಅಡ್ಡ ಮತದಾನದ ಆತಂಕದ ನಡುವೆ ದೇಶದ 15 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ
ಶಾಸಕರಿಗೆ ವಿಪ್ ಜಾರಿ ಮಾಡಿರುವ ಪಕ್ಷಗಳು;
ಕರ್ನಾಟಕ, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದ 15 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. 56 ರಾಜ್ಯಸಭಾ ಸ್ಥಾನಗಳ ಪೈಕಿ 41 ಸ್ಥಾನಗಳಿಗೆ ಈಗಾಗಲೇ ನಾಯಕರು ಅವಿರೋಧವಾಗಿ ಆಯ್ಕೆಯಾಗಿದೆ.
ಇದರಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದ್ದಾರೆ.
ಕರ್ನಾಟಕ: ಕಾಂಗ್ರೆಸ್ ಶಾಸಕರು ಹೋಟೆಲ್‌ಗೆ
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಸೋಮವಾರ ಹೋಟೆಲ್‌ಗೆ ಸ್ಥಳಾಂತರಿಸಿದೆ.
ಈ ಬಾರಿಯ ರಾಜ್ಯಸಭಾ ಚುನಾವಣಾ ಕಣದಲ್ಲಿ ಕರ್ನಾಟಕದಿಂದ ಅಜಯ್ ಮಾಕನ್, ಸೈಯದ್ ನಸೀರ್ ಹುಸೇನ್ ಮತ್ತು ಜಿಸಿ ಚಂದ್ರಶೇಖರ್ (ಕಾಂಗ್ರೆಸ್), ನಾರಾಯಣಸಾ ಬಾಂಡಗೆ (ಬಿಜೆಪಿ) ಮತ್ತು ಕುಪೇಂದ್ರ ರೆಡ್ಡಿ (ಜೆಡಿ (ಎಸ್) - ಕಣದಲ್ಲಿದ್ದಾರೆ.
ಅಡ್ಡ ಮತದಾನದ ಆತಂಕ ಇರುವುದರಿಂದ ಮಂಗಳವಾರ ಎಲ್ಲಾ ಪಕ್ಷಗಳು ಆಯಾ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಕಾಂಗ್ರೆಸ್ 134, ಬಿಜೆಪಿ 66, ಜೆಡಿಎಸ್ 19 ಹಾಗೂ ಪಕ್ಷೇತರ ಶಾಸಕರು 4 ಜನ ಇದ್ದಾರೆ. ಉಳಿದ ನಾಲ್ವರ ಪೈಕಿ ಸರ್ವೋದಯ ಕರ್ನಾಟಕ ಪಕ್ಷದಿಂದ ಇಬ್ಬರು ಪಕ್ಷೇತರರು ಹಾಗೂ ದರ್ಶನ್ ಪುಟ್ಟಣ್ಣಯ್ಯ ಇದ್ದಾರೆ.
ಇವರು ಸಹ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಕುತೂಹಲಕಾರಿ ಸಂಗತಿಯೆಂದರೆ, ನಾಲ್ಕನೆಯವರು - ಜಿ ಜನಾರ್ದನ ರೆಡ್ಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.
ಬಿಜೆಪಿ-ಜೆಡಿ (ಎಸ್) ಸೇರಿ ತನ್ನ ಎರಡನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ ನಂತರ ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣಾ ಕಣ ಕಾವು ಪಡೆದುಕೊಂಡಿದೆ.
ಬಿಜೆಪಿ - ಜೆಡಿಎಸ್ ಮೈತ್ರಿಕೂಟವು ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲುವ ಸಾಮರ್ಥ್ಯ ಹೊಂದಿದೆ.
ಯುಪಿಯಲ್ಲಿ ಒಂದು ಸ್ಥಾನಕ್ಕೆ ಜಿದ್ದಾಜಿದ್ದಿನ ಹೋರಾಟ
10 ರಾಜ್ಯಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಎಂಟು ಅಭ್ಯರ್ಥಿಗಳನ್ನು ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷ (ಎಸ್‌ಪಿ) ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರೊಂದಿಗೆ ಒಂದು ಸ್ಥಾನಕ್ಕಾಗಿ ಕಠಿಣ ಹೋರಾಟ ನಡೆಯುತ್ತಿದೆ.
ಬಿಜೆಪಿ ಮತ್ತು ಎಸ್‌ಪಿ ಕ್ರಮವಾಗಿ ಏಳು ಮತ್ತು ಮೂರು ಸದಸ್ಯರನ್ನು ರಾಜ್ಯಸಭೆಗೆ ಅವಿರೋಧವಾಗಿ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಆದರೆ, ಬಿಜೆಪಿ ತನ್ನ ಎಂಟನೇ ಅಭ್ಯರ್ಥಿಯಾಗಿ ಸಂಜಯ್ ಸೇಠ್ ಅವರನ್ನು ಕಣಕ್ಕಿಳಿಸುವುದರೊಂದಿಗೆ, ಒಂದು ಸ್ಥಾನದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿಗೆ 37 ಮೊದಲ ಪ್ರಾಶಸ್ತ್ಯದ ಮತಗಳು ಬೇಕಾಗುತ್ತವೆ.
ಪ್ರಸ್ತುತ ಉತ್ತರ ಪ್ರದೇಶ ವಿಧಾನಸಭೆಯಲ್ಲಿ 399 ಶಾಸಕರಿದ್ದಾರೆ.
ಬಿಜೆಪಿಯು ಸಮಾಜವಾದಿ ಪಕ್ಷ ಶಾಸಕರ ಹೆಚ್ಚುವರಿ ಮತಗಳ ಮೇಲೆ ಅವಲಂಬಿತವಾಗಿದ್ದು, ಕನಿಷ್ಠ 10 ಎಸ್‌ಪಿ ಶಾಸಕರು ತಮ್ಮ ಪರವಾಗಿ ಅಡ್ಡ ಮತ ಹಾಕಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹೋರಾಟ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಹೊಂದಿದೆ. ಇಲ್ಲಿ 68 ಶಾಸಕರಲ್ಲಿ 40 ಕಾಂಗ್ರೆಸ್ ಮೂವರು ಪಕ್ಷೇತರ ಶಾಸಕರು ಇದ್ದಾರೆ.
ಬಿಜೆಪಿಯು ಹರ್ಷ ಮಹಾಜನ್ ಅವರನ್ನು ಕಣಕ್ಕಿಳಿಸುವ ಮೂಲಕ ರಾಜ್ಯಸಭಾ ಚುನಾವಣೆ ಎದುರಿಸಲು ಮುಂದಾಗಿದೆ. ಕಾಂಗ್ರೆಸ್ ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಈ ಕ್ರಮವನ್ನು ಬಿಜೆಪಿ ಖಂಡಿಸಿದೆ.
56 ರಾಜ್ಯಸಭಾ ಸ್ಥಾನಗಳಲ್ಲಿ ಈಗಾಗಲೇ 28 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಚುನಾವಣೆಯ ನಂತರ 29 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯು ಏಪ್ರಿಲ್ 2 ಕ್ಕೆ ಮುಗಿಯಲಿದ್ದು, ಎರಡು ರಾಜ್ಯಗಳ ಆರು ಸಂಸದರ ಅಧಿಕಾರಾವಧಿಯು ಏಪ್ರಿಲ್ 3 ರಂದು ಮುಕ್ತಾಯಗೊಳ್ಳಲಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ.