Exclusive Interview ಉಗ್ರ ಹೋರಾಟಕ್ಕೆ ರೈತರ ಸಿದ್ಧತೆ: ರೈತ ಮುಖಂಡ ಕುರುಬೂರು ಶಾಂತಕುಮಾರ್
ದೆಹಲಿ ಚಲೋ, ರೈತ ಮುಂದಿನ ನಡೆ ಏನಾಗಿರಲಿದೆ ಎನ್ನುವ ವಿವರ ಇಲ್ಲಿದೆ;
ರೈತರ "ದೆಹಲಿ ಚಲೋ" ಇದೀಗ ಉಗ್ರಸ್ವರೂಪ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ರೈತರ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಮುಖಂಡ ಕುರುಬುರು ಶಾಂತಕುಮಾರ್ ಅವರೊಂದಿಗೆ ದ ಫೆಡರಲ್ ಕರ್ನಾಟಕ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.
ದೆಹಲಿಯಲ್ಲಿ ಈಗ ರೈತರ ಚಳವಳಿ ಹೇಗಿದೆ ?
ದೆಹಲಿಯಲ್ಲಿ ರೈತರ ಚಳವಳಿ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ರೈತರ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ. ನಾವು ಕಳೆದ ಒಂದೂವರೆ ವರ್ಷದಿಂದ ಮನವಿ ಕೊಡುತ್ತಲ್ಲೇ ಇದ್ದೇವೆ. ಆದರೆ, ಅದಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ದೆಹಲಿ ಚಲೋ ಯಾಕೆ, ಇಷ್ಟು ದೊಡ್ಡ ಅಭಿಯಾನದ ಉದ್ದೇಶವೇನು ?
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕು ಎನ್ನುವುದು ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದೇವೆ.
ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ಇಚ್ಛಾಶಕ್ತಿ ತೋರಿಸಲಿಲ್ಲ. ಹೀಗಾಗಿ, ರೈತ ಸಂಘಟನೆಗಳಿಗೆ ದೆಹಲಿ ಚಲೋ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.
ಕೇಂದ್ರ ಸರ್ಕಾರ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದೆಯಲ್ಲವೇ, ಸ್ಪಂದಿಸುತ್ತಿಲ್ಲ ಎಂದರೆ ಏನು ಅರ್ಥ ?
ಕೇಂದ್ರ ಸರ್ಕಾರವು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಸೇರಿದಂತೆ ಮೂವರು ಸಚಿವರನ್ನು ಒಳಗೊಂಡ ಸಮಿತಿ ರಚಿಸಿ, ರೈತರೊಂದಿಗೆ ನಾಲ್ಕು ಸುತ್ತಿನ ಸಭೆ ನಡೆಸಿದ ನಿಜ. ಆದರೆ, ಕಳೆದ ಒಂದೂವರೆ ವರ್ಷದಿಂದಲೂ ನಾವು ಮನವಿ ಮಾಡುತ್ತಿದ್ದೇವೆ. ಯಾವಾಗ ನಾವು ದೆಹಲಿ ಚಲೋಗೆ ಕರೆ ನೀಡಿದೆವೋ ಆಗ ಕೇಂದ್ರ ಸರ್ಕಾರ ಮಾತುಕತೆಗೆ ಬರುತ್ತದೆ. ಇದು ನಮ್ಮ ಹೋರಾಟವನ್ನು ದಿಕ್ಕುತಪ್ಪಿಸುವ ಪ್ರಯತ್ನ ಅಷ್ಟೇ. ನಿಜಕ್ಕೂ ರೈತರ ಸಮಸ್ಯೆ ಪರಿಹರಿಸುವ ಆಸಕ್ತಿ ಕೇಂದ್ರ ಸರ್ಕಾರಕ್ಕೆ ಇದ್ದರೆ ಒಂದೂವರೆ ವರ್ಷದಿಂದ ಏಕೆ ಮಾತುಕತೆ ನಡೆಸಲಿಲ್ಲ. ವರದಿಗಳನ್ನು ಏಕೆ ತರಿಸಿಕೊಳ್ಳಲಿಲ್ಲ.
ಕೇಂದ್ರ ಸರ್ಕಾರ ರೈತರ ಹೋರಾಟ ಹತ್ತಿಕ್ಕುತ್ತಿದೆ, ದಿಕ್ಕು ತಪ್ಪಿಸುತ್ತಿದೆ ಎಂದು ರೈತ ಸಂಘಟನೆಗಳು ಆರೋಪಿಸುತ್ತಿವೆ ?
ಖಂಡಿತವಾಗಿಯೂ ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುತ್ತಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ರೈತರು ಮಾಧ್ಯಮಗಳೊಂದಿಗೆ ಮಾತನಾಡದಂತೆ ಕೇಂದ್ರ ಸರ್ಕಾರ ತಡೆಯುತ್ತಿದೆ. ರೈತರು ನಡೆಸುತ್ತಿರುವ ಹೋರಾಟವನ್ನು ಪ್ರಸಾರ ಮಾಡುತ್ತಿರುವ ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ ಹೇರಲಾಗಿದೆ. ರೈತರನ್ನು ದೆಹಲಿಗೆ ಹೋಗಲು ಬಿಡುತ್ತಿಲ್ಲ. ಘನತೆಯುತ ಕೇಂದ್ರ ಸರ್ಕಾರ ಹಾಗೂ ಯಾವುದೇ ಪಕ್ಷಕ್ಕೆ ಇದು ಶೋಭೆ ತರುವುದಿಲ್ಲ. ರೈತರೊಂದಿಗೆ ಕೆಲವು ದುಷ್ಕರ್ಮಿಗಳೂ ಸಹ ಸೇರಿ ರೈತ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ.
ಹರಿಯಾಣದ ಪೊಲೀಸರು ರೈತರ ಹೆಸರಿನಲ್ಲಿ ನಡೆವ ಆಕ್ರಮಣ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ ?
ರೈತರು ಈ ದೇಶದ 140 ಕೋಟಿ ಜನರಿಗೆ ಅನ್ನ ನೀಡುವ ಬಹುದೊಡ್ಡ ಸಮುದಾಯ. ಯಾವ ರೈತನೂ ಕಲ್ಲು ಎಸೆಯುವುದಿಲ್ಲ. ಯಾರೋ ರೈತ ಸಂಘಟನೆಯ ಹೆಸರಿನಲ್ಲಿ ಮಾಡಿದ ದುಷ್ಕೃತ್ಯವದು. ಕೇಂದ್ರ ಸರ್ಕಾರದ ನಡೆ ನೋಡಿದರೆ ಹಲವು ಅನುಮಾನ ಬರುತ್ತದೆ. ನಾವು ಶಾಂತಿಯುವಾಗಿಯೇ ಪ್ರತಿಭಟನೆ ಮಾಡುತ್ತಿದ್ದೇವೆ. ಕಲ್ಲು ತೂರಿದವರು ರೈತರಲ್ಲ.
ರೈತರ ಹೋರಾಟವನ್ನು ಹೇಗೆ ತಡೆಯಲಾಗುತ್ತಿದೆ ?
ರೈತರನ್ನು ಮಹಾಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ರಸ್ತೆಗಳಿಗೆ ಮೊಳೆಗಳನ್ನು ಹೊಡೆಯಲಾಗಿದೆ. ಅರೆಸೇನೆ, ಸೇನೆ ಹಾಗೂ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ರೈತರೇನು ಉಗ್ರರರೇ ಅಥವಾ ಹೊರ ದೇಶದವರೇ ನಮ್ಮ ಮೇಲೆ ಯಾಕಿಷ್ಟು ಬಲಪ್ರಯೋಗ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ರೈತರು ಸಹಿಸುವುದಿಲ್ಲ.
ದೆಹಲಿ ಚಲೋಗೆ ಕರ್ನಾಟಕದ ಬೆಂಬಲ ಹೇಗಿದೆ ?
ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಜನ ರೈತರು ದೆಹಲಿ ಚಲೋಗೆ ಬೆಂಬಲ ನೀಡಲು ದೆಹಲಿಗೆ ರೈಲಿನಲ್ಲಿ ತೆರಳುತ್ತಿದ್ದಾರೆ. ಆದರೆ, ಅವರನ್ನು ರೈಲು ಮಾರ್ಗಗಳಲ್ಲೇ ತಡೆಯಲಾಗುತ್ತಿದೆ. ಕರ್ನಾಟಕದಿಂದ ಹಾಗೂ ಕರ್ನಾಟಕದ ರೈತರಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಆದರೆ, ಇನ್ನಷ್ಟು ಜಾಗೃತಿ ಮೂಡಬೇಕು. ರೈತ ಸಂಘಟನೆಗಳು ಈ ರೀತಿಯ ಹೋರಾಟ ನಡೆಯುವ ಸಂದರ್ಭದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ ?
ಈಗ ಕೇಂದ್ರ ಸರ್ಕಾರ ಸಮಿತಿ ರಚಿಸುವುದಾಗಿ ಹೇಳಿದೆ. ಈಗಾಗಲೇ ಒಂದು ಸಮಿತಿ ರಚಿಸಲಾಗಿತ್ತು. ಆದರೆ, ಆ ಸಮಿತಿಯ ರಚನೆಯೇ ಸರಿ ಇಲ್ಲ ಎಂದು ನಾವು ಹೇಳಿದ್ದೆವು. ಈಗ ಸಮಿತಿ ರಚಿಸಿ, ಅದನ್ನು ಅನುಷ್ಠಾನ ಮಾಡುವುದು ಯಾವಾಗ. ಈಗಾಗಲೇ ಕೇಂದ್ರ ಸರ್ಕಾರದ ಬಳಿ ಎಲ್ಲ ದಾಖಲೆಗಳು, ಮಾಹಿತಿಯೂ ಇದೆ. ಹೊಸ ಸಮಿತಿ ರಚಿಸಿ ಅದರ ವರದಿಗಾಗಿ ಕಾಯುವುದರಲ್ಲಿ ಅರ್ಥವಿಲ್ಲ.
ರೈತರ ಮುಂದಿನ ನಡೆ ಏನಾಗಿರಲಿದೆ ?
ದೇಶದ ರೈತ ಸಮುದಾಯ ಬಹುದೊಡ್ಡದಿದೆ. ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎನ್ನುವುದು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆ ಆಗಿದೆ. ಆದರೆ, ಕೇಂದ್ರ ಸರ್ಕಾರ ಇಲ್ಲಿಯವರೆಗೂ ರೈತ ಬೇಡಿಕೆ ಈಡೇರಿಸಿಲ್ಲ. ಇನ್ನೂ ಸಮಯುಬೇಕು ಎನ್ನುತ್ತಿದ್ದಾರೆ. ಹೀಗಾಗಿ, ಉಗ್ರ ಹೋರಾಟ ಮುಡುವುದು ಅನಿವಾರ್ಯವಾಗಿದೆ. ನಾವು ಇನ್ನೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ.