Mahakumbh 2025: ಬಸಂತ್ ಪಂಚಮಿ; ಇಂದು ಕುಂಭಮೇಳದ ಮೂರನೇ ಅಮೃತಸ್ನಾನ
Mahakumbh 2025 : ಮುಂಜಾನೆ 4 ಗಂಟೆಯ ವೇಳೆಗೆ, 16.58 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಪವಿತ್ರ ಸ್ನಾನ ಮಾಡಿದವರ ಒಟ್ಟಾರೆ ಸಂಖ್ಯೆ 34.97 ಕೋಟಿಗೆ ತಲುಪಿದೆ;
ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ(Mahakumbh 2025) ಇಂದು ಕೊನೆಯ ಅಮೃತಸ್ನಾನ ನೆರವೇರಿದೆ. ಬಸಂತ್ ಪಂಚಮಿಯ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಎಲ್ಲ ಅಖಾಡಗಳ ಸಾಧುಗಳು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.
ಮುಂಜಾನೆ 4 ಗಂಟೆಯ ವೇಳೆಗೆ, 16.58 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಪವಿತ್ರ ಸ್ನಾನ ಮಾಡಿದವರ ಒಟ್ಟಾರೆ ಸಂಖ್ಯೆ 34.97 ಕೋಟಿಗೆ ತಲುಪಿದೆ ಎಂದು ಮಾಹಿತಿ ನಿರ್ದೇಶಕ ಶಿಶಿರ್ ತಿಳಿಸಿದ್ದಾರೆ.
ಹೆಚ್ಚಿನ ಭದ್ರತೆ
ಅಧಿಕಾರಿಗಳ ಪ್ರಕಾರ ಬಸಂತ್ ಪಂಚಮಿ ದಿನ ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿ 60 ಜನರು ಗಾಯಗೊಂಡ ದುರ್ಘಟನೆ ನಂತರ ನಡೆಯುತಿರುವ ಮೊದಲ ಪವಿತ್ರಸ್ನಾನ ಇದಾಗಿದೆ. ಹೀಗಾಗಿ ಜನದಟ್ಟಣೆ ನಿರ್ವಹಿಸಲು ಸಾಕಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ.
ಸಂಪ್ರದಾಯದ ಪ್ರಕಾರ, ಸನ್ಯಾಸಿ, ಬೈರಾಗಿ ಮತ್ತು ಉದಸೀನ್ ಎಂಬ ಮೂರು ಪಂಥಗಳಿಗೆ ಸೇರಿದ ಅಖಾಡಗಳು ಒಂದೊಂದ ಹಿಂದೆ ತಮ್ಮ ಪವಿತ್ರ ಸ್ನಾನವನ್ನು ಕೈಗೊಳ್ಳುತ್ತಿವೆ. ಮೊದಲ ಗುಂಪು ಈಗಾಗಲೇ ಸಂಗಮದಲ್ಲಿ ಮಿಂದಿದೆ. ಪ್ರತಿ ಅಖಾಡಕ್ಕೆ ಸಂಗಮದಲ್ಲಿ ಸ್ನಾನ ಮಾಡಲು 40 ನಿಮಿಷಗಳ ಸಮಯ ನಿಗದಿಪಡಿಸಲಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಲಕ್ನೋ ನಿವಾಸದಲ್ಲಿರುವ ವಾರ್ ರೂಂನಿಂದ ಬೆಳಗಿನ ಜಾವ 3.30 ರಿಂದ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದ್ದಾರೆ. 77 ಮಹಿಳಾ ಅಧಿಕಾರಿಗಳು ಸೇರಿದಂತೆ ಕನಿಷ್ಠ 270 ಐಪಿಎಸ್ ಅಧಿಕಾರಿಗಳು ಪ್ರಯಾಗ್‌ರಾಜ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಪವಿತ್ರ ಸ್ನಾನದ ದಿನದಂದು ವಿವಿಐಪಿಗಳ ಭೇಟಿಯನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ.
ಮೂರು ಅಮೃತಸ್ನಾನ
ಸೂರ್ಯ, ಚಂದ್ರ ಮತ್ತು ಗುರುಗ್ರಹದ ನಿರ್ದಿಷ್ಟ ಗ್ರಹಗಳ ಆಧಾರದ ಮೇಲೆ ಅಮೃತ ಸ್ನಾನದ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ. ಈ ಬಾರಿಯ ಮಹಾಕುಂಭಮೇಳ 3 ಅಮೃತ ಸ್ನಾನಕ್ಕೆ ಸಾಕ್ಷಿಯಾಗಿದೆ. ಜನವರಿ 14ರ ಮಕರ ಸಂಕ್ರಾಂತಿ, ಜನವರಿ 29ರ ಮೌನಿ ಅಮಾವಾಸ್ಯೆ ಹಾಗೂ ಫೆಬ್ರವರಿ 3ರ ಬಸಂತ್ ಪಂಚಮಿಯಂದು ನಡೆದಿದೆ .
ತನಿಖೆ ಚುರುಕು
ಜನವರಿ 29. ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಜನರು ಬಲಿಯಾಗಿದ್ದರು. ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ದುರಂತದ ದಿನದ ಘಟನೆಗಳನ್ನು ವರದಿ ಮಾಡುತ್ತಿದ್ದಾರೆ. ಸದ್ಯ 16 ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ದತ್ತಾಂಶಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆ ಸಂಖ್ಯೆಗಳಲ್ಲಿ ಹಲವು ಪ್ರಸ್ತುತ ಸ್ವಿಚ್ ಆಫ್ ಆಗಿವೆ ಎನ್ನಲಾಗಿದೆ. ಕಾಲ್ತುಳಿತ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಕಮಿಟಿ ರಚನೆ ಮಾಡಲಾಗಿದೆ.