‘ಶಾಂತಿ’ ಮಸೂದೆಯ ಅಸಂಬದ್ಧ ಅಂತರಂಗ: ಸರ್ಕಾರಕ್ಕಿಲ್ಲ ಅಪರಿಮಿತ ಅಪಾಯದ ಹೊಣೆಗಾರಿಕೆ

ಖಾಸಗಿ ಪರಮಾಣು ರಿಯಾಕ್ಟರಿನ ನಿರ್ವಾಹಕನು ಮಾಡಿದ ತಪ್ಪಿನಿಂದ ಭಾರತೀಯರು ಸಾವನ್ನಪ್ಪಿದ ಸಂದರ್ಭದಲ್ಲಿ ಆ ತಪ್ಪಿಗೆ ಭಾರತದ ತೆರಿಗೆದಾರರೇ ಹಣ ಪಾವತಿ ಮಾಡುವಂತೆ ಕೇಂದ್ರ ಸರ್ಕಾರವು ತನಗೆ ತಾನೇ ಅಧಿಕಾರವನ್ನು ಪಡೆದುಕೊಳ್ಳುತ್ತಿದೆ.

Update: 2025-12-18 01:56 GMT
ಭಾರತದ ರೂಪಾಂತರಕ್ಕಾಗಿರುವ ಪರಮಾಣು ಶಕ್ತಿಯ ಸುಸ್ಥಿರ ಸದ್ಬಳಕೆ ಮತ್ತು ಸಂವರ್ಧನೆ (ಶಾಂತಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು ಇದರಿಂದ ಭಾರತದಲ್ಲಿ ಖಾಸಗಿ ನಿರ್ವಾಹಕರು ಪರಮಾಣು ಸೌಲಭ್ಯಗಳನ್ನು ಒದಗಿಸಲು ಅನುವುಮಾಡಿಕೊಡುತ್ತದೆ.ಆದರೆ ಪರಮಾಣು ದುರಂತವೇನಾದರು ಸಂಭವಿಸಿದರೆ ಅದರ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ.
Click the Play button to listen to article

ನಿರೀಕ್ಷೆಯಂತೆ ಸೋಮವಾರ ಲೋಕಸಭೆಯಲ್ಲಿ ‘ಶಾಂತಿ’ (SHANTI) ಮಸೂದೆ-2025 ಮಂಡನೆಯಾಗಿದೆ. ಇದು ಭಾರತದಲ್ಲಿ ಖಾಸಗಿ ಸಂಸ್ಥೆಗಳಿಗೆ ಪರಮಾಣು ಘಟಕಗಳನ್ನು ನಡೆಸಲು ಅನುಮತಿ ನೀಡುವುದು ಮಾತ್ರವಲ್ಲದೆ ವಿಪತ್ತು ಸಂಭವಿಸಿದರೆ ವಹಿಸಬೇಕಾದ ಪರಿಹಾರದ ಹೊಣೆಗಾರಿಕೆಯನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ನಿಗದಿಪಡಿಸಲಾಗಿದೆ.

ಮೊಟ್ಟ ಮೊದಲನೆಯದಾಗಿ SHANTI (ಭಾರತದ ರೂಪಾಂತರಕ್ಕಾಗಿರುವ ಪರಮಾಣು ಶಕ್ತಿಯ ಸುಸ್ಥಿರ ಸದ್ಬಳಕೆ ಮತ್ತು ಸಂವರ್ಧನೆ) ಮಸೂದೆಯ 13ನೇ ಕಲಮ್ಮಿನ ಪ್ರಕಾರ, ಒಂದು ವೇಳೆ ಪರಮಾಣು ಅಪಘಾತ ಸಂಭವಿಸಿದರೆ ಗರಿಷ್ಠ ಹೊಣೆಗಾರಿಕೆಯನ್ನು 300 ಮಿಲಿಯನ್ ಎಸ್.ಡಿ.ಆರ್. (Special Drawing Right)ಗೆ ಸೀಮಿತಗೊಳಿಸಲಾಗಿದೆ. ಇಂತಹುದೊಂದು ಮಿತಿಯನ್ನು ಹದಿನೈದು ವರ್ಷಗಳ ಹಿಂದೆ ‘ಪರಮಾಣು ಹಾನಿ ನಾಗರಿಕ ಹೊಣೆಗಾರಿಕೆ ಕಾಯ್ದೆ’ಯಲ್ಲಿ ನಿಗದಿಪಡಿಸಲಾಗಿತ್ತು. ಈ ಹೊಸ ಮಸೂದೆಯಲ್ಲಿ ಹಣದುಬ್ಬರದ ಪರಿಣಾಮವನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.

2025ರ ಡಿಸೆಂಬರ್ ತಿಂಗಳ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮೌಲ್ಯದ ಪ್ರಕಾರ ಒಂದು ಎಸ್.ಸಿ.ಆರ್. ಎಂದರೆ 1,36682 ಅಮೆರಿಕನ್ ಡಾಲರ್-ಗೆ ಸಮನಾಗಿದೆ. ಇದರಂತೆ 300 ಮಿಲಿಯನ್ ಅಮೆರಿಕನ್ ಡಾಲರ್ ಎಂದರೆ ಸುಮಾರು 410 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ 3,690 ಕೋಟಿ ರೂ. (ಒಂದು ಡಾಲರ್ ಬೆಲೆ 90 ರೂ. ಎಂದು ಲೆಕ್ಕಹಾಕಿದಾಗ) ಆಗುತ್ತದೆ.

ಎಸ್.ಡಿ.ಆರ್ ಮೌಲ್ಯವನ್ನು ಐಎಂಎಫ್ ನಿರ್ಧರಿಸುತ್ತದೆ. ಪ್ರಮುಖ ಕರೆನ್ಸಿಗಳಾದ ಅಮೆರಿಕನ್ ಡಾಲರ್, ಯೂರೊ, ಯೆನ್, ಪೌಂಡ್ ಸ್ಟರ್ಲಿಂಗ್ ಮತ್ತು ರೆನ್ಮಿನಿಬಿಗಳ ಮಾರುಕಟ್ಟೆ ವಿನಿಮಯ ದರಗಳನ್ನು ಆಧರಿಸಿ ಈ ಮೌಲ್ಯವನ್ನು ನಿಗದಿ ಮಾಡಲಾಗುತ್ತದೆ.

ಅಸಂಬದ್ದ ಹೊಣೆಗಾರಿಕೆ

ಯೂನಿಯನ್ ಕಾರ್ಬೈಡ್ ಸಂಸ್ಥೆಯ ಕೀಟನಾಶಕ ಘಟಕದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡ 1984ರ ಭೋಪಾಲ್ ಅನಿಲ ಸೋರಿಕೆಯ ಮಹಾದುರಂತವನ್ನು ಗಮನಿಸಿದರೆ ಇದು ಎಷ್ಟರ ಮಟ್ಟಿಗೆ ಅಸಂಬದ್ದವಾಗಿದೆ ಎಂಬುದು ಅತ್ಯಂತ ಸರಳವಾಗಿ ಮನದಟ್ಟಾಗುತ್ತದೆ. ಅಂದು ಕೇಂದ್ರ ಸರ್ಕಾರವು 3.3 ಶತಕೋಟಿ ಅಮೆರಿಕನ್ ಡಾಲರ್ ಪರಿಹಾರ ನೀಡುವಂತೆ ಹಕ್ಕು ಮಂಡಿಸಿತ್ತು. ಆದರೆ 1989ರಲ್ಲಿ ಪಾವತಿಯಾದದ್ದಾದರೂ ಎಷ್ಟು? ಕೇವಲ 470 ದಶಲಕ್ಷ ಅಮೆರಿಕನ್ ಡಾಲರ್ ಮಾತ್ರ.

2010ರಲ್ಲಿ ರೂಪಿಸಲಾದ ಕಾನೂನಿನಲ್ಲಿ ಹೊಣೆಗಾರಿಕೆಗೆ ಸಂಬಂಧಿಸಿದ ನಿಬಂಧನೆಯು ಅಸಂಬದ್ಧವಾಗಿತ್ತು. ಈಗಿನ ಪರಿಸ್ಥಿತಿಯೂ ಅದೇ ಆಗಿದೆ.

ಗಮನಿಸಬೇಕಾದ ಎರಡನೇ ಅಂಶವೇನೆಂದರೆ, ಅಪಘಾತ ಸಂಭವಿಸಿದಲ್ಲಿ ನಿರ್ವಾಹಕರು ಪಾವತಿಸಬೇಕಾದ ಗರಿಷ್ಠ ಹೊಣೆಗಾರಿಕೆಯ ಮೊತ್ತವು ಅವರು ಬಳಕೆ ಮಾಡುವ ಪರಮಾಣು ರಿಯಾಕ್ಟರ್-ಗಳ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ (2ನೇ ಅನುಸೂಚಿ). ಇದು ನೂರು ಕೋಟಿ ರೂ.ಗಳಿಂದ 3000 ಕೋಟಿಗಳ ನಡುವೆ ಇರಬಹುದು.

ಅಂದರೆ, 150 ಮೆಗಾವ್ಯಾಟ್ ವರೆಗಿನ ಉಷ್ಣ ಶಕ್ತಿಯನ್ನು ಹೊಂದಿರುವ ರಿಯಾಕ್ಟರ್ ಗಳು ನೂರು ಕೋಟಿ ರೂ. ತನಕ ಪಾವತಿಸಲು ಬದ್ಧವಾಗಿರುತ್ತವೆ. ಇದು ಹಂತ ಹಂತವಾಗಿ ಹೆಚ್ಚುತ್ತಾ ಹೋಗಿ 3600 ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಉಷ್ಣ ಶಕ್ತಿಯನ್ನು ಉತ್ಪಾದಿಸುವ ರಿಯಾಕ್ಟರ್ ಗಳಿಗೆ 3000 ಕೋಟಿ ರೂ. ತನಕವೂ ತಲುಪುತ್ತದೆ.

ಈ ವಿಚಾರದಲ್ಲಿ 2010ರ ಕಾನೂನು ಹೇಗಿತ್ತೆಂದರೆ, ಹತ್ತು ಮೆಗಾವ್ಯಾಟ್ ಅಥವಾ ಅದಕ್ಕೂ ಮಿಗಿಲಾದ ಉಷ್ಣ ಶಕ್ತಿಯನ್ನು ಹೊಂದಿರುವ ಪರಮಾಣು ರಿಯಾಕ್ಟರ್-ಗಾಗಿ ನಿರ್ವಾಹಕರ ಗರಿಷ್ಠ ಹೊಣೆಗಾರಿಕೆಯನ್ನು 1500 ಕೋಟಿ ರೂ. ಎಂದು ನಿಗದಿಪಡಿಸಲಾಗಿತ್ತು.

ಇದೇ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡರೂ ಈಗಿನ ಮೊತ್ತವು 2010ರ ಕಾನೂನು ನಿಗದಿ ಮಾಡಿದ್ದಕ್ಕಿಂತ ಕಡಿಮೆಯಾಗಿದೆ.

ಆದರೆ, ನಿಲ್ಲಿ. ಹೇಳುವುದಕ್ಕೆ ಇನ್ನೂ ಸಾಕಷ್ಟು ಸಂಗತಿಗಳಿವೆ.

ಮಸೂದೆಯ 14ನೇ ಕಲಮು ಹೀಗೆ ಹೇಳುತ್ತದೆ; “ಕೇಂದ್ರ ಸರ್ಕಾರವು ಹಾನಿಯ ಹೊಣೆಗಾರಿಕೆಯನ್ನು ಹೊರತಕ್ಕದ್ದು”: (i) ಒಂದು ವೇಳೆ ಹೊಣೆಗಾರಿಕೆಯು ಎರಡನೇ ಅನುಸೂಚಿಯಲ್ಲಿ ಸೂಚಿಸಿದಂತೆ ನಿರ್ವಾಹಕನ ಹೊಣೆಗಾರಿಕೆಯನ್ನೂ ಮೀರಿದರೆ (ಅಂತಹ ಹೆಚ್ಚುವರಿ ಮೊತ್ತದ ಮಟ್ಟಿಗೆ ಮಾತ್ರ) ಮತ್ತು (ii) ಒಂದು ವೇಳೆ ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ‘ಸಾರ್ವಜನಿಕ ಹಿತಾಸಕ್ತಿಯಿಂದ’ ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಂಡರೆ ಈ ಉದ್ದೇಶಕ್ಕಾಗಿ ಸರ್ಕಾರವು ಒಂದು ನಿಧಿಯನ್ನು ಸ್ಥಾಪನೆ ಮಾಡುತ್ತದೆ.

ಹಾನಿಗೆ ತೆರಿಗೆದಾರರೇ ಹೊಣೆ

ಅಂದರೆ, ಹಾನಿಯ ಮೌಲ್ಯವು ಎರಡನೇ ಅನುಸೂಚಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿದ್ದರೆ ಉಳಿದ ಮೊತ್ತವನ್ನು ಕೇಂದ್ರ ಸರ್ಕಾರವು ಭಾರತೀಯ ತೆರಿಗೆದಾರರ ಹಣದಿಂದಲೇ ಪಾವತಿ ಮಾಡುತ್ತದೆ.

ಅಂದಹಾಗೆ ‘ಸಾರ್ವಜನಿಕ ಹಿತಾಸಕ್ತಿ’ ಎಂದರೆ ಏನು? ಪರಮಾಣು ದುರಂತದ ಬಳಿಕ ಖಾಸಗಿ ನಿರ್ವಾಹಕನ ಜವಾಬ್ದಾರಿಯನ್ನು ಮನ್ನಾ ಮಾಡಲು ಮತ್ತು ತೆರಿಗೆದಾರರ ಹಣದಿಂದ ತಾನೇ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಅನುವು ಮಾಡಿಕೊಡುವುದೇ?

ಆ ‘ಸಾರ್ವಜನಿಕ ಹಿತಾಸಕ್ತಿ’ ಎಂಬ ಪದದ ಅರ್ಥ ವಿವರಣೆಯನ್ನು ಈ ಮಸೂದೆಯಲ್ಲಿ ಮಾಡಲಾಗಿಲ್ಲ. 2010ರ ಕಾನೂನಿನಲ್ಲಿಯೂ ಕೂಡ. 2010ರಲ್ಲಿ ಆಗಿನ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗುವ ಕೊನೆಯ ಹಂತದಲ್ಲಿ ಈ ವ್ಯಾಖ್ಯಾನರಹಿತವಾದ ‘ಸಾರ್ವಜನಿಕ ಹಿತಾಸಕ್ತಿ’ಗಾಗಿ ಸೆಕ್ಷನ್ ಏಳನ್ನು ಗುಟ್ಟಾಗಿ ಸೇರ್ಪಡೆ ಮಾಡಿತ್ತು.

ಇದನ್ನು ಸರಳ ಮತ್ತು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು; ಖಾಸಗಿ ಪರಮಾಣು ರಿಯಾಕ್ಟರಿನ ನಿರ್ವಾಹಕನು ಮಾಡಿದ ತಪ್ಪಿನಿಂದ ಭಾರತೀಯರು ಸಾವನ್ನಪ್ಪಿದ ಸಂದರ್ಭದಲ್ಲಿ ಆ ತಪ್ಪಿಗೆ ಭಾರತದ ತೆರಿಗೆದಾರರೇ ಹಣ ಪಾವತಿ ಮಾಡುವಂತೆ ಕೇಂದ್ರ ಸರ್ಕಾರವು ತನಗೆ ತಾನೇ ಅಧಿಕಾರವನ್ನು ಪಡೆದುಕೊಳ್ಳುತ್ತಿದೆ.

ಈ ದುರಂತದ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಮತ್ತು ಅಥವಾ ಈ ಹೊರೆಯನ್ನು ಭಾರತೀಯ ತೆರಿಗೆದಾರರ ಮೇಲೆ ಹೇರಲು ಇರುವ ತರ್ಕವಾದರೂ ಏನು?

2010ರ ಕಾಯ್ದೆಯು ಹೆಚ್ಚಿನ ಹೊಣೆಗಾರಿಕೆಯನ್ನು ಹೇರಿತ್ತು. ಈ ಕಾರಣದಿಂದಾಗಿ ಯಾವುದೇ ಖಾಸಗಿ ಪರಮಾಣು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಧೈರ್ಯ ತೋರಿರಲಿಲ್ಲ. ಇನ್ನೂ ಒಂದು ವಿಶೇಷ ಸಂಗತಿ ಎಂದರೆ , ಈ ಹೊಣೆಗಾರಿಕೆಯ ಮೊತ್ತವು 1989ರಲ್ಲಿ ಕೀಟನಾಶಕ ಘಟಕ (ಯೂನಿಯನ್ ಕಾರ್ಬೈಡ್) ಪಾವತಿ ಮಾಡಿದ್ದಕ್ಕಿಂತ ಕಡಿಮೆಯಿದ್ದರೂ ಕೂಡ ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿರಲಿಲ್ಲ. ಕೀಟನಾಶಕ ಸ್ಥಾವರದ ಅನಿಲ ಸೋರಿಕೆಗಿಂತ ಪರಮಾಣು ದುರಂತವೇನಾದರೂ ಸಂಭವಿಸಿದರೆ ಅದು ಜೀವನ ಮತ್ತು ಪರಿಸರದ ಮೇಲೆ ಅತಿಹೆಚ್ಚು ವಿನಾಶಕಾರಿಯಾದ ಪರಿಣಾಮ ಬೀರಬಲ್ಲದು.

ಖಾಸಗಿ ಪರಮಾಣು ನಿರ್ವಾಹಕರ ಅಗತ್ಯವಿದೆಯೇ?

2047ರ ಹೊತ್ತಿಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ಮತ್ತು ‘ಸ್ವಚ್ಛ ಇಂಧನ’ದ ಅಗತ್ಯಗಳನ್ನು ಪೂರೈಸಲು 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದನ್ನು ಮಸೂದೆಯ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಭಾರತವು ಈಗಾಗಲೇ ಶೇ.50ಕ್ಕಿಂತ ಹೆಚ್ಚು ಹಸಿರು ಇಂಧನ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಈ ವಾದಕ್ಕೆ ಯಾವುದೇ ತರ್ಕವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಮೂಲಸೌಕರ್ಯ ಹಾಗೂ ಶೇಖರಣಾ ಸಾಮರ್ಥ್ಯದ ಕೊರತೆಯಿಂದಾಗಿ ಹಸಿರು ಇಂಧನದಿಂದ ಉತ್ಪತ್ತಿಯಾಗುವ ನಿಜವಾದ ವಿದ್ಯುತ್ ಕೇವಲ ಶೇ.24ರಷ್ಟು ಮಾತ್ರ.

ಹೊಸ ಸಾಮರ್ಥ್ಯವನ್ನು ಸೇರ್ಪಡೆ ಮಾಡುತ್ತ ಹೋಗುವುದಕ್ಕೆ ಬದಲಾಗಿ ಈಗಿರುವ ಹಸಿರು ಇಂಧನವನ್ನು ಬಳಸಿಕೊಳ್ಳುವುದರ ಕಡೆಗೆ ಗಮನ ಹರಿಸುವುದು ಅರ್ಥಪೂರ್ಣವಾಗುತ್ತದೆ.

ಮೇಲೆ ಪ್ರಸ್ತಾಪ ಮಾಡಿದ ಈ ಎಲ್ಲ ವಿವರಗಳ ಹಿನ್ನೆಲೆಯಲ್ಲಿ ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆಯೊಂದಿದೆ; ಈ ಕ್ಷೇತ್ರದ ತಜ್ಞರು, ವಿರೋಧ ಪಕ್ಷಗಳು ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ನಿಜವಾದ ಸಾರ್ವಭೌಮರಾದ ಜನರೊಂದಿಗೆ ಯಾವುದೇ ಪೂರ್ವಭಾವಿ ಸಮಾಲೋಚನೆಯನ್ನೂ ಮಾಡದೆ ಇಂತಹುದೊಂದು ಮಸೂದೆಯನ್ನು ಯಾಕೆ ಮಂಡಿಸಲಾಗಿದೆ?

ಅದರಲ್ಲೂ ವಿಶೇಷವಾಗಿ ಈ ಮಸೂದೆಯು ಕೇವಲ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳ ಬಗೆಗೆ ಮಾತ್ರವಲ್ಲದೆ ಅಧಿಕ ಸಾಮರ್ಥ್ಯದ ಪರಮಾಣು ರಿಯಾಕ್ಟರಗಳಿಗೂ ಸಂಬಂಧಿಸಿದ್ದಾದ ಕಾರಣ ಇದು ಅತ್ಯಂತ ಮಹತ್ವದ್ದಾಗಿದೆ.

Tags:    

Similar News