ವಿದೇಶಕ್ಕೆ ಪರಾರಿಯಾಗಿ 34 ದಿನಗಳ ಬಳಿಕ ಬಂಧನಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ
ಪ್ರಜ್ವಲ್ ಬಂಧನಕ್ಕಾಗಿ ಎಸ್‌ಐಟಿ ತಂಡ ಹಲವಾರು ಪ್ರಯತ್ನಗಳನ್ನು ನಡೆಸಿತ್ತು. ಪ್ರಜ್ವಲ್ ವಿದೇಶಕ್ಕೆ ಪರಾರಿಯಾದ ಕೂಡಲೇ ಅವರನ್ನು ಪತ್ತೆಹಚ್ಚಲು ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು.;
ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, 34 ದಿನಗಳ ಕಾಲ ತಲೆಮರೆಸಿಕೊಂಡು ಬಳಿಕ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅವರು ಹಿಂತಿರುಗಿದ ಕೂಡಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದರು.
ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೋಗಳಿದ್ದ ಪೆನ್‌ಡ್ರೈವ್‌ಗಳು ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ಹರಿದಾಡಿದ್ದವು. ಈ ಘಟನೆಯು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಉಂಟುಮಾಡಿತು. ಈ ಸಂಬಂಧ 2024ರ ಏಪ್ರಿಲ್ 28 ರಂದು ಸಂತ್ರಸ್ತೆಯೊಬ್ಬರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ರಾಜ್ಯ ಸರ್ಕಾರವು ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ಆರಂಭಿಸಿತ್ತು. ಆದರೆ, ಹಾಸನದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದ ಮರುದಿನವೇ, ಅಂದರೆ 2024ರ ಏಪ್ರಿಲ್ 27ರ ಬೆಳಗಿನ ಜಾವ, ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ದೇಶವನ್ನು ತೊರೆದು ಜರ್ಮನಿಗೆ ಪರಾರಿಯಾಗಿದ್ದರು.
ಬಂಧನಕ್ಕಾಗಿ ನಡೆದ ಪ್ರಯತ್ನಗಳು
ಪ್ರಜ್ವಲ್ ಬಂಧನಕ್ಕಾಗಿ ಎಸ್‌ಐಟಿ ತಂಡ ಹಲವಾರು ಪ್ರಯತ್ನಗಳನ್ನು ನಡೆಸಿತ್ತು. ಪ್ರಜ್ವಲ್ ವಿದೇಶಕ್ಕೆ ಪರಾರಿಯಾದ ಕೂಡಲೇ ಅವರನ್ನು ಪತ್ತೆಹಚ್ಚಲು ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ನಂತರ ಇಂಟರ್‌ಪೋಲ್ ಸಹಾಯದೊಂದಿಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದರು. ಎಸ್‌ಐಟಿ ಕೂಡ ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ವಿದೇಶಾಂಗ ಇಲಾಖೆಗೆ ಮನವಿ ಮಾಡಿತ್ತು.
ಬೆಂಗಳೂರಿನಲ್ಲಿ ಬಂಧನ
ವಿದೇಶದಲ್ಲಿ 34 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪ್ರಜ್ವಲ್, ಜರ್ಮನಿಯ ಮ್ಯೂನಿಚ್‌ನಿಂದ ಲುಫ್ತಾನ್ಸಾ ವಿಮಾನದಲ್ಲಿ ಪ್ರಯಾಣಿಸಿ, ಮೇ 31, 2024ರ ಬೆಳಗಿನ ಜಾವ 1:15ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ವಿಮಾನ ನಿಲ್ದಾಣದಲ್ಲಿ ನ್ಯಾಯಾಲಯದ ವಾರಂಟ್‌ನೊಂದಿಗೆ ಸಿದ್ಧರಾಗಿದ್ದ ಎಸ್‌ಐಟಿ ಅಧಿಕಾರಿಗಳು, ವಲಸೆ ವಿಭಾಗದ ಅಧಿಕಾರಿಗಳ ಸಹಾಯದಿಂದ ಅವರನ್ನು ಬಂಧಿಸಿ ವಶಕ್ಕೆ ಪಡೆದರು. ಪೊಲೀಸರು ಅವರ ಪಾಸ್‌ಪೋರ್ಟ್ ಮತ್ತು ವೀಸಾವನ್ನು ವಶಪಡಿಸಿಕೊಂಡು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು.
ಪ್ರಜ್ವಲ್ ವಿರುದ್ಧ ಈ ಪ್ರಕರಣದಲ್ಲಿ ಒಟ್ಟು ನಾಲ್ಕು ದೂರುಗಳು ದಾಖಲಾಗಿದ್ದು, ಗನ್ ತೋರಿಸಿ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡಿರುವಂತಹ ಗಂಭೀರ ಆರೋಪಗಳು ಅವರ ಮೇಲಿವೆ. ಎಸ್‌ಐಟಿ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಸುಮಾರು 2,000 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ.