ಕುಣಬಿ ಮರಾಠರ ಕರಡು ಅಧಿಸೂಚನೆ ಜಾರಿಗೊಳಿಸಿ: ಜರಾಂಗೆ

ಇಲ್ಲವಾದಲ್ಲಿ ಫೆ.24ರಿಂದ ಅಹಿಂಸಾತ್ಕಕ ಪ್ರತಿಭಟನೆ;

Update: 2024-02-21 13:58 GMT

ಜಲ್ನಾ, ಫೆ. 21- ಮಹಾರಾಷ್ಟ್ರ ಸರ್ಕಾರವು ಕುಣಬಿ ಮರಾಠರ 'ರಕ್ತ ಸಂಬಂಧಿʼಗಳ ಕರಡು ಅಧಿಸೂಚನೆಯನ್ನು ಎರಡು ದಿನಗಳಲ್ಲಿ ಜಾರಿಗೊಳಿಸಬೇಕು. ಇಲ್ಲವಾದರೆ ಫೆ.24ರಿಂದ ರಾಜ್ಯಾದ್ಯಂತ ಅಹಿಂಸಾತ್ಮಕ ರಸ್ತೆ ತಡೆ ನಡೆಸಲಾಗುವುದು ಎಂದು ಕಾರ್ಯಕರ್ತ ಮನೋಜ್ ಜರಾಂಗೆ ಬುಧವಾರ ಹೇಳಿದ್ದಾರೆ. 

ಜಲ್ನಾ ಜಿಲ್ಲೆಯ ಅಂತರವಾಲಿ ಸರ್ತಿ ಗ್ರಾಮದಲ್ಲಿ ಮರಾಠ ಸಮುದಾಯದ ಸದಸ್ಯರ ಸಭೆಯಲ್ಲಿ ಮಾತನಾಡಿದ ಜರಾಂಗೆ, ಶಾಂತಿಯುತ ಪ್ರತಿಭಟನೆ ನಡೆಸಬೇಕು ಮತ್ತು ಹಿಂಸಾಚಾರ ಕೂಡದು ಎಂದು ಹೇಳಿದರು. 

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ʻಮರಾಠ ಸಮುದಾಯಕ್ಕೆ ಶೇ. 10ರಷ್ಟು ಮೀಸಲು ನೀಡುವ ಮಸೂದೆಯು ಕಾನೂನು ಪರಿಶೀಲನೆಯಲ್ಲಿ ನಿಲ್ಲುವುದಿಲ್ಲ. ಕುಣಬಿ ಮರಾಠರ ರಕ್ತ ಸಂಬಂಧಿಗಳ ಕುರಿತ ಅಧಿಸೂಚನೆಯನ್ನು ಕಾನೂನಾಗಿ ಪರಿವರ್ತಿಸಬೇಕೆಂದು ಒತ್ತತಾಯಿಸಿದರು. 

ʻಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮೀಸಲು ಸಮಸ್ಯೆಯನ್ನು ಬಗೆಹರಿಸುವವರೆಗೆ ಲೋಕಸಭೆ ಚುನಾವಣೆಯನ್ನು ನಡೆಸಬಾರದುʼ ಎಂದು ಮನವಿ ಮಾಡಿದರು. 

ಮಂಗಳವಾರ ನಡೆದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಹಾರಾಷ್ಟ್ರ ಶಾಸಕಾಂಗವು ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ವರ್ಗದಡಿ ಶೇ.10 ಮೀಸಲು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಆದರೆ ಒಬಿಸಿ ಅಡಿಯಲ್ಲಿ ಸಮುದಾಯಕ್ಕೆ ಕೋಟಾ ನೀಡಬೇಕೆಂಬುದು ಜರಾಂಗೆ ಒತ್ತಾಯ. 

ಈಗಾಗಲೇ ಮೀಸಲು ವರ್ಗದಲ್ಲಿಗಣನೀಯ ಸಂಖ್ಯೆಯ ಜಾತಿಗಳು ಮತ್ತು ಗುಂಪುಗಳು ಇವೆ. ಮೀಸಲು ಶೇ.52 ಇದೆ. ಮರಾಠ ಸಮುದಾಯವನ್ನು ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿಸುವುದು ಅಸಮಾನ ಎಂದು ಮಸೂದೆ ಹೇಳಿದೆ. 

ಕುಣಬಿ ಮರಾಠರ ರಕ್ತಸಂಬಂಧಿಗಳಿಗೆ ಪ್ರಮಾಣಪತ್ರ ನೀಡಲು ಕಳೆದ ತಿಂಗಳು ಹೊರಡಿಸಿದ ಕರಡು ಅಧಿಸೂಚನೆಯನ್ವಯ 6 ಲಕ್ಷ ಆಕ್ಷೇಪಗಳನ್ನು ಸ್ವೀಕರಿಸಿದ್ದು, ಪರಿಶೀಳನೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ವಿಧಾನಸಭೆಗೆ ತಿಳಿಸಿದರು. 

ʻಮುಖ್ಯಮಂತ್ರಿ ಮೇಲೆ ಜನರಿಗೆ ಇನ್ನೂ ನಂಬಿಕೆ ಇದೆ. ಅವರು ಮರಾಠ ಕೋಟಾವನ್ನು ಜಾರಿಗೊಳಿಸಲು ಇರುವ ಅಡೆತಡೆಗಳನ್ನು ವಿವರಿಸಬೇಕುʼ ಎಂದು ಜರಾಂಗೆ ಹೇಳಿದರು. ʻಮಂಗಳವಾರದ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ನೀಡಲಾದ ಶೇ 10 ಮೀಸಲಿಗೂ ಮರಾಠ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಾನೂನು ಪರಿಶೀಲನೆಯಲ್ಲಿ ನಿಲ್ಲುವುದಿಲ್ಲʼ ಎಂದು ಹೇಳಿದರು.

ಮೀಸಲು ಜಾರಿಯಾಗದಿದ್ದರೆ ಫೆಬ್ರವರಿ 24-29ರವರೆಗೆ ಮರಾಠಾ ಸಮುದಾಯದ ಹಿರಿಯರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಪ್ರತಿಭಟನೆ ವೇಳೆ ಯಾವುದೇ ಹಾನಿ ಉಂಟಾದರೆ ಅದಕ್ಕೆ ಸಿಎಂ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೊಣೆಯಾಗುತ್ತಾರೆ. ಮರಾಠಾ ಸಮುದಾಯದ 20 ಲಕ್ಷ ಹಿರಿಯ ಸದಸ್ಯರು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆʼ ಎಂದು ಜರಾಂಗೆ ಹೇಳಿದರು.

Tags:    

Similar News