ಒಂದು ಹುದ್ದೆಗೆ 750 ರೂ. ಹೆಚ್ಚುವರಿ ಹುದ್ದೆಗಳಿಗೆ ತಲಾ 100 ರೂ.; ಕೆಇಎ ದುಬಾರಿ ಶುಲ್ಕಕ್ಕೆ ಭಾರಿ ವಿರೋಧ

ಸ್ಪರ್ಧಾರ್ಥಿಗಳು ಈಗಾಗಲೇ ಕೋಚಿಂಗ್, ಪಠ್ಯಪುಸ್ತಕಗಳು ಮತ್ತು ಇತರೆ ಅಧ್ಯಯನ ಸಾಮಗ್ರಿಗಳಿಗೆ ಸಾಕಷ್ಟು ಖರ್ಚು ಮಾಡಿ, ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಈ ಹೆಚ್ಚುವರಿ ಶುಲ್ಕವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Update: 2025-10-14 15:21 GMT

ಸಾಂದರ್ಭಿಕ ಚಿತ್ರ

Click the Play button to listen to article

ಸುದೀರ್ಘ ಸಮಯದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಸಂತಸ ತಂದಿದೆ. ಆದರೆ, ಪ್ರಾಧಿಕಾರವು ವಿಧಿಸಿರುವ ದುಬಾರಿ ಪರೀಕ್ಷಾ ಶುಲ್ಕವು ಸ್ಪರ್ಧಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು 'ಅಕ್ಸರ' ಸಂಘಟನೆಯ ಅಧ್ಯಕ್ಷ ಸಂತೋಷ್ ಮರೂರು ಅವರು ಕೆಇಎ ನಿರ್ದೇಶಕರಿಗೆ ಪತ್ರ ಬರೆದು, ಶುಲ್ಕ ಹೆಚ್ಚಳದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಪ್ರಾಧಿಕಾರವು ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವುದು ಸ್ವಾಗತಾರ್ಹ. ಆದರೆ, ಈ ಪರೀಕ್ಷೆಗಳಿಗೆ ವಿಧಿಸಿರುವ ಶುಲ್ಕವು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಮೇಲೆ, ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಮತ್ತು ಮಧ್ಯಮ ವರ್ಗದ ಕುಟುಂಬಗಳ ಅಭ್ಯರ್ಥಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ," ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಸ್ಪರ್ಧಾರ್ಥಿಗಳು ಈಗಾಗಲೇ ಕೋಚಿಂಗ್, ಪಠ್ಯಪುಸ್ತಕಗಳು ಮತ್ತು ಇತರೆ ಅಧ್ಯಯನ ಸಾಮಗ್ರಿಗಳಿಗೆ ಸಾಕಷ್ಟು ಹಣ ಖರ್ಚು ಮಾಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಹೆಚ್ಚುವರಿ ಶುಲ್ಕವು 'ಗಾಯದ ಮೇಲೆ ಬರೆ ಎಳೆದಂತೆ' ಆಗಿದೆ. ಆದ್ದರಿಂದ, ಪರೀಕ್ಷಾ ಶುಲ್ಕವನ್ನು ತಕ್ಷಣವೇ ಕಡಿಮೆಗೊಳಿಸಬೇಕು," ಎಂದು ಅವರು ಮನವಿ ಮಾಡಿದ್ದಾರೆ.

ಯಾರಿಗೆ, ಎಷ್ಟು ಶುಲ್ಕ?

ಕೆಇಎಯು ವಿವಿಧ ಇಲಾಖೆಗಳಲ್ಲಿನ ದ್ವಿತೀಯ ಪಿಯುಸಿ ಮತ್ತು ಪದವಿ ಮಟ್ಟದ ಸುಮಾರು 15 ವಿಭಾಗಗಳ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಸಾಮಾನ್ಯ ಮತ್ತು ಹಿಂದುಳಿದ ವರ್ಗ (2A, 2B, 3A, 3B): ಒಂದು ಅರ್ಜಿಗೆ 750 ರೂಪಾಯಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಸಲ್ಲಿಸುವ ಪ್ರತಿಯೊಂದು ಹೆಚ್ಚುವರಿ ಹುದ್ದೆಗೆ ತಲಾ 100 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇದರಿಂದಾಗಿ, ಒಬ್ಬ ಅಭ್ಯರ್ಥಿ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಸುಮಾರು 2,100 ರೂಪಾಯಿ ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1: ಈ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇವರೂ ಸಹ ಪ್ರತಿ ಹೆಚ್ಚುವರಿ ಅರ್ಜಿಗೆ 100 ರೂಪಾಯಿ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಇದರಿಂದ ಇವರು ಸುಮಾರು 1,600 ರೂಪಾಯಿ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸ್ಪರ್ಧಾರ್ಥಿಗಳು ಈ ದುಬಾರಿ ಶುಲ್ಕವನ್ನು ಕಡಿಮೆ ಮಾಡಬೇಕು ಅಥವಾ ಪ್ರತಿ ಹುದ್ದೆಗೂ ವಿಧಿಸಿರುವ ಪ್ರತ್ಯೇಕ ಶುಲ್ಕವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ಸಾರಿಗೆ (KKRTC), ಕೃಷಿ ಮಾರಾಟ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2025 ಕೊನೆಯ ದಿನಾಂಕವಾಗಿದೆ. 

Tags:    

Similar News