ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧ ಪ್ರಸ್ತಾಪ: ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ
ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪ್ರಶ್ನಿಸಲು ಧೈರ್ಯ ಮಾಡಿದ್ದಕ್ಕಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದನೆ ಹಾಗೂ ಬೆದರಿಕೆಗಳು ಬರುತ್ತಿವೆ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. .
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ
ಸರ್ಕಾರಿ ಮತ್ತು ಅನುದಾನಿತ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಸ್ತಾಪವು ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿಚಾರ ಪ್ರಸ್ತಾಪಿಸಿದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸ್ವತಃ ಸಚಿವರೇ ಬಹಿರಂಗಪಡಿಸಿದ್ದಾರೆ. ಎಕ್ಸ್ ಮೂಲಕ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಬರೆದಿದ್ದು, ಸರ್ಕಾರಿ ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಮೈದಾನಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್ ನಡೆಸುವ 'ಶಾಖೆ' ಮತ್ತು 'ಬೈಠಕ್'ಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದರು. ಇಂತಹ ಚಟುವಟಿಕೆಗಳು ಯುವ ಮನಸ್ಸುಗಳಲ್ಲಿ ವಿಭಜಕ ಆಲೋಚನೆಗಳನ್ನು ಬಿತ್ತಿ, ದೇಶದ ಸಮಗ್ರತೆಗೆ ಧಕ್ಕೆ ತರುತ್ತವೆ. ಆದ್ದರಿಂದ, ಈ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳಿದ್ದರು.
ಬೆದರಿಕೆ ಕರೆಗಳು ಮತ್ತು ಸಚಿವರ ಖಡಕ್ ಉತ್ತರ
ಪತ್ರ ಬರೆದ ಬೆನ್ನಲ್ಲೇ ತಮಗೆ ಮತ್ತು ತಮ್ಮ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ಹಾಗೂ ನಿಂದನಾತ್ಮಕ ಕರೆಗಳು ಬರುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಅವರು ತಮ್ಮ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಕಳೆದ ಎರಡು ದಿನಗಳಿಂದ ನನ್ನ ಫೋನ್ ನಿರಂತರವಾಗಿ ರಿಂಗಣಿಸುತ್ತಿದೆ. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪ್ರಶ್ನಿಸಲು ಧೈರ್ಯ ಮಾಡಿದ್ದಕ್ಕಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದನೆ ಹಾಗೂ ಬೆದರಿಕೆಗಳು ಬರುತ್ತಿವೆ," ಎಂದು ಅವರು ಹೇಳಿದ್ದಾರೆ.
ಇಂತಹ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, "ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಡದವರು ನನ್ನನ್ನು ಏಕೆ ಬಿಡುತ್ತಾರೆ? ಬೆದರಿಕೆಗಳಿಂದ ನನ್ನನ್ನು ಮೌನಗೊಳಿಸಬಹುದು ಎಂಬುದು ಅವರ ತಪ್ಪು ಕಲ್ಪನೆ. ಇದು ಈಗಷ್ಟೇ ಆರಂಭ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳ ಮೇಲೆ ಸಮಾನತೆಯ ಸಮಾಜವನ್ನು ನಿರ್ಮಿಸುವ ಸಮಯ ಬಂದಿದೆ," ಎಂದು ಸವಾಲು ಹಾಕಿದ್ದಾರೆ.
ಸರ್ಕಾರದ ನಿಲುವು ಏನು?
ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷವಾಗಿ, ತಮಿಳುನಾಡಿನಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ಮಾದರಿಯನ್ನು ಅಧ್ಯಯನ ಮಾಡುವಂತೆ ಸಿಎಂ ಆದೇಶಿಸಿದ್ದಾರೆ. ಅಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪೊಲೀಸ್ ಅನುಮತಿ ಕಡ್ಡಾಯಗೊಳಿಸಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, "ಈ ಬಗ್ಗೆ ಪತ್ರ ಗೃಹ ಇಲಾಖೆಗೆ ಬಂದರೆ, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು," ಎಂದು ಹೇಳಿದ್ದಾರೆ.
ಬಿಜೆಪಿಯಿಂದ ತೀವ್ರ ವಾಗ್ದಾಳಿ
ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ರಾಜ್ಯದಲ್ಲಿ ರಾಜಕೀಯ ತಿಕ್ಕಾಟ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ಆರೋಪಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, "ಪ್ರಿಯಾಂಕ್ ಖರ್ಗೆ ತನ್ನ ಚೈಲ್ಡಿಶ್ ಬುದ್ಧಿ ಬಿಡಬೇಕು. ನೆಹರೂ ಕಾಲದಿಂದಲೂ ಆರ್‌ಎಸ್‌ಎಸ್ ನಿಷೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಇದು ಅವರ ಕನಸಿನ ಮಾತು," ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಪ್ರಿಯಾಂಕ್ ಖರ್ಗೆ ಒಬ್ಬ ಬಚ್ಚಾ," ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೆ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋವನ್ನು ಹಂಚಿಕೊಂಡು ಬಿಜೆಪಿ, ಕಾಂಗ್ರೆಸ್‌ನ "ಇಬ್ಬಗೆಯ ನೀತಿ"ಯನ್ನು ಟೀಕಿಸಿದೆ. ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್ ಖರ್ಗೆ, ತಮ್ಮ ತಂದೆ ಅಂದು ಕಾನೂನು ಸುವ್ಯವಸ್ಥೆ ಪರಿಶೀಲನೆಗೆ ಅಧಿಕಾರಿಯಾಗಿ ಹೋಗಿದ್ದರೇ ಹೊರತು, ಕಾರ್ಯಕ್ರಮದಲ್ಲಿ ಭಾಗವಹಿಸಲಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.