RSS has not been asked to ban, if the organization is registered, challenge to show documents
x

ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ ನಿಷೇಧಿಸುವಂತೆ ಹೇಳಿಲ್ಲ, ಸಂಘ ನೋಂದಣಿಯಾದ ದಾಖಲೆ ತೋರಿಸಲಿ ; ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು. ಶಾಸಕ ಮುನಿರತ್ನ ಗಣವೇಶ ಹಾಕಿಕೊಂಡು ರಾಷ್ಟ್ರಪಿತ ಗಾಂಧಿಜಿ ಪೋಟೋ ಹಿಡಿದುಕೊಂಡು ಪ್ರತಿಭಟಿಸಿದ್ದಾರೆ. ಇದು ಹಸ್ಯಾಸ್ಪದ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಮಾಡಬಾರದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಕುರಿತು ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್‌ ಮುಖಂಡರು ವಿವಿಧ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ಸಚಿವರು ಪ್ರತಿಕ್ರಿಯಿಸಿದ್ದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಆರ್‌ಎಸ್‌ಎಸ್‌ನ್ನು ನಿಷೇಧ ಮಾಡಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ. ಸರ್ಕಾರಿ ಸ್ಥಳಗಳಲ್ಲಿ ಸಭೆ ಮಾಡುವುದು ಬೇಡ ಎಂದಿದ್ದೇನೆ ಅಷ್ಟೇ. ಸಂಘವು ನೋಂದಣಿಯಾಗಿದ್ದರೆ ಪ್ರತಿ ತೋರಿಸಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು. ಶಾಸಕ ಮುನಿರತ್ನ ಗಣವೇಶ ಹಾಕಿಕೊಂಡು ರಾಷ್ಟ್ರಪಿತ ಗಾಂಧಿಜಿ ಪೋಟೋ ಹಿಡಿದುಕೊಂಡು ಪ್ರತಿಭಟಿಸಿದ್ದಾರೆ. ಇದು ಹಸ್ಯಾಸ್ಪದ, ಅವರಿಗೆ ಆರ್‌ಎಸ್‌ಎಸ್ ಇತಿಹಾಸ ತಿಳಿದಿಲ್ಲ ಎಂದರು.

ಎಚ್ಚರಿಕೆ ನೀಡಲು ಶಾಖೆಗೆ ಹೋಗಿದ್ದ ಖರ್ಗೆ

ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದಾಗ ಪೊಲೀಸ್‌ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ತೆರಳಿ, ಶಿವಾಜಿನಗರ ಸೂಕ್ಷ್ಮ ಪ್ರದೇಶವಾಗಿದ್ದು, ಎಚ್ಚರಿಕೆಯಿಂದರಲು ತಿಳಿಸಿದ್ದರು. ಆದರೆ ಬಿಜೆಪಿ ನಾಯಕರು ಆ ವಿಷವನ್ನು ಮುಚ್ಚಿಟ್ಟು ಕೇವಲ ಶಾಖೆಗೆ ಬಂದಿದ್ದರು ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂಘದಲ್ಲಿ ಲೈಂಗಿಕ ಕಿರುಕುಳದ ಆರೋಪ

ಆರ್‌ಎಸ್‌ಎಸ್‌ಗೆ ಅದರದೆ ಆದ ಸುಳ್ಳಿನ ಇತಿಹಾಸವಿದೆ. ಅದನ್ನ ಕಾರ್ಯಕರ್ತರು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ ಅಷ್ಟೇ. ಗಾಂಧಿ ಕೊಂದು, ದೇಶದಲ್ಲಿ ಕೋಮು ವಿಷ ಬೀಜ ಬಿತ್ತಿದ ಇತಿಹಾಸವಿದೆ. ಅವರಿಗೆ ಗೊತ್ತಿಲ್ಲದಿದ್ದರೆ ಹೇಳಲಿ ನಾನೇ ಅವರಿಗೆ ಇತಿಹಾಸದ ಪಾಠ ಮಾಡುತ್ತೇನೆ. ಸಂಘದಲ್ಲಿ ಲೈಂಗಿಕ ಕಿರುಕುಳದ ಆರೋಪವೂ ಇದೆ. ಕೇರಳದ ಹುಡುಗ ಮಾಡಿದ್ದ ಇನ್‌ಸ್ಟ್ರಾಗ್ರಾಮ್ ನೋಡಿದರೆ ತಿಳಿಯುತ್ತದೆ. ರಾಜ್ಯದಲ್ಲೂ ಹನುಮೇಗೌಡ ಎಂಬುವರು ಸಂಘದಲ್ಲಿ ಲೈಂಗಿಕ ಕಿರುಕುಳ ಕೊಡುತ್ತಾರೆ ಎಂದು ಬರೆದಿದ್ದರು ಎಂದರು.

ಆರ್‌ಎಸ್‌ಎಸ್‌ ನಿಷೇಧಿಸಿದ್ದ ಸರ್ದಾರ್‌ ಪಟೇಲ್‌

ಮಾಜಿ ಗೃಹ ಸಚಿವ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್‌ನ್ನ ನಿಷೇಧ ಮಾಡಿದ್ದರು. ಸಂಘ ಪರಿವಾರದವರು ಬಂದು ಪಟೇಲರ ಕಾಲಿಗೆ ಬಿದ್ದು, ನಾವು ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ ಎಂದಿದ್ದರು. ನಮ್ಮ ನಿಯತ್ತು ರಾಷ್ಟ್ರಧ್ವಜಕ್ಕೆ ಇರುತ್ತದೆ ಎಂದು ಕ್ಷಮೆ ಕೋರಿದ್ದರು. ಹಾಗಾಗಿಯೇ ಆರ್‌ಎಸ್‌ಎಸ್ ನಿಷೇಧವನ್ನು ತೆರವು ಮಾಡಲಾಗಿತ್ತು. ಪಟೇಲರು ಈ ತತ್ವ ಎಷ್ಟು ವಿಷಕಾರಿಯಾಗಿದೆ ಎಂದು ನೆಹರು ಅವರಿಗೆ ಪತ್ರ ಬರೆದಿದ್ದರು. ಆದರೆ ಬಿಜೆಪಿಯವರು ಈಗ ಪಟೇಲರ ದೊಡ್ಡ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ವೀರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು. ಇವರು ನಿಜಕ್ಕೂ ದೇಶ ಭಕ್ತರಾ‌ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ, ಧರ್ಮ‌ ಇಲ್ಲದೆಯೇ ಆರ್‌ಎಸ್‌ಎಸ್ ಶೂನ್ಯ. ನಾನು ಹಿಂದೂ, ಹಿಂದೂ ಧರ್ಮದ ವಿರೋಧಿ ಅಲ್ಲ. ಆರ್‌ಎಸ್‌ಎಸ್ ವಿರೋಧಿ. ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗುತ್ತಿದ್ದಾರೆ? ಬೇರೆ ಸಂಘಟನೆಗಳು ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ಪುತ್ತೀರಾ ? ದಲಿತ, ಹಿಂದುಳಿದ ಸಂಘಟನೆಗಳು ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ಪುತ್ತೀರಾ ? ಶಾಲೆಗಳಲ್ಲಿ ನಡೆಯುತ್ತಿರುವ ಬ್ರೇನ್ ವಾಷಿಂಗ್ ನಿಲ್ಲಬೇಕು. ನಿಮ್ಮ ಮನೆಯಲ್ಲಿ ಆಚರಣೆ ಮಾಡಲಿ, ಬೇಡ ಅಂದವರು ಯಾರು ಎಂದರು.

ಗೋ ರಕ್ಷಣೆಗೆ ಬಿಜೆಪಿ ಸಚಿವ, ಶಾಸಕರ ಮಕ್ಕಳೇಕಿಲ್ಲ?

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಕ್ಕಳು ಗಣವೇಷವನ್ನು ಹಾಕಿಕೊಂಡು ಆಚರಣೆ ಮಾಡಲಿ, ಅದಕ್ಕೆ ಯಾರು ಬೇಡ ಎನ್ನುವುದಿಲ್ಲ. ಅವರ ಮಕ್ಕಳಿಗೆ ಒಂದು ನಿಯಮ, ಬಡವರ ಮಕ್ಕಳಿಗೆ ಒಂದು ನಿಯಮ ಏಕೆ ? ಜೋಶಿ, ಆರ್. ಅಶೋಕ್, ಕೇಂದ್ರ ಕ್ಯಾಬಿನೆಟ್‌ ಸಚಿವರ ಮಕ್ಕಳು ಏನು ಮಾಡುತ್ತಿದ್ಧಾರೆ. ಇವರ ಮಕ್ಕಳೆಲ್ಲ ಏಕೆ ಗಣವೇಷ ಹಾಕಿಕೊಳ್ಳುತ್ತಿಲ್ಲ, ಗೋಮೂತ್ರ ಕುಡಿಯುತ್ತಿಲ್ಲ, ಗಂಗಾ ನದಿಯಲ್ಲಿ ಮುಳುಗುತ್ತಿಲ್ಲ, ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆಗೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು.

ವಾಟ್ಸ್‌ಪ್‌ ಮೂಲಕ ಸುಳ್ಳು ಇತಿಹಾಸ ರವಾನೆ

ಆರ್‌ಎಸ್‌ಎಸ್‌ ವಾಟ್ಸ್‌ಪ್‌ ಮೂಲಕ ಬಿಜೆಪಿಯವರಿಗೆ ಸುಳ್ಳುಗಳಿಂದ ಕೂಡಿದ ಪರ್ಯಾಯ ಇತಿಹಾಸವನ್ನು ನೀಡುತ್ತದೆ. ಪಕ್ಷದ ಸೈದ್ಧಾಂತಿಕ ನಾಯಕ ಸಾವರ್ಕರ್ 1923 ರಲ್ಲಿ ತಮ್ಮ "ಹಿಂದುತ್ವ: ಹಿಂದೂ ಯಾರು?" ಎಂಬ ಪುಸ್ತಕದಲ್ಲಿ ಹಿಂದುತ್ವದ ಸೈದ್ಧಾಂತಿಕ ಅಡಿಪಾಯವನ್ನು ಹಾಕಿದರು. ಅದರಲ್ಲಿ ಭಾರತವು ಪಿತೃಭೂಮಿ ಎಂದು ವ್ಯಾಖ್ಯಾನಿಸಿದರು. ಇದು ಕೇವಲ ಶಬ್ದಾರ್ಥದ ಆಯ್ಕೆಯಾಗಿರಲಿಲ್ಲ, ಅದು ಸೈದ್ಧಾಂತಿಕವಾಗಿತ್ತು. "ಪಿತೃಭೂಮಿ" ಪ್ರತಿಪಾದನೆಯು ಭಕ್ತಿಯ ಬಗ್ಗೆ ಅಲ್ಲ, ಅದು ಪ್ರಾಬಲ್ಯದ ಬಗ್ಗೆ. ಆರ್‌ಎಸ್‌ಎಸ್‌ನ ತತ್ವಶಾಸ್ತ್ರವು ನೀವು ಹೇಳಿಕೊಳ್ಳುವಷ್ಟು ಶುದ್ಧ ಮತ್ತು ಉದಾತ್ತವಾಗಿದ್ದರೆ ನನಗೆ ಹೇಳಿ ಎಂದು ಸವಾಲು ಹಾಕಿದರು.

ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಿ. ನಿಮಗೆ ಅವರ ಇತಿಹಾಸ, ತತ್ವ ಸಿದ್ದಾಂತದ ಬಗ್ಗೆ ತಿಳಿದಿಲ್ಲ ಎಂದಾದರೆ, ಆರ್‌ಎಸ್‌ಎಸ್‌ ಬಗ್ಗೆ ನಿಮಗೆ ತಿಳುವಳಿಕೆ ಇದೆ ಎಂದು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದ್ದಾರೆ.


Read More
Next Story