
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ಮುನಿರತ್ನ
"ಏ ಕರಿ ಟೋಪಿ ಎಂಎಲ್‌ಎ.." ಎಂದು ಶಾಸಕ ಮುನಿರತ್ನ ಅವರನ್ನು ಹೀಗಳೆದ ಡಿಕೆಶಿ
ರಾಜರಾಜೇಶ್ವರಿ ನಗರದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ಅವರನ್ನು "ಏ ಕರಿಟೋಪಿ ಎಂಎಲ್‌ಎ" ಎಂದು ನಿಂದಿಸಿದ್ದಾರೆ.
ರಾಜರಾಜೇಶ್ವರಿ ನಗರದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ಅವರನ್ನು "ಏ ಕರಿಟೋಪಿ ಎಂಎಲ್‌ಎ" ಎಂದು ನಿಂದಿಸಿ ಕರೆದಿರುವ ಘಟನೆ ಭಾನುವಾರ ನಡೆದಿದ್ದು, ಡಿಸಿಎಂ ವರ್ತನೆ ಹೊಸ ವಿವಾದ ಸೃಷ್ಟಿಸಿದೆ.
"ಬೆಂಗಳೂರು ನಡಿಗೆ' ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಜೆ.ಪಿ ಉದ್ಯಾನದಲ್ಲಿ ಸಾರ್ವಜನಿಕರ ಜೊತೆ ಭಾನುವಾರ ಮುಂಜಾನೆ ಹೆಜ್ಜೆ ಹಾಕಿದ ಡಿಸಿಎಂ ಅವರು ಜನರ ಅಹವಾಲುಗಳನ್ನು ಆಲಿಸಿದರು. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಗಣವೇಶಧಾರಿಯಾಗಿ ಭಾಗವಹಿಸಿದ ಬಳಿಕ ಬಂದು ಸಾರ್ವಜನಿಕರ ನಡುವೆ ಕುಳಿತಿದ್ದ ಸ್ಥಳೀಯ ಶಾಸಕ ಮುನಿರತ್ನ ಅವರನ್ನು ಡಿಸಿಎಂ ನಿಂದಿಸಿ ವೇದಿಕೆಗೆ ಕರೆದಿದ್ದು ವಿವಾದಕ್ಕೆ ಕಾರಣವಾಗಿದೆ.
ತಮಗೆ ಆಹ್ವಾನ ಇಲ್ಲದಿರುವ ಕಾರಣ ಸಾರ್ವಜನಿಕರ ನಡುವೆ ಕುಳಿತಿದ್ದೆ ಎಂದು ಮುನಿರತ್ನ ಅವರು ಸಮಜಾಯಿಷಿ ನೀಡಿದ್ದರು. ಆದರೆ, "ಕರಿ ಟೊಪಿ ಎಂಎಲ್ ಎ ಬಾ ಇಲ್ಲಿ" ಎಂದು ಡಿ.ಕೆ. ಶಿವಕುಮಾರ್ ಮುನಿರತ್ನ ಅವರನ್ನು ಏಕವಚನದಲ್ಲಿ ಕೂಗಿ ವೇದಿಕೆಗೆ ಕರೆದರು. ಈ ವೇಳೆ ವೇದಿಕೆಗೆ ತೆರಳಿದ ಮುನಿರತ್ನ, ಡಿ.ಕೆ.ಶಿವಕುಮಾರ್ ಬಳಿ ಹಠ ಮಾಡಿ ಮೈಕ್ ಪಡೆದು, "ನನಗೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ. ಸರ್ಕಾರದ ಕಾರ್ಯಕ್ರಮ, ಆಹ್ವಾನ ಮಾಡಿಲ್ಲ. ಇಲ್ಲಿ ಒಬ್ಬ ಸಂಸದ, ಶಾಸಕ ಯಾರೂ ಇಲ್ಲ. ಇದು ಸರ್ಕಾರದ ಕಾರ್ಯಕ್ರಮ. ಕಾಂಗ್ರೆಸ್ ಕಾರ್ಯಕ್ರಮವಲ್ಲ," ಎಂದು ಹೇಳಿದಾಗ, ಸಭೆಯಲ್ಲಿ ಗದ್ದಲ ಉಂಟಾಯಿತು.
ಆ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಅವರ ಮೈಕ್ ಕಿತ್ತು ಕಳುಹಿಸಿದರು. ಅದೇ ಸಂದರ್ಭದಲ್ಲಿ ಮುನಿರತ್ನ ಧರಿಸಿದ್ದ ಆರ್‌ಎಸ್‌ಎಸ್ ಟೋಪಿಯನ್ನೂ ಕಿತ್ತುಹಾಕಲಾಯಿತು. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಈ ವರ್ತನೆ ತೋರಿದರೆನ್ನಲಾಗಿದೆ.. ಆ ವೇಳೆ ಗದ್ದಲ ಉಂಟಾಗಿ ಸಿಟ್ಟಿನಿಂದ ಪಾರ್ಕ್ ಹೊರಬಂದ ಮುನಿರತ್ನ ಧರಣಿಗೆ ಮುಂದಾದರು. ಬಳಿಕ ತಮಗೆ ಹಲ್ಲೆ ಮಾಡಲಾಗಿದೆ ಎಂದೂ ಆರೋಪಿಸಿ ಧಿಕ್ಕಾರ ಕೂಗಿದರು."ಶಾಸಕನಾದರೂ ನನಗೆ ಆಹ್ವಾನ ನೀಡಿಲ್ಲ.
ಎರಡು ಬಾರಿ ನನ್ನ ವಿರುದ್ಧ ಸೋತ ಅಭ್ಯರ್ಥಿ (ಕುಸುಮಾ ರವಿ) ಪರವಾಗಿ ಡಿಕೆಶಿ ಇದ್ದಾರೆ. ಅವರನ್ನು ಗೆಲ್ಲಿಸಲು ಇಷ್ಟು ಸರ್ಕಸ್ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಅನುದಾನವನ್ನೂ ಕಿತ್ತುಕೊಂಡಿದ್ದಾರೆ. ನನ್ನ ಸಾಯಿಸಲೂ ಯತ್ನಿಸುತ್ತಿದ್ದಾರೆ. ಇವತ್ತು ಪೊಲೀಸ್ ಇಲ್ಲ ಅಂದಿದ್ರೆ ನನ್ನ ಇಲ್ಲೇ ಕೊಲೆ ಮಾಡ್ತಿದ್ರು," ಎಂದು ಮುನಿರತ್ನ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಶಾಸಕರಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಹ್ವಾನ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಅದರೆ, ಡಿಸಿಎಂ ಯಾವ ಶಾಸಕರಿಗೂ ಆಹ್ವಾನ ನೀಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮೊದಲು ಖಡಕ್ ಆಗಿ ಇದ್ರು. ಆದರೆ, ಈಗ ಬದಲಾಗಿದ್ದಾರೆ. ಎಂದು ಟೀಕಿಸಿದರು.
ಜಮಾಯಿಸಿದ ಬಿಜೆಪಿ ಕಾರ್ಯಕರ್ತರು
ಬಳಿಕ ಮುನಿರತ್ನ ಅವರು ಗಾಂಧೀಜಿ ಭಾವಚಿತ್ರ ಹಿಡಿದು ಪ್ರತಿಭಟನೆಗೆ ಮುಂದಾದರು. ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರ್‌ಎಸ್‌ಎಸ್ ಗಣವೇಷದ ಟೋಪಿಯನ್ನು ಲಘುವಾಗಿ ತಮಾಷೆ ಮಾಡಿದ ಡಿ.ಕೆ. ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೆ ಮಾತನಾಡಿದ, ಮುನಿರತ್ನ, "ನಾನು ಅಮಿತ್ ಶಾ ಕಾಲು ಹಿಡಿದುಕೊಂಡಿಲ್ಲ. ಸದನದಲ್ಲಿ ಆರ್ ಎಸ್ ಎಸ್ ಗೀತೆ ಹೇಳಿಲ್ಲ," ಎಂದು ಡಿಕೆಶಿ ವಿರುದ್ಧ ವ್ಯಂಗ್ಯವಾಡಿದರು.
ಡಿಕೆಶಿ ಪ್ರತಿಕ್ರಿಯೆ
ಸಾರ್ವಜನಿಕರ ಜತೆ ತಾವು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಕ್ಕೆ ಮುನಿರತ್ನಂ ನಾಯ್ಡು ಮತ್ತವರ ಬೆಂಬಲಿಗರು ಅಡ್ಡಿಪಡಿಸಿದ ಬಗ್ಗೆ ಡಿಸಿಎಂ ಟೀಕಿಸಿದ್ದಾರೆ. "ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ" ಎಂದು ಹೇಳಿದರು.
"ಇಂತಹ ಪ್ರತಿನಿಧಿಯನ್ನು (ಮುನಿರತ್ನಂ ನಾಯ್ಡು) ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ" ಎಂದು ತಿಳಿಸಿದರು.