
ಮೃತ ಯುವಕ ಅನಂತು ಅಜಿ
ಆರ್‌ಎಸ್‌ಎಸ್ ಶಿಬಿರಗಳಲ್ಲಿ ಲೈಂಗಿಕ ಶೋಷಣೆ: ಕೇರಳ ಯುವಕನ ಡೆತ್ ನೋಟ್ನಲ್ಲಿ ಆರೋಪ
"ನಾನು ಅತ್ಯಾಚಾರದಿಂದ ಬದುಕುಳಿದವನು" ಎಂದು ಪ್ರಾರಂಭವಾಗುವ ಈ ಪತ್ರದಲ್ಲಿ, ಮೂರು-ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದಲೇ ಆರ್‌ಎಸ್‌ಎಸ್ ಸದಸ್ಯರು ತನ್ನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅನಂತು ಆರೋಪಿಸಿದ್ದಾರೆ.
ಕೇರಳದಲ್ಲಿ 26 ವರ್ಷದ ಯುವಕ ಅನಂತು ಅಜಿ ಅವರ ಆತ್ಮಹತ್ಯೆ ಪ್ರಕರಣವು ಇದೀಗ ರಾಷ್ಟ್ರಮಟ್ಟದಲ್ಲಿ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಸಾವಿಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಡೆತ್ ನೋಟ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಗಳಲ್ಲಿ ತಾನು ಅನುಭವಿಸಿದ ಲೈಂಗಿಕ ಶೋಷಣೆ ಬಗ್ಗೆ ಬಹಿರಂಗಪಡಿಸಿದ್ದಾರೆ.
ಗುರುವಾರ (ಅಕ್ಟೋಬರ್ 9) ತಿರುವನಂತಪುರಂನ ಟೂರಿಸ್ಟ್ ಹೋಂ ಒಂದರ ಕೋಣೆಯಲ್ಲಿ ಅನಂತು ಅಜಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ನಂತರ, ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ವಯಂಚಾಲಿತವಾಗಿ ಪ್ರಕಟವಾದ ಸುದೀರ್ಘ ಪತ್ರವು, ಇಡೀ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದೆ. "ನಾನು ಅತ್ಯಾಚಾರದಿಂದ ಬದುಕುಳಿದವನು" ಎಂದು ಪ್ರಾರಂಭವಾಗುವ ಈ ಪತ್ರದಲ್ಲಿ, ಮೂರು-ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದಲೇ ಆರ್‌ಎಸ್‌ಎಸ್ ಸದಸ್ಯರು ತನ್ನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅನಂತು ಆರೋಪಿಸಿದ್ದಾರೆ.
ತನ್ನ ಪತ್ರದಲ್ಲಿ, "NM" ಎಂದು ಗುರುತಿಸಲಾದ ನೆರೆಮನೆಯ ವ್ಯಕ್ತಿ, ಸಕ್ರಿಯ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತನಾಗಿದ್ದು, ಅವರಿಂದಲೇ ದೌರ್ಜನ್ಯ ಆರಂಭವಾಯಿತು ಎಂದು ಅನಂತು ವಿವರಿಸಿದ್ದಾರೆ. ಈ ದೌರ್ಜನ್ಯವು ಆರ್‌ಎಸ್‌ಎಸ್‌ನ ತರಬೇತಿ ಶಿಬಿರಗಳಾದ ಐಟಿಸಿ (ITC) ಮತ್ತು ಒಟಿಸಿ (OTC) ಗಳಲ್ಲೂ ಮುಂದುವರಿಯಿತು ಎಂದು ಅವರು ಆರೋಪಿಸಿದ್ದಾರೆ. ಈ ಲೈಂಗಿಕ ಶೋಷಣೆಯ ಆಘಾತದಿಂದ ತಾನು ತೀವ್ರ ಮಾನಸಿಕ ಖಿನ್ನತೆ ಮತ್ತು ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ಯಿಂದ ಬಳಲುತ್ತಿದ್ದು, ತನ್ನ ಸಾವಿಗೆ ಇದೇ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಕೋಲಾಹಲ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕೇರಳದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ಸೇರಿದಂತೆ ಹಲವು ಸಂಘಟನೆಗಳು, "ಇದು ಆರ್‌ಎಸ್‌ಎಸ್‌ನ ಅಮಾನವೀಯ ಮುಖವನ್ನು ಬಹಿರಂಗಪಡಿಸುತ್ತದೆ. ಇದರೊಳಗಿನ ಅಪರಾಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಬಂಧಿಸಬೇಕು," ಎಂದು ಆಗ್ರಹಿಸಿವೆ. ಪೊಲೀಸರು ಈ ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿನ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮುಂದಾಗಿದ್ದಾರೆ.
"ಪೋಷಕರು ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ನೀಡಬೇಕು, ನಾನು ಅನುಭವಿಸಿದ್ದನ್ನು ಬೇರೆ ಯಾವ ಮಗುವೂ ಅನುಭವಿಸಬಾರದು" ಎಂಬ ಅನಂತು ಮನವಿ ಮಾಡಿದ್ದಾರೆ.